ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಕರ್ನಾಟಕದಲ್ಲಿ ಐದು ಕೋಟಿ ದಾಟಿದ ಪರೀಕ್ಷೆಗಳು

ಗರಿಷ್ಠ ಪರೀಕ್ಷೆ ನಡೆಸಿದ ರಾಜ್ಯಗಳ ಸಾಲಿನಲ್ಲಿ ನಾಲ್ಕನೆ ಸ್ಥಾನ
Last Updated 24 ಅಕ್ಟೋಬರ್ 2021, 20:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ನಡೆಸಲಾದ ಒಟ್ಟು ಕೋವಿಡ್ ಪರೀಕ್ಷೆಗಳ ಸಂಖ್ಯೆ 5 ಕೋಟಿಯ ಗಡಿ ದಾಟಿದೆ. ದೇಶದಲ್ಲಿ ಗರಿಷ್ಠ ಪರೀಕ್ಷೆಗಳನ್ನು ನಡೆಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ ವರ್ಷ 1.41ಕೋಟಿಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ವರ್ಷ 3.59 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ. ಕೋವಿಡ್ ಪರೀಕ್ಷೆಯಲ್ಲಿ ಉತ್ತರ ಪ್ರದೇಶ (8.2 ಕೋಟಿ), ಮಹಾರಾಷ್ಟ್ರ (6.2 ಕೋಟಿ) ಹಾಗೂ ತಮಿಳುನಾಡು (5.01 ಕೋಟಿ) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಐದು ಕೋಟಿ ಪರೀಕ್ಷೆಗಳನ್ನು ನಡೆಸಿದ ನಾಲ್ಕನೇ ರಾಜ್ಯ ಕರ್ನಾಟಕವಾಗಿದೆ.

ರಾಜ್ಯದಲ್ಲಿ ನಡೆಸಲಾದ ಒಟ್ಟು ಕೋವಿಡ್ ಪರೀಕ್ಷೆಗಳಲ್ಲಿ ಶೇ 70 ರಷ್ಟು ಪರೀಕ್ಷೆಗಳನ್ನು ಆರ್‌ಟಿ–ಪಿಸಿಆರ್ ವಿಧಾನದ ಮೂಲಕ ನಡೆಸಲಾಗಿದೆ. ಶೇ 30 ರಷ್ಟು ಪರೀಕ್ಷೆಗಳನ್ನು ರ್‍ಯಾಪಿಡ್ ಆ್ಯಂಟಿಜೆನ್ ವಿಧಾನದಲ್ಲಿ ಮಾಡಲಾಗಿದೆ.

ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಾಗ ದಿನವೊಂದಕ್ಕೆ ನಡೆಸುವ ಪರೀಕ್ಷೆಗಳ ಸಂಖ್ಯೆಯು 1.90 ಲಕ್ಷದವರೆಗೂ ಏರಿಕೆ ಕಂಡಿತ್ತು. ಜೂನ್‌ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡರೂ ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿನಿತ್ಯ ಸರಾಸರಿ 1.50 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.

ಆಗಸ್ಟ್‌ ತಿಂಗಳಲ್ಲಿ 48.45 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇವು ಒಂದು ತಿಂಗಳ ಅವಧಿಯಲ್ಲಿ ಈವರೆಗೆ ನಡೆಸಲಾದ ಗರಿಷ್ಠ ಪರೀಕ್ಷೆಗಳಾಗಿವೆ.ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಸರಾಸರಿ 1.20 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಮಾದರಿ ಸಂಗ್ರಹ ಕೇಂದ್ರ: ‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲೂ ಕೋವಿಡ್ ಪರೀಕ್ಷೆಗೆ ಗಂಟಲು ದ್ರವಗಳ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. 654 ಖಾಸಗಿ ಸೇರಿದಂತೆ 3,626 ಮಾದರಿಗಳ ಸಂಗ್ರಹ ಕೇಂದ್ರಗಳು ರಾಜ್ಯದಲ್ಲಿವೆ. ರಾಜ್ಯದ ವಿವಿಧೆಡೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಸೋಂಕು ದೃಢ ಪ್ರಮಾಣಕ್ಕೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಕೋವಿಡ್ ಪರೀಕ್ಷೆಗೆ ಸಂಗ್ರಹಿಸಲಾದ ಮಾದರಿಗಳಲ್ಲಿ ಶೇ 70ರಷ್ಟು ಪರೀಕ್ಷೆಗಳನ್ನು ಸರ್ಕಾರಿ ಪ್ರಯೋಗಾಲಯಗಳಲ್ಲಿಯೇ ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಹೆಚ್ಚಿರುವ ಹಾಗೂ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ’ ಎಂದು ಇಲಾಖೆ ಪ್ರಕಟಣೆಯಲ್ಲಿ ವಿವರಿಸಿದೆ.

ಶೇ 20 ರಷ್ಟು ಪರೀಕ್ಷೆಮಕ್ಕಳಿಗೆ

ಸಂಭಾವ್ಯ ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುವ ಬಗ್ಗೆ ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದರು. ದಿನವೊಂದಕ್ಕೆ ನಡೆಸಲಾಗುವ ಒಟ್ಟು ಪರೀಕ್ಷೆಗಳಲ್ಲಿ ಶೇ 10 ರಷ್ಟು ಪರೀಕ್ಷೆಗಳನ್ನು 18 ವರ್ಷದೊಳಗಿನ ಮಕ್ಕಳಿಗೆ ನಡೆಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಶಿಫಾರಸು ಮಾಡಿದ್ದರು. ಹಾಗಾಗಿ, ಅ.31 ರಿಂದ ಸೆ.21ರವರೆಗೆ ನಡೆಸಲಾದ ಒಟ್ಟು ಕೋವಿಡ್ ಪರೀಕ್ಷೆಗಳಲ್ಲಿ ಶೇ 20.83 ರಷ್ಟು ಪರೀಕ್ಷೆಗಳನ್ನು 18 ವರ್ಷದೊಳಗಿನ ಮಕ್ಕಳಿಗೆಇಲಾಖೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT