ಮಂಗಳವಾರ, ಮಾರ್ಚ್ 28, 2023
33 °C
ಕೋವಿಡ್‌: ಮೌನವಾಗಿ ನೋವು ಉಣ್ಣುತ್ತಿರುವ ಮಕ್ಕಳು

ಒಳನೋಟ: ಅನಾಥ ಮಕ್ಕಳಿಗೆ ಸಿಗದ ಆಸರೆ

ಕೆ.ಜೆ. ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಕೊರೊನಾ ಬಂದು ನರಳಿದ ಗಂಡನಿಗೆ ಸಕಾಲದಲ್ಲಿ ಚಿಕಿತ್ಸೆಯೂ ಸಿಗಲಿಲ್ಲ. ಕೊನೆಗೆ ಜೀವ ಉಳಿಸಿಕೊಳ್ಳಲೂ ಆಗಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಕಟ್ಟಿಕೊಂಡು ಬದುಕು ಹೇಗೆ ಸಾಗಿಸಲಿ, ಮಕ್ಕಳ ಜೀವನಕ್ಕೆ ಯಾರು ದಾರಿ ತೋರಿಸುತ್ತಾರೆ’ –ಹೀಗೆ ಪ್ರಶ್ನಿಸುತ್ತಲೇ ಶಿರಾ ತಾಲ್ಲೂಕು ಗೌಡಗೆರೆ ಗ್ರಾಮದ ಸರೋಜಮ್ಮ (ಹೆಸರು ಬದಲಿಸಲಾಗಿದೆ) ಕಣ್ಣೀರಾದರು.

‘ಗಂಡನನ್ನು ನಡು ದಾರಿಯಲ್ಲಿ ದೇವರು ಕಿತ್ತುಕೊಂಡ.ನನ್ನ ಜೀವನಕ್ಕೆ ಕಲ್ಲು ಬಿತ್ತು. ಮಕ್ಕಳಿಗೆ ಏನಾದರೂ ಮಾಡಬೇಕು. ಅವರಿಗೆ ಭವಿಷ್ಯ ರೂಪಿಸಬೇಕು. ಅದಕ್ಕಾಗಿ ಇನ್ನೂ ಜೀವ ಹಿಡಿದು ಬದುಕಿದ್ದೇನೆ’ ಎನ್ನುತ್ತ ಮುಂದಿನ ಜೀವನ ನೆನಪಿಸಿಕೊಂಡು ಕಣ್ಣೀರು ಒರೆಸಿಕೊಂಡರು.

ಇದು ಇವರೊಬ್ಬರ ಕತೆಯಲ್ಲ. ರಾಜ್ಯದಲ್ಲಿ ಇಂತಹ ಸಾವಿರಾರು ಮಹಿಳೆಯರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಅದರಲ್ಲೂ ತಂದೆ, ತಾಯಿ ಕಳೆದುಕೊಂಡ ಮಕ್ಕಳು ಮೌನವಾಗಿ ನೋವುಣ್ಣುತ್ತಿದ್ದಾರೆ. ಕೋವಿಡ್ ತಂದಿತ್ತ ನೋವು ಅಷ್ಟಿಷ್ಟಲ್ಲ. ಜೀವದ ಜತೆಗೆ ನೆಮ್ಮದಿಯ ಜೀವನವನ್ನೂ ಕಸಿದು ಕೊಂಡಿದೆ

ಕೋವಿಡ್ ಮೊದಲನೇ ಅಲೆಗಿಂತ ಎರಡನೇ ಅಲೆಯೇ ಹೆಚ್ಚು ಕಂಟಕ ತಂದಿಟ್ಟಿತ್ತು. ಮಧ್ಯ ವಯಸ್ಸಿನ, ದುಡಿಯುವ ತಂದೆ–ತಾಯಿಯನ್ನು ಮಕ್ಕಳಿಂದ ಕಸಿದುಕೊಂಡಿದೆ. ಕೆಲವರಿಗೆ ತಂದೆ–ತಾಯಿ ಇಬ್ಬರೂ ಇಲ್ಲವಾಗಿದ್ದು, ಅನಾಥರಾಗಿದ್ದಾರೆ. ರಾಜ್ಯದಲ್ಲಿ 216 ಮಕ್ಕಳು ತಮ್ಮನ್ನು ಸಾಕಿ ಸಲಹಬೇಕಿದ್ದವರನ್ನು ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಇನ್ನೂ ದೊಡ್ಡದಿರಬಹುದು. ಇನ್ನೂ ಹಲವರಿಗೆ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು (ಏಕ ಪೋಷಕರು) ಇದ್ದಾರೆ. ಅವರಲ್ಲಿ ಶೇ 90ರಷ್ಟು ಮಕ್ಕಳಿಗೆ ತಂದೆ ಇಲ್ಲ.

ಕೋವಿಡ್‌ನಿಂದ ಉಸಿರು ನಿಲ್ಲಿಸಿದವರಲ್ಲಿ ಬಹುತೇಕರು ಬಡ ಅಥವಾ ಕೆಳ ಮಧ್ಯಮ ವರ್ಗಕ್ಕೆ ಸೇರಿದವರು. ದಿನದ ದುಡಿಮೆ ನಂಬಿ ಬದುಕು ಕಟ್ಟಿಕೊಂಡವರು. ಅದರಲ್ಲೇ ಅಲ್ಪ ಸ್ವಲ್ಪ ಉಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಗಾರೆ ಕೆಲಸ, ಫ್ಯಾಕ್ಟರಿಯಲ್ಲಿ ದಿನಗೂಲಿ, ಎಪಿಎಂಸಿಗಳಲ್ಲಿ ಹಮಾಲಿಗಳಾಗಿದ್ದರು, ಕೃಷಿಕೂಲಿಕಾರರು, ಸಣ್ಣಪುಟ್ಟ ಕೆಲಸಮಾಡಿ ಬದುಕುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಶಾಲೆ, ಕಾಲೇಜಿಗೆ ಹೋಗಿ ಬದುಕು ರೂಪಿಸಿಕೊಳ್ಳುವ ಕನಸು ಕಾಣುತ್ತಿದ್ದ ಮಕ್ಕಳಿಗೆ ತಂದೆ ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ಆಡಿ, ಕುಣಿಯುವ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿ ಹೆಗಲೇರಿದೆ.

ಗಂಡನನ್ನು ಕಳೆದುಕೊಂಡ ಮಹಿಳೆಯರು ಹೊಟ್ಟೆ ಹೊರೆಯಲು ಕೂಲಿ ಮಾಡುತ್ತಿದ್ದಾರೆ. ಮಕ್ಕಳ ಓದು ಮುಂದುವರಿಸುವುದು ಕಷ್ಟವಾಗಿದ್ದು, ಮುಂದಿನ ದಾರಿ ತೋಚದೆ ಕಂಗಾಲಾಗಿದ್ದಾರೆ.

ತವರು ಮನೆಯತ್ತ ಹೆಜ್ಜೆ: ತಂದೆ–ತಾಯಿ ಕಳೆದುಕೊಂಡ ಮಕ್ಕಳು ಅಜ್ಜಿ, ತಾತ, ಚಿಕ್ಕಪ್ಪ, ದೊಡ್ಡಪ್ಪ ಇಲ್ಲವೇ ಸಂಬಂಧಿಗಳ ಬಳಿ ಆಸರೆ ಪಡೆದಿದ್ದಾರೆ. ಹಲವು ಮಹಿಳೆಯರು ಗಂಡನ ಮನೆ ತೊರೆದು ಮಕ್ಕಳ ಜತೆ ತವರು ಸೇರಿದ್ದಾರೆ.

ಗಂಡನ ಮನೆಯಲ್ಲಿ ತನ್ನದೆಂದು ಹೇಳಿಕೊಳ್ಳಲು ಏನೂ ಇಲ್ಲ. ಕೂಲಿ ಮಾಡಿಯೇ ಬದುಕಬೇಕು. ಅಲ್ಲಿದ್ದು ಇನ್ನೇನು ಮಾಡುವುದು ಎಂದು ತವರಿನತ್ತ ಮುಖ ಮಾಡಿದ್ದಾರೆ. ಅಲ್ಲಿ ಒಡಹುಟ್ಟಿದವರು, ತಂದೆ–ತಾಯಿ ಬೆಂಬಲಕ್ಕೆ ನಿಲ್ಲುತ್ತಾರೆ. ಇಲ್ಲಿ ಮಾಡುವ ಕೂಲಿಯನ್ನು ಅಲ್ಲೇ ಮಾಡಿ ಬದುಕಿದರಾಯಿತು ಎನ್ನುವ ಸ್ಥಿತಿ ತಲುಪಿದ್ದಾರೆ.

***
ಆಶ್ರಯ ನೀಡಿದ ದೊಡ್ಡಮ್ಮ

ಪಾಲಕರಿಬ್ಬರೂ ಇಲ್ಲವೆಂದಾಗ ಆಕಾಶ ಕಳಚಿಬಿದ್ದಷ್ಟು ಸಂಕಟವಾಗಿತ್ತು. ಈಗ ಆ ನೋವಿನಿಂದ ಹೊರಬಂದು ಚೆನ್ನಾಗಿ ಓದಿ ಸಾಧನೆ ಮಾಡಬೇಕು ಎಂಬ ಛಲ ಬಂದಿದೆ. ದೊಡ್ಡಮ್ಮನ ಮನೆಯವರೆಲ್ಲರ ಪ್ರೀತಿ, ವಾತ್ಸಲ್ಯ, ಕಾಳಜಿ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸರ್ಕಾರದ ಸೌಲಭ್ಯವೂ ನಿಗದಿತವಾಗಿ ಸಿಗುತ್ತಿದೆ.
ಪ್ರಥಮ ಪಿಯುಸಿ ಮುಗಿಸಿದ್ದು, ದ್ವಿತೀಯ ಪಿಯು ಚೆನ್ನಾಗಿ ಮಾಡಬೇಕು.

–ಹರ್ಷಿತಾ, ಮಂಗಳೂರು

***
ಆಸರೆಯಾದ ಅಜ್ಜಿ ಮನೆ

ಕೋವಿಡ್ ನನ್ನ ಅಮ್ಮನನ್ನು ಕಿತ್ತು ಕೊಂಡಿತು. ಆಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಬದುಕು ಕಷ್ಟವಾಗಿತ್ತು. ಆದರೆ, ನನ್ನ ಹತ್ತಿರದ ಸಂಬಂಧಿಕರ ಮನೆಯಲ್ಲಿ ಈಗ ಆಶ್ರಯ ಪಡೆದಿದ್ದೇನೆ. ವಸತಿ ಶಾಲೆಯಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ನನಗೆ ಅಲ್ಲಿ ಹೋಗಲು ಇಷ್ಟವಿಲ್ಲ. ಅಜ್ಜಿಯ ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಕಾಣುತ್ತಾರೆ.
ನೋವನ್ನು ಮರೆತು ಅಭ್ಯಾಸದಲ್ಲಿ ತೊಡಗುತ್ತಿದ್ದೇನೆ.

–ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ, ಮಂಗಳೂರು

****

ಅಪ್ಪ ಸತ್ತ ನಂತರ ವಸತಿ ಶಾಲೆಯೇ ಆಶ್ರಯ

ಕೋವಿಡ್‌ಗೆ ನನ್ನ ಅಪ್ಪ ಬಲಿಯಾದರು. ತಾಯಿ ಮೊದಲೇ ತೀರಿ ಹೋಗಿದ್ದರು. ಸರ್ಕಾರ ₹ 1 ಲಕ್ಷ ಪರಿಹಾರ ನೀಡಿದೆ. ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿದೆ. ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ. ಚೆನ್ನಾಗಿ ಓದಿ ಮುಂದೆ ಉದ್ಯೋಗಕ್ಕೆ ಸೇರುವ ಆಸೆ ಇದೆ.

–9ನೇ ತರಗತಿ ವಿದ್ಯಾರ್ಥಿ, ಚಿಕ್ಕಮಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು