ಶನಿವಾರ, ಡಿಸೆಂಬರ್ 4, 2021
20 °C

ಕೊರೊನಾ ಪುರುಷರನ್ನು ಕಾಡಿದ್ದೇ ಹೆಚ್ಚು: ಡಾ. ಜ್ಯೋತಿ ಹಳ್ಳದ ನಡೆಸಿದ ಅಧ್ಯಯನ

ಶಿವಕುಮಾರ ಹಳ್ಯಾಳ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್–19 ಸೋಂಕು ರಾಜ್ಯದಲ್ಲಿ ಪುರುಷರನ್ನೇ ಕಾಡಿದ್ದು ಹೆಚ್ಚು.

ಇಲ್ಲಿನ ಜೆಎಸ್‌ಎಸ್ ಆರ್ಥಿಕ ಸಂಶೋಧನಾ ಸಂಸ್ಥೆ ಮತ್ತು ಜನಸಂಖ್ಯಾ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ಜ್ಯೋತಿ ಹಳ್ಳದ ಅವರು ನಡೆಸಿದ ಅಧ್ಯಯನದಲ್ಲಿ ಇದು ಕಂಡುಬಂದಿದೆ.

ಕರ್ನಾಟಕದಲ್ಲಿ 20ರಿಂದ 49 ವಯೋಮಾನದ ಪುರುಷರಲ್ಲಿಯೇ ಹೆಚ್ಚಾಗಿ ಕೋವಿಡ್ ಸೋಂಕು ದೃಢಪಟ್ಟಿದೆ. ಮಾರ್ಚ್ 10ರಿಂದ ಜುಲೈ 20ರವರೆಗೆ ರಾಜ್ಯದಲ್ಲಿ ದಾಖಲಾದ 67,420 ಸೋಂಕಿತ ಪ್ರಕರಣಗಳಲ್ಲಿ ಪುರುಷರ ಸಂಖ್ಯೆ ಶೇ 63. 30ರಿಂದ 59 ವಯೋಮಾನದ ಸೋಂಕಿತರಲ್ಲಿ ಪುರುಷರ ಸಂಖ್ಯೆ ಶೇ 65ರಿಂದ 68, 30ರಿಂದ 39ರ ವಯೋಮಾನದವರಲ್ಲಿ ಶೇ 23, 20ರಿಂದ 29ರ ವಯೋಮಾನದಲ್ಲಿ ಶೇ 21 ಹಾಗೂ 40ರಿಂದ 49 ವಯೋಮಾನದವರಲ್ಲಿ ಶೇ 18ರಷ್ಟು ಪುರುಷರಲ್ಲಿ ಸೋಂಕು ದೃಢಪಟ್ಟಿದೆ.

‘ಜಿಲ್ಲಾವಾರು ಅಂಕಿ, ಅಂಶಗಳನ್ನು ಗಮನಿಸಿದಾಗ ಹಾವೇರಿ, ದಾವಣಗೆರೆ, ಗದಗ, ಕೊಡಗು, ಯಾದಗಿರಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ದಾಖಲಾದ ಕೋವಿಡ್ ಪ್ರಕರಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು. ಆದರೆ ಚಿತ್ರದುರ್ಗ, ಕೊಪ್ಪಳ, ತುಮಕೂರು, ದಕ್ಷಿಣ ಕನ್ನಡ, ಮೈಸೂರು, ಬಳ್ಳಾರಿ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಮಾಣ ಕಡಿಮೆ ಇದೆ’ ಎಂದು ವರದಿಯಲ್ಲಿದೆ.

‘ದಾವಣಗೆರೆ, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 60ಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. ಅದರಂತೆಯೇ ಯಾದಗಿರಿ, ಕಲಬುರ್ಗಿ, ರಾಯಚೂರು, ಉತ್ತರ ಕನ್ನಡ ಮತ್ತು ಬೀದರ ಜಿಲ್ಲೆಗಳಲ್ಲಿ 19 ವರ್ಷದೊಳಗಿನವರಲ್ಲಿ ಸೋಂಕು ಹೆಚ್ಚಾಗಿ ಕಂಡು ಬಂದಿದೆ’ ಎಂದು ಡಾ. ಜ್ಯೋತಿ ವಿವರಿಸಿದರು.

‘ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರಿಂದ ಸೋಂಕು ಹೆಚ್ಚಾಗಿ ಹರಡಿರುವುದು ಯಾದಗಿರಿ, ಉಡುಪಿ, ಕಲಬುರ್ಗಿ, ಮಂಡ್ಯ, ರಾಯಚೂರು, ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ಅಧಿಕ. ಹಾಗೆಯೇ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಧಾರವಾಡ, ಕೋಲಾರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಜ್ವರ, ನೆಗಡಿ, ಕೆಮ್ಮು (ಐಎಲ್‌ಐ) ಮತ್ತು ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಪ್ರಕರಣಗಳು ಹೆಚ್ಚು’ ಎಂದರು.

‘ಹೊರರಾಜ್ಯಗಳಿಂದ ಬಂದವರಿಂದ ಸೋಂಕು ಹರಡಿದ್ದು ಶೇ 9ರಷ್ಟು ಪ್ರಕರಣಗಳಲ್ಲಿ ಮಾತ್ರ. ಸೋಂಕಿತರ ಸಂಪರ್ಕಕ್ಕೆ ಬಂದ ಶೇ 15ರಷ್ಟು ಜನರಲ್ಲಿ ಕೊರೊನಾ ದೃಢಪಟ್ಟಿದೆ. ಒಟ್ಟು ಪ್ರಕರಣಗಳಲ್ಲಿ ಐಎಲ್‌ಐ ಪ್ರಕರಣ ಶೇ 17ರಷ್ಟು, ಉಸಿರಾಟದ ಸಮಸ್ಯೆಯ ಪ್ರಕರಣಗಳ ಸಂಖ್ಯೆ ಶೇ 3 ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಈವರೆಗೂ ಸಂಪರ್ಕ ಪತ್ತೆ ಮಾಡಲು ಸಾಧ್ಯವಾಗದ ಸಂಖ್ಯೆ ಶೇ 50’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು