ಗುರುವಾರ , ಜನವರಿ 28, 2021
23 °C

ಕೋವಿಡ್: 263 ಕೇಂದ್ರಗಳಲ್ಲಿ ತಾಲೀಮು ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ 263 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಯ ತಾಲೀಮು (ಡ್ರೈ ರನ್) ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ಮೊದಲ ಹಂತದಲ್ಲಿ 5 ಜಿಲ್ಲೆಗಳಲ್ಲಿ ನಡೆಸಲಾಗಿದ್ದ ತಾಲೀಮಿನಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಬೆಂಗಳೂರಿನಲ್ಲಿ 4 ಹಾಗೂ ಬೆಳಗಾವಿ, ಮೈಸೂರು, ಕಲಬುರ್ಗಿ ಮತ್ತು ಶಿವಮೊಗ್ಗದಲ್ಲಿ ತಲಾ 3 ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಈ ಹಿಂದೆ ತಾಲೀಮು ನಡೆಸಲಾಗಿತ್ತು. ಎರಡನೇ ಹಂತದಲ್ಲಿ ರಾಜ್ಯದ 24 ಜಿಲ್ಲಾ ಆಸ್ಪತ್ರೆಗಳು, 20 ವೈದ್ಯಕೀಯ ಕಾಲೇಜುಗಳು, 43 ತಾಲ್ಲೂಕು ಆಸ್ಪತ್ರೆಗಳು, 31 ಸಮುದಾಯ ಆರೋಗ್ಯ ಕೇಂದ್ರಗಳು, 87 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 28 ಖಾಸಗಿ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 263 ಕಡೆ ಲಸಿಕೆ ವಿತರಣೆಯ ತಾಲೀಮು ನಡೆಸಲಾಯಿತು.

ಪ್ರತಿ ಕೇಂದ್ರದಲ್ಲಿ ಲಸಿಕೆ ಪಡೆಯಲು 25 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಲಸಿಕೆ ವಿತರಣೆಯ ತಾಲೀಮು ನಡೆಯಿತು. ಬಳಿಕ ಸಿಬ್ಬಂದಿಯು ಪೋರ್ಟಲ್‌ನಲ್ಲಿ ಮಾಹಿತಿ ನಮೂದು ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ನಡೆಸಿದರು. ಸ್ಥಳೀಯ ಶಾಸಕರು ಹಾಗೂ ಸಂಸದರು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ರಾಮನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವತಃ ತಾಲೀಮಿಗೆ ಒಳಗಾದರು.

ಮುಂದುವರಿದ ತಾಂತ್ರಿಕ ಸಮಸ್ಯೆ: ಕೇಂದ್ರಗಳಿಗೆ ಬಂದ ಫಲಾನುಭವಿಗಳ ದೇಹದ ಉಷ್ಣಾಂಶವನ್ನು ಪರಿಶೀಲಿಸಿ, ಒಳಗಡೆ ಕಳುಹಿಸಲಾಯಿತು. ಸೋಂಕು ನಿವಾರಕ ದ್ರಾವಣದಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡ ಬಳಿಕ ಆರೋಗ್ಯ ಕಾರ್ಯಕರ್ತರು ತಮ್ಮ ಪಾಳಿಗಾಗಿ ಕೊಠಡಿಯಲ್ಲಿ ಕಾಯಬೇಕಾಗಿತ್ತು. ಕಾಯುವ ಕೊಠಡಿಯಲ್ಲಿ ಐದರಿಂದ ಆರು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಲಸಿಕೆಯ ಹಾಕುವಿಕೆ ಪ್ರಕ್ರಿಯೆ ನಡೆದ ಬಳಿಕ ಅರ್ಧಗಂಟೆ ವೀಕ್ಷಣಾ ಕೊಠಡಿಯಲ್ಲಿ ಕುಳ್ಳಿರಿಸಲಾಯಿತು. ಅನಾರೋಗ್ಯ, ಮೊಬೈಲ್‌ಗೆ ಒಟಿಪಿ ಬರದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೆಲ ಆರೋಗ್ಯ ಕಾರ್ಯಕರ್ತರು ಗೈರಾಗಿದ್ದರು. ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜು, ಕಿಮ್ಸ್‌ ಸೇರಿದಂತೆ ವಿವಿಧೆಡೆ 9 ಗಂಟೆಗೆ ಪ್ರಾಂಭವಾಗಬೇಕಿದ್ದ ಪ್ರಕ್ರಿಯೆ ಒಂದು ಗಂಟೆ ತಡವಾಗಿ ಪ್ರಾರಂಭವಾಗಿತ್ತು.

ಈ ತಾಲೀಮಿನ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.