ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ: 190 ಆಮ್ಲಜನಕ ಘಟಕಗಳ ಸ್ಥಾಪನೆ

ಅಣಕು ಕಾರ್ಯಾಚರಣೆ: ಸನ್ನದ್ದವಾಗಿರಲು ತರಬೇತಿ
Last Updated 3 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿರ್ವಹಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 224 ವೈದ್ಯಕೀಯ ಆಮ್ಲಜನಕ ತಯಾರಿಕಾ ಘಟಕಗಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಈಗಾಗಲೇ 190 ಘಟಕಗಳು ಸ್ಥಾಪನೆಗೊಂಡು, ಕಾರ್ಯಾರಂಭಕ್ಕೆ ಸಜ್ಜಾಗಿವೆ. ಇನ್ನೂ 34 ಘಟಕಗಳು ಸ್ಥಾಪನೆಯಾಗಿಲ್ಲ.

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಎಲ್ಲ ಘಟಕಗಳ ಕಾರ್ಯನಿರ್ವಹಣೆಯ ಕ್ಷಮತೆಯ ಬಗ್ಗೆ ಆರೋಗ್ಯ ಇಲಾಖೆ ಅಣಕು ಕಾರ್ಯಾಚರಣೆ (ಮಾಕ್ ಡ್ರಿಲ್‌) ಕೂಡಾ ಆರಂಭಿಸಿದೆ. ಆಮ್ಲಜನಕ ತಯಾರಿಕಾ ಘಟಕಗಳ ‘ಪ್ರೆಷರ್‌ ಸ್ವಿಂಗ್‌ ಅಬ್ಸಾರ್ಪಷನ್‌’ (ಪಿಎಸ್‌ಎ) ಅಂದರೆ, ಪ್ರತಿಯೊಬ್ಬ ರೋಗಿಯ ಹಾಸಿಗೆಗೆ ಅಗತ್ಯ ಪ್ರಮಾಣ, ಒತ್ತಡ ಮತ್ತು ಶುದ್ಧತೆಯ ಆಮ್ಲಜನಕ ಪೂರೈಕೆ ಆಗುತ್ತದೆಯೇ ಎಂಬುದರ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.

ಎರಡನೇ ಅಲೆ ವೇಳೆಯಲ್ಲಿ ಆಮ್ಲಜನಕ ನಿರ್ವಹಣೆಯೇ ದೊಡ್ಡ ಸಮಸ್ಯೆ ಆಗಿತ್ತು. ಮೂರನೇ ಅಲೆ ಕಾಣಿಸಿಕೊಂಡಲ್ಲಿ ಈ ಸಮಸ್ಯೆ ಆಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

‘ರಾಜ್ಯಕ್ಕೆ 262 ಆಮ್ಲಜನಕ ತಯಾರಿಕಾ ಘಟಕಗಳು ಹಂಚಿಕೆಯಾಗಿದ್ದವು. ಅವುಗಳಲ್ಲಿ 224 ಘಟಕಗಳ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ. 190 ಘಟಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ. ಇವುಗಳ ಒಟ್ಟು ಉತ್ಪಾದನಾ ಸಾಮರ್ಥ್ಯ 1,08,077 ಎಲ್‌ಎಂಪಿ (ಪ್ರತಿ ನಿಮಿಷಕ್ಕೆ ತಯಾರಾಗುವ ಲೀಟರ್‌ಗಳು), ದಿನಕ್ಕೆ 187 ಟನ್‌ಗಳಷ್ಟು ಆಮ್ಲಜನಕ ಉತ್ಪಾದನೆ ಮಾಡಬಹುದಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ಕಚೇರಿಯ ಮೂಲಗಳು ತಿಳಿಸಿವೆ.

ಔದ್ಯಮಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಡಿ ಆಮ್ಲಜನಕ ಘಟಕಗಳ ಸ್ಥಾಪನೆಗೆ ಹಣ ನೀಡುವುದಾಗಿ ಕೆಲವು ಸಂಸ್ಥೆಗಳು ಭರವಸೆ ನೀಡಿದ್ದವು. ಅದಿನ್ನೂ ಈಡೇರಿಲ್ಲ.ಆಮ್ಲಜನಕ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮೂರು ತಂಡಗಳಲ್ಲಿ 245 ಜನರಿಗೆ ತರಬೇತಿ ನೀಡಲಾಗಿದೆ. ಇನ್ನೂ ಐದು ತಂಡಗಳಿಗೆ ತರಬೇತಿ ನೀಡಲು ಕೌಶಲ ಅಭಿವೃದ್ಧಿ ಇಲಾಖೆಯ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಆರೋಗ್ಯ ಇಲಾಖೆ ಡಿಸೆಂಬರ್ ಮೊದಲ ವಾರದಲ್ಲಿ ಆಮ್ಲಜನಕ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ತಂತ್ರಜ್ಞರು, ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯರು, ನರ್ಸ್‌ಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಆನ್‌ಲೈನ್‌ ಮೂಲಕವೂ ತರಬೇತಿ ನೀಡಿದೆ.

‘ಸಮಸ್ಯೆ ನಿವಾರಣೆಗೆ ನಿರಂತರ ಯತ್ನ’

‘ಆಮ್ಲಜನಕ ಘಟಕಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಆಗಿಂದ್ದಾಗ್ಗೆ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕೆಲ ಘಟಕಗಳಲ್ಲಿ ಆಮ್ಲಜನಕದ ಶುದ್ಧತೆ, ಒತ್ತಡ, ಸಾಂದ್ರತೆಯ ಸಮಸ್ಯೆ ಇದೆ’ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

‘ನಗರದ ಆಸ್ಪತ್ರೆಯೊಂದರಲ್ಲಿ ಹೊಸ ಘಟಕದಲ್ಲಿ ಕಾರ್ಯಾಚರಣೆ ನಡೆಸಿದಾಗ ಸಂಜೆ 4ರವರೆಗೆ ಅಗತ್ಯ ಪ್ರಮಾಣದ ಆಮ್ಲಜನಕದ ಸಾಂದ್ರತೆ ಸಿಗಲಿಲ್ಲ. ಟ್ಯಾಂಕ್‌ನಲ್ಲಿನ ಹಳೆ ಆಮ್ಲಜನಕವನ್ನು ಖಾಲಿ ಮಾಡಿ, ಹೊಸ ಆಮ್ಲಜನಕ ಭರ್ತಿ ಮಾಡಬೇಕು. ಆಗಷ್ಟೇ ಅಗತ್ಯ ಪ್ರಮಾಣದ ಸಾಂದ್ರತೆ ಪಡೆಯಲು ಸಾಧ್ಯ. ಘಟಕಗಳಿಂದ ಶುದ್ಧ ಆಮ್ಲಜನಕ ಪಡೆಯಲು ಇರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುತ್ತಿದೆ. ಸಮಸ್ಯೆಗಳನ್ನು ಸರಿಪಡಿಸುವ ಯತ್ನ ನಡೆದಿದೆ’ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT