ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ. 8ರಿಂದ ದಿನ 1.50 ಲಕ್ಷ ಮಂದಿಗೆ ಲಸಿಕೆ

ಎರಡು ತಿಂಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಡಾ.ಕೆ. ಸುಧಾಕರ್ ಮನವಿ
Last Updated 6 ಮಾರ್ಚ್ 2021, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಎರಡು ತಿಂಗಳು ನಿರ್ಣಾಯಕವಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಿದೆ. ಸೋಮವಾರದಿಂದ ಪ್ರತಿನಿತ್ಯ 1.50 ಲಕ್ಷ ಮಂದಿಗೆ ಲಸಿಕೆ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇಲಾಖೆಯ ಅಧಿಕಾರಿಗಳು ಹಾಗೂ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜತೆ ಶನಿವಾರ ಸಭೆ ನಡೆಸಿದ ಅವರು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ತಿಂಗಳು ನಮಗೆ ಹೆಚ್ಚಿನ ಸವಾಲುಗಳಿವೆ. ಕೋವಿಡ್ ಹರಡುವಿಕೆ ತಡೆಯಲು ಲಸಿಕೆ ಸಹಕಾರಿಯಾಗಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ 3 ಸಾವಿರ ಕಡೆ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ, ಕೋವಿಡ್ ಪರೀಕ್ಷೆಗಳನ್ನೂ ಹೆಚ್ಚಿಸಲಾಗುತ್ತದೆ’ ಎಂದು ಹೇಳಿದರು.

‘ಈ ಹಿಂದಿನಂತೆ ಒಬ್ಬ ಸೋಂಕಿತನಿಗೆ 20 ಸಂಪರ್ಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಬೇಕೆಂದು ಕೇಂದ್ರದ ನಿಯೋಗ ಸೂಚಿಸಿದೆ. ಅದರಂತೆ ಪತ್ತೆ ನಡೆಸಿ, ಅವರಿಗೂ ಪರೀಕ್ಷೆ ಮಾಡಲಾಗುವುದು. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆ ಎರಡು ರಾಜ್ಯಗಳ ಜತಗೆ ಗಡಿಯನ್ನು ಹಂಚಿಕೊಂಡಿರುವ ಕಾರಣ ನಮಗೆ ಕೂಡ ಸವಾಲುಗಳು ಎದುರಾಗಿವೆ’ ಎಂದರು.

ಸಮಾರಂಭಕ್ಕೆ 500 ಮಂದಿಗೆ ನಿರ್ಬಂಧ

‘ಮದುವೆ ಇನ್ನಿತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಬಾರದು. ಹೆಚ್ಚು ಜನರು ಪಾಲ್ಗೊಂಡು ಕ್ರಮ ಜರುಗಿಸುವಂತೆ ಗೃಹ ಇಲಾಖೆಗೆ ಮನವಿ ಮಾಡಲಾಗುವುದು’ ಎಂದು ಸುಧಾಕರ್‌ ಹೇಳಿದರು.

‘ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ಹೋರಾಟ ಸೇರಿದಂತೆ ವಿವಿಧ ಸಂದರ್ಭದಲ್ಲಿ ಜನ ಗುಂಪು ಸೇರಿದಂತೆ ನೋಡಿಕೊಳ್ಳಬೇಕಿದೆ. ಧಾರ್ಮಿಕ ಗುರುಗಳು, ರಾಜಕೀಯ ನೇತಾರರು, ಹೋರಾಟಗಾರರು, ರೈತ ಮುಖಂಡರು ಸೇರಿದಂತೆ ವಿವಿಧ ವರ್ಗದವರ ಸಹಕಾರ ಈ ಸಂದರ್ಭದಲ್ಲಿ ಅತ್ಯಗತ್ಯ ಎಂದರು.

‘ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲಿನ ಜಿಲ್ಲಾಡಳಿತಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT