ಶನಿವಾರ, ಜೂನ್ 12, 2021
23 °C
ಕೋವಿನ್‌ನಲ್ಲಿ ಎಲ್ಲವೂ ಭರ್ತಿ

ಸಿಗದ ಲಸಿಕೆ: 80ರ ಹಿರೀಕರು ದಿನವಿಡೀ ಕಾಯುವುದು ತಪ್ಪಿಲ್ಲ, ಗೋಳು ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅವರೆಲ್ಲಾ 70–80 ವರ್ಷದ ಆಸುಪಾಸಿನವರು. ನೆತ್ತಿ ಸುಡುತ್ತಿದ್ದ ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತಿದ್ದರು. ತಮ್ಮನ್ನು ಈಗ ಒಳಗೆ ಬಿಡಬಹುದೇನೊ, ಇನ್ನರ್ಧ ಗಂಟೆಯಲ್ಲಿ ಕರೆಯಬಹುದೇನೋ ಎಂದು ಕಾಯುತ್ತಲೇ ಇದ್ದರು. ಹನ್ನೊಂದಾಯಿತು, ಹನ್ನೆರಡು ಗಂಟೆಯೂ ಕಳೆಯಿತು, ಅವರಸರದಿ ಬರಲೇ ಇಲ್ಲ! ‘ಲಸಿಕೆ ಇಲ್ಲಾರೀ’ಎಂದು ಸಿಬ್ಬಂದಿ ಹೇಳಿದಾಗ ನಿರಾಸೆಯಿಂದಲೇ ಮನೆಗಳತ್ತ ಹೊರಟರು.

ರಾಜಧಾನಿಯ ಕೆಲ ಆರೋಗ್ಯ ಕೇಂದ್ರಗಳ ಎದುರು ಸೋಮವಾರ ಕಂಡುಬಂದ ಸಾಮಾನ್ಯ ದೃಶ್ಯವಿದು.

ನಗರದಲ್ಲಿ ಹಲವೆಡೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಇದರ ನಡುವೆ ಲಸಿಕೆಯ ಕೊರತೆಯಾಗಿರುವುದು ಜನರನ್ನು ಚಿಂತೆಗೀಡು ಮಾಡಿದೆ.

ಊಟಕ್ಕೂ ಹೋಗಲಿಲ್ಲ: ಉಲ್ಲಾಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಲಸಿಕೆ ಪಡೆಯಲು ಬೆಳಿಗ್ಗೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು. 10 ಗಂಟೆಗೆ ಬಂದ ಸಿಬ್ಬಂದಿ ಇನ್ನೊಂದು ಗಂಟೆಯಲ್ಲಿ ಲಸಿಕೆ ಬರಲಿದೆ ಎಂದರು. ಇನ್ನೊಂದು ಗಂಟೆ ಬಿಟ್ಟು ಬಂದ ಅವರು ಮಧ್ಯಾಹ್ನ ಒಂದು ಗಂಟೆ ವೇಳೆಗೆ ತಲುಪುತ್ತದೆ ಎಂದರು. ಜನ ಕಾಯುತ್ತಲೇ ಇದ್ದರು. ಈಗಾಗಲೇ ಮೂರು ಗಂಟೆಯಾಗಿದೆ ಎಲ್ಲರೂ ಮನೆಗೆ ಹೋಗಿ ಊಟ ಮುಗಿಸಿಕೊಂಡು ಬಂದು ಬಿಡಿ ಎಂದರು. ಆದರೆ ಜನ ಕದಲಲಿಲ್ಲ. ಸಾಲು ಬಿಟ್ಟು ಹೋದರೆ ಮತ್ತೆ ಗಂಟೆಗಟ್ಟಲೆ ಕಾಯಬೇಕಾಗಬಹುದು ಎಂಬ ಭಯದಲ್ಲಿ ಕೆಲವರು ಮನೆಯಿಂದಲೇ ಊಟ ತರಿಸಿ ತಿಂದರು. ಆವಲಹಳ್ಳಿ ಆರೋಗ್ಯ ಕೇಂದ್ರದ ಎದುರೂ ಇದೇ ಪರಿಸ್ಥಿತಿ ಇತ್ತು.

‘ಲಸಿಕೆ ಪಡೆಯಲು ಬೆಳಿಗ್ಗೆಯೇ ಬಂದು ನಿಂತಿದ್ದೇನೆ. ಸಿಬ್ಬಂದಿ ಈಗ ಆಗ ಎಂದು ಹೇಳುತ್ತಲೇ ಇದ್ದಾರೆ. ಇಲ್ಲಿ ಇಷ್ಟೊಂದು ಜನ ಸೇರಿದ್ದಾರೆ. ಇವರಲ್ಲಿ ಯಾರಿಗಾದರು ಸೋಂಕು ತಗುಲಿದ್ದರೆ ಏನು ಮಾಡೋದು. ಲಸಿಕೆ ಪಡೆಯಲು ಬಂದು ಸೋಂಕು ಹತ್ತಿಸಿಕೊಂಡತ್ತಾಗುತ್ತದೆಯಲ್ಲವೇ. ನಮ್ಮಂತಹ ಹಿರಿಯರಿಗೆ ಇಲ್ಲಿ ಕೂರಲೂ ವ್ಯವಸ್ಥೆಯಿಲ್ಲ. ಬಾಯಾರಿದರೆ ನೀರು ಸಹ ಸಿಗುವುದಿಲ್ಲ’ ಎಂದು 82 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.

ಆನ್‌ಲೈನ್‌ನಲ್ಲೂ ಇಲ್ಲ: ಲಸಿಕೆ ಪಡೆಯಲು ದಿನಾಂಕ ಪೂರ್ವನಿಗದಿಗಾಗಿ ನೋಂದಾಯಿಸಿಕೊಳ್ಳಲು ಆನ್‌ಲೈನ್(ಕೋವಿನ್‌) ಮೂಲಕ ಪ್ರಯತ್ನಿಸಿದರೆ  ಮೇ ಅಂತ್ಯದವರೆಗೆ ಎಲ್ಲಿಯೂ ಖಾಲಿ ಇಲ್ಲ ಎಂಬ ಸಂದೇಶ ತೋರಿಸುತ್ತಿತ್ತು.

ಮಾಗಡಿ ರಸ್ತೆಯ ಕುಷ್ಠರೋಗ ಆಸ್ಪತ್ರೆ ಮತ್ತು ಬ್ಯಾಟರಾಯನಪುರದ ನಗರ ಆರೋಗ್ಯ ಕೇಂದ್ರ ಬಿಟ್ಟು ಉಳಿದೆಲ್ಲೂ ಮೇ 31ರವರೆಗೆ ಲಸಿಕೆ ಹಾಕಿಸಿಕೊಳ್ಳುವವರಿಗೆ ಅವಕಾಶವೇ ಕೋವಿನ್‌ನಲ್ಲಿ ತೆರೆದುಕೊಳ್ಳುತ್ತಿಲ್ಲ. ವಿಕ್ಟೋರಿಯಾ ಮತ್ತು ಕೆ.ಸಿ.ಜನರಲ್‌ ಆಸ್ಪತ್ರೆಗಳಲ್ಲಿ ಕೆಲವು ದಿನ ಮಾತ್ರ ಖಾಲಿ ಇದ್ದು,  ‘ಸ್ಲಾಟ್‌’ ತೆರೆದಿದ್ದರೂ ಅಲ್ಲಿ 15 ಮಂದಿಗಷ್ಟೇ ಅವಕಾಶ ಎಂದು ತೋರಿಸುತ್ತಿತ್ತು. ಕೆಲವರು ಎರಡನೇ ಡೋಸ್‌ ಪಡೆಯಬೇಕಾದ ಗಡುವು ಸಮೀಪಿಸುತ್ತಿದೆ. ಲಸಿಕೆಯೇ ಲಭ್ಯವಿಲ್ಲದಿರುವುದರಿಂದ ಅವರೆಲ್ಲಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಡೋಸ್‌ ಪಡೆಯದಿದ್ದರೆ ಏನಾಗಬಹುದೋ ಎಂಬ ಆತಂಕವೂ ಅವರನ್ನು ಆವರಿಸಿದೆ.

ಅಪಾಯಕ್ಕೆ ಆಹ್ವಾನ: ‍ರಾಜ್ಯದ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಮತ್ತು ಸೋಂಕಿತರಿಂದ ಮಾದರಿ ಸಂಗ್ರಹಿಸುವ ಕೌಂಟರ್‌ಗಳು ಅಕ್ಕಪಕ್ಕದಲ್ಲೇ ಇವೆ. ಅಂತಹ ಕೇಂದ್ರಗಳಿಗೆ ಲಸಿಕೆ ಪಡೆಯಲು ಹೋದವರಿಗೆ ಸೋಂಕು ತಗುಲುವ ಅಪಾಯ ಹೆಚ್ಚಿದೆ. ಸಿಬ್ಬಂದಿ ಕೂಡ ಆತಂಕದಲ್ಲೇ ಕೆಲಸ ನಿರ್ವಹಿಸಬೇಕಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಸೇರಿದಂತೆ ಬಹುತೇಕ‌ ಆಸ್ಪತ್ರೆಗಳಲ್ಲಿ ಮೊದಲ ಡೋಸ್‌ ಪಡೆಯಲು ಹೋದವರಿಗೆ ಲಸಿಕೆ ನೀಡಲಿಲ್ಲ. ‘ಎರಡನೇ ಡೋಸ್ ತೆಗೆದುಕೊಳ್ಳುತ್ತಿರುವವರಿಗೆ ಮಾತ್ರ ಲಸಿಕೆ ಕೊಡಬೇಕೆಂದು ಸರ್ಕಾರ ಆದೇಶಿಸಿದೆ’ ಎಂದು ಸಿಬ್ಬಂದಿ ಹೇಳಿದರು. ವಯಸ್ಸಾದವರು ಪರಿಪರಿಯಾಗಿ ಬೇಡಿದರೂ ಅವರು ಕಿವಿಗೊಡಲಿಲ್ಲ.

ಲಸಿಕೆ ಕೊರತೆ: ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಲಸಿಕೆಯ ಕೊರತೆ ಕಾಡುತ್ತಿದೆ. ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆಗಳಲ್ಲಿ 2ನೇ ಡೋಸ್‌ ಲಸಿಕೆ ನೀಡಿಕೆ ಚಾಲನೆಯಲ್ಲಿದೆ. ಬೆಳಗಾವಿ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಎದುರಾಗಿದೆ. ಗದಗ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್‌ ಲಸಿಕೆ ಇಲ್ಲ.

2ನೇ ಡೋಸ್‌ಗೆ ತೊಂದರೆಯಾಗಿಲ್ಲ: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ನೇ ಡೋಸ್‌ ಮಾತ್ರ ನೀಡಲಾಗುತ್ತಿದೆ.

ಎಲ್ಲಿ ಹೋಗುತ್ತಿದೆ ಲಸಿಕೆ?: ಸರ್ಕಾರ ಲಸಿಕೆಯ ವಿಚಾರದಲ್ಲಿ ಗಂಟೆಗೊಂದು ನಿರ್ಧಾರ ಪ್ರಕಟಿಸುತ್ತಿರುವುದರಿಂದ ಜನ ಗೊಂದಲಕ್ಕೀಡಾಗಿದ್ದಾರೆ. ನಮ್ಮಲ್ಲಿ 6 ಲಕ್ಷ, 8 ಲಕ್ಷ ಲಸಿಕೆ ದಾಸ್ತಾನು ಇದೆ ಎಂದು ಆರೋಗ್ಯ ಸಚಿವ ಸುಧಾಕರ್‌ ಹೇಳುತ್ತಲೇ ಬಂದಿದ್ದಾರೆ. ಇಷ್ಟಾದರೂ ಲಸಿಕೆಗಾಗಿ ಜನ ಪರದಾಡುವುದು ತಪ್ಪಿಲ್ಲ. 

‘ನಮ್ಮಲ್ಲಿ 5 ಲಕ್ಷಕ್ಕೂ ಅಧಿಕ ಡೋಸ್‌ ಲಭ್ಯವಿದೆ ಎಂದು ಸುಧಾಕರ್‌ ಹೇಳಿದ್ದಾರೆ. ಅವರ ಮಾತು ಕೇಳಿ ಲಸಿಕೆ ಪಡೆಯಲು ಬಂದರೆ ಸಿಬ್ಬಂದಿ ವಾಪಾಸ್‌ ಕಳುಹಿಸುತ್ತಿದ್ದಾರೆ. ಹಾಗಾದರೆ ಸಚಿವರು ಹೇಳಿದ 5 ಲಕ್ಷ ಡೋಸ್‌ ಎಲ್ಲಿ ಹೋಯಿತು’ ಎಂದು ವಿದ್ಯಾಪೀಠ ವೃತ್ತ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ರಮ್ಯಾ ಪ್ರಶ್ನಿಸಿದರು.

‘18 ರಿಂದ 44 ವರ್ಷದೊಳಗಿನವರಿಗೆ ಸೋಮವಾರದಿಂದ ಲಸಿಕೆ ನೀಡುವುದಾಗಿ ಹೇಳಿದ್ದ ಸಚಿವರು ಈಗ ರಾಗ ಬದಲಿಸಿದ್ದಾರೆ. ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಲಾಕ್‌ಡೌನ್‌ ಬಳಿಕ ಲಸಿಕೆ ನೀಡಲು ಚಿಂತಿಸುತ್ತಿದ್ದೇವೆ ಎಂದಿದ್ದಾರೆ. ಇದನ್ನು ಮೊದಲೇ ಹೇಳಿದ್ದರೆ ಮನೆಯಲ್ಲೇ ಇರುತ್ತಿದ್ದೇವಲ್ಲ’ ಎಂದು ಕೇಳಿದರು.

ಚಿಕ್ಕಬಳ್ಳಾಪುರಕ್ಕೇ ಅಧಿಕ ಡೋಸ್‌!: ಲಸಿಕೆ ಹಂಚಿಕೆ ವಿಚಾರದಲ್ಲಿ ಜಿಲ್ಲೆಗಳ ನಡುವೆ ಅಸಮಾನತೆ ಇರುವುದು ಸರ್ಕಾರದ ದತ್ತಾಂಶದಿಂದ ಬಹಿರಂಗಗೊಂಡಿದೆ.

ಆರೋಗ್ಯ ಸಚಿವರ ತವರು ಜಿಲ್ಲೆಯಾದ ಚಿಕ್ಕಬಳ್ಳಾಪುರಕ್ಕೆ ಆರು ದಿನಗಳಲ್ಲಿ 4,500 ಡೋಸ್‌ಗಳು ಹಂಚಿಕೆಯಾಗಿವೆ. ಇದೇ ಅವಧಿಯಲ್ಲಿ, ಅತಿ ಹೆಚ್ಚು ಕೋವಿಡ್ ಪ್ರಕರಣ ಹಾಗೂ ಸಾವು ಸಂಭವಿಸುತ್ತಿರುವ ಬಿಬಿಎಂಪಿ ವ್ಯಾಪ್ತಿಯ ಪ್ರದೇಶವೊಂದಕ್ಕೆ ಕೇವಲ 1,500 ಡೋಸ್‌ಗಳನ್ನು ನೀಡಲಾಗಿದೆ.

ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಡೋಸ್‌ ಕೊಡಲಾಗಿದೆ. ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಅಧಿಕ ಡೋಸ್‌ ಹಂಚಿಕೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು