ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದೇಶದಲ್ಲಿ ಸೋಂಕು: ಹಲವು ಅಲೆಗಳ ಆತಂಕ’-ಸುಧಾಕರ್ ಕಳವಳ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಳವಳ * 12–14 ವರ್ಷದ ಮಕ್ಕಳಿಗೆ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ
Last Updated 16 ಮಾರ್ಚ್ 2022, 16:28 IST
ಅಕ್ಷರ ಗಾತ್ರ

ಬೆಂಗಳೂರು: ‘ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದ್ದು, ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಕೊರೊನಾ ಸೋಂಕು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲವಾದ್ದರಿಂದ ಇನ್ನೂ ಹಲವು ಅಲೆಗಳು ಬರಬಹುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕಳವಳ ವ್ಯಕ್ತಪಡಿಸಿದರು.

12ರಿಂದ 14 ವರ್ಷದವರಿಗೆ‘ಕೊರ್ಬೆವ್ಯಾಕ್ಸ್’ ಲಸಿಕೆ ವಿತರಣೆಗೆ ಹಾಗೂ 60 ವರ್ಷಗಳು ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ವಿತರಿಸಲು ಸರ್ಕಾರ ಆರಂಭಿಸಿರುವ ಅಭಿಯಾನಕ್ಕೆ ಅವರು ನಗರದಲ್ಲಿ ಬುಧವಾರ ಚಾಲನೆ ನೀಡಿದರು.

‘ಕೋವಿಡ್ ಹೆಚ್ಚಾಗುತ್ತಿರುವ ದೇಶಗಳ ಹಾಗೂ ನಗರಗಳ ಪರಿಸ್ಥಿತಿಯನ್ನುಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ. ರೋಗ ನಿಯಂತ್ರಣದಲ್ಲಿ ಸಾಗಬೇಕಾದ ಹಾದಿ ಇನ್ನೂ ದೂರವಿದೆ. ಲಸಿಕೆ ವಿತರಣೆಯಿಂದ ಸೋಂಕು ಸದ್ಯ ನಿಯಂತ್ರಣಕ್ಕೆ ಬಂದಿದೆ. 12ರಿಂದ 14 ವರ್ಷದೊಳಗಿನ 20 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ’ ಎಂದರು.

‘ಕೋವಿಡ್ ಲಸಿಕೆ ಪಡೆದವರೂ ಮುಂಜಾಗ್ರತಾ ಕ್ರಮಗಳನ್ನು ಮರೆಯುವಂತಿಲ್ಲ. ರಾಜ್ಯದಲ್ಲಿ ಲಸಿಕೆಯ 10 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದೆ. ದೇಶದಲ್ಲಿ 180 ಕೋಟಿಗೂ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ. ಈ ಸಾಧನೆ ವಿಶ್ವಮಟ್ಟದಲ್ಲೇ ದೊಡ್ಡದು. ಈ ಹಿಂದೆ ನೀಡಲಾದ ಲಸಿಕೆಗಳು 4 ಕೋಟಿಯಿಂದ 5 ಕೋಟಿ ಡೋಸ್‌ಗಳಷ್ಟು ತಲುಪಿತ್ತು’ ಎಂದು ಹೇಳಿದರು.

‘12 ವರ್ಷದೊಳಗಿನ ಮಕ್ಕಳಿಗೂ ಮುಂದಿನ ದಿನಗಳಲ್ಲಿ ಲಸಿಕೆ ದೊರೆಯಲಿದೆ. ಎಲ್ಲ ಲಸಿಕೆಯನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನೆ ನಡೆಸಿ, ಪರವಾನಗಿ ದೊರೆತ ಬಳಿಕವೇ ನೀಡಲಾಗುತ್ತಿದೆ’ ಎಂದರು.

‘ಉಕ್ರೇನ್ ವಿದ್ಯಾರ್ಥಿಗಳಿಗೆ ನ್ಯಾಯ’

‘ಉಕ್ರೇನ್ ದೇಶದಿಂದ ಮರಳಿದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಕೇಂದ್ರ ಸರ್ಕಾರದ ಜತೆಗೂ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಈ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುತ್ತೇವೆ. ಅವರ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT