ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ‘ಅವ್ವ ನಿತ್ಯ ಕಣ್ಮುಂದೆ ಬರುತ್ತಿದ್ದಾಳೆ..’

ಕೋವಿಡ್‌ನಿಂದ ತಾಯಿ ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳ ಅಳಲು
Last Updated 12 ಜೂನ್ 2021, 19:37 IST
ಅಕ್ಷರ ಗಾತ್ರ

ಬೀದರ್‌: ‘ನಮ್ಮದು ಬಡ ಕುಟುಂಬ. ಐದು ವರ್ಷಗಳ ಹಿಂದೆ ಅಪ್ಪ ಮೃತಪಟ್ಟಿದ್ದರು. ಅವ್ವ ಕೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದಳು. ನಾವು ಬೆಳಿಗ್ಗೆ ಹಾಸಿಗೆಯಿಂದ ಏಳುವಷ್ಟರಲ್ಲಿ ರೊಟ್ಟಿ ಮಾಡಿ ಇಡುತ್ತಿದ್ದಳು. ತಿಂಗಳ ಹಿಂದೆ ಕೋವಿಡ್‌ನಿಂದಾಗಿ ಅವಳೂ ಮೃತಪಟ್ಟಳು. ನಮ್ಮೊಂದಿಗೆ ಇಲ್ಲದಿದ್ದರೂ ನಿತ್ಯ ಕಣ್ಮುಂದೆಯೇ ಬರುತ್ತಿದ್ದಾಳೆ...’

ಹೃದಯಾಘಾತದಿಂದ ತಂದೆ ಹಾಗೂ ಈಗ ಕೋವಿಡ್‌ನಿಂದ ತಾಯಿಯನ್ನು ಕಳೆದುಕೊಂಡ ಹುಮನಾಬಾದ್ ತಾಲ್ಲೂಕಿನ ಹಣಕುಣಿ ಗ್ರಾಮದ ಅಶ್ವಿನಿ ಹಾಗೂ ಮಹಾನಂದಾ ಈ ಮಾತು ಹೇಳುತ್ತಾ ಭಾವುಕರಾದರು.

‘ಇದ್ದ ಒಂದಿಷ್ಟು ಹೊಲವನ್ನುಕಡು ಬಡತನದಿಂದಾಗಿ ತಂದೆ ಮಾರಿದರು. ಆದರೆ, ಉಳಿದುಕೊಳ್ಳಲು ಮಣ್ಣಿನ ಇಟ್ಟಿಗೆಯ ಮನೆ ಕಟ್ಟಿದ್ದಾರೆ. ಬಡತನ ಇದ್ದರೂ ತಂದೆ–ತಾಯಿ ಇಬ್ಬರೂ ಹೊಟ್ಟೆ, ಬಟ್ಟೆಗೆ ಕಡಿಮೆ ಮಾಡಿರಲಿಲ್ಲ. ತಂದೆ ಸಾವಿಗೀಡಾದ ಮೇಲೆ ಸಮಸ್ಯೆ ಹೆಚ್ಚಾಯಿತು. ಕೂಲಿ ಮಾಡದೆ ಮನೆಯ ಒಲೆ ಉರಿಯುತ್ತಿರಲಿಲ್ಲ. ತಾಯಿ ಕೂಲಿ ಮಾಡಿ ನನ್ನನ್ನು, ತಂಗಿಯನ್ನು ಸಾಕುತ್ತಿದ್ದಳು’ ಎನ್ನುತ್ತ ಮಹಾನಂದಾ ಅಳಲು ಆರಂಭಿಸಿದಳು.

ಅಶ್ವಿನಿ 7ನೇ ಹಾಗೂ ಮಹಾನಂದಾ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಬ್ಬರೂ ನಿರ್ಗತಿಕರಾದ ಮೇಲೆ ಅವರ ಸೋದರತ್ತೆ (ಅಪ್ಪನ ತಂಗಿ) ಇವರ ಮನೆಯಲ್ಲೇ ಉಳಿದುಕೊಂಡಿದ್ದಾರೆ. ತಂದೆ ತಿಪ್ಪಾರೆಡ್ಡಿ ರಚ್ಚರೆಡ್ಡಿ 2016ರಲ್ಲಿ 45ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. 33 ವರ್ಷದ ತಾಯಿ ಸುನೀತಾ ಇದೆ ವರ್ಷ ಮೇ 9ರಂದು ಮೃತಪಟ್ಟಿದ್ದಾರೆ.

‘ತಾಯಿ ದೈಹಿಕವಾಗಿ ಸ್ವಲ್ಪ ದುರ್ಬಲಳಾಗಿದ್ದಳು. ಕಷ್ಟಪಟ್ಟು ಕೂಲಿ ಮಾಡುತ್ತಿದ್ದಳು. ಒಂದು ದಿನ ಆಯಾಸಗೊಂಡು ಮನೆಗೆ ಬಂದಳು. ಜ್ವರ ಹಾಗೂ ಕೆಮ್ಮು ಇತ್ತು. ಹುಮನಾಬಾದ್‌ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಕೋವಿಡ್‌ ಇದೆ ಎಂದು ಹೇಳಿದರು. ಅಲ್ಲಿಂದ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ ಮೂರನೇ ದಿನ ಮೃತಪಟ್ಟಳು’ ಎಂದು ಹೇಳಿದರು.

‘ಅವ್ವ ಗುಣಮುಖಳಾಗಿ ಬರಬಹುದು ಎಂದು ಕಾಯುತ್ತಿದ್ದೆವು. ಅವಳು ಮತ್ತೆ ಬರಲಿಲ್ಲ. ಅವಳ ಶವ ಬಂದರೂ ಹತ್ತಿರಕ್ಕೆ ಹೋಗುವ ಸ್ಥಿತಿ ಇರಲಿಲ್ಲ. ಇಂತಹ ಪರಿಸ್ಥಿತಿ ಯಾವ ಮಕ್ಕಳಿಗೂ ಬರಬಾರದು’ ಎಂದಳು ಮಹಾನಂದಾ.

‘ಅವ್ವನ ಕಷ್ಟ ಕಣ್ಣಾರೆ ನೋಡಿದ್ದೇನೆ. ಒಳ್ಳೆಯ ಶಿಕ್ಷಣ ಪಡೆದು ಅವ್ವಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಆಗಾಗ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ. ಆಶಾ ಕಾರ್ಯಕರ್ತೆ ಮನೆಗೆ ಭೇಟಿ ಕೊಟ್ಟು ಹೋಗಿದ್ದಾರೆ. ಸದ್ಯಕ್ಕೆ ಮಕ್ಕಳ ರಕ್ಷಣಾ ಘಟಕದವರು ದಾನಿಗಳ ನೆರವಿನಿಂದ ಒಂದಿಷ್ಟು ಆಹಾರಧಾನ್ಯ ಕೊಟ್ಟು ಹೋಗಿದ್ದಾರೆ. ಒಂಟಿಯಾಗಿರುವ ಸೋದರತ್ತೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಾರಿ ಗೊತ್ತಿಲ್ಲ’ ಎಂದಳು.

‘ಈಗ ಇವರೇ ನನ್ನ ಮಕ್ಕಳು’

‘ನಾನು ಒಬ್ಬಳೇ ಇದ್ದೇನೆ. ಈ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ಅವರ ಮನೆಯಲ್ಲೇ ಉಳಿದು
ನೆರವಾಗುತ್ತಿದ್ದೇನೆ. ಕೆಲ ಅಧಿಕಾರಿಗಳು ಮನೆಗೆ ಬಂದು ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಭರವಸೆ ಕೊಟ್ಟಿದ್ದಾರೆ’ ಎಂದು ಬಾಲಕಿಯರ ಸೋದರತ್ತೆ ಲಕ್ಷ್ಮೀಬಾಯಿ ಹೇಳಿದರು.

‘ನಾನು ಹೊಲದಲ್ಲಿ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಹೊಲದ ಮಾಲೀಕರು ನಿತ್ಯ ₹ 200 ಕೂಲಿ ಕೊಡುತ್ತಾರೆ. ದೇವರು ಒಂದು ರೊಟ್ಟಿ ಕೊಟ್ಟರೂ ಮೂವರೂ ಹಂಚಿಕೊಂಡು ತಿನ್ನುತ್ತೇವೆ. ಅಣ್ಣನ ಮಕ್ಕಳು ಈಗ ನನ್ನ ಮಕ್ಕಳು. ಅವರೂ ಬಹಳ ಚಿಕ್ಕವರಿದ್ದಾರೆ. ಕೈಲಾದಷ್ಟು ಕಷ್ಟಪಟ್ಟು ಅವರಿಗೆ ಅನ್ನ ಹಾಕಲು ಪ್ರಯತ್ನಿಸುವೆ’ ಎಂದು ಹೇಳಿದರು.

* ಇಬ್ಬರೂ ಹೆಣ್ಣು ಮಕ್ಕಳು ಓದಿನಲ್ಲಿ ಚೆನ್ನಾಗಿದ್ದಾರೆ. ಶಿಕ್ಷಣ ಮುಂದುವರಿಸಲು ಅವರಿಗೆ ನೆರವಾಗಲುದಾನಿಗಳು ಮುಂದೆ ಬಂದರೆ ಅನುಕೂಲವಾಗಲಿದೆ.

-ಲಕ್ಷ್ಮೀಬಾಯಿ, ಬಾಲಕಿಯರ ಅತ್ತೆ

ರಾಜ್ಯದಲ್ಲಿ 42 ಮಕ್ಕಳು ಅನಾಥ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಹಲವು ಕುಟುಂಬಗಳ ಖುಷಿಯನ್ನು ಕಸಿದುಕೊಂಡಿದೆ. ಈ ಪಿಡುಗಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 42 ಮಂದಿ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರ ಬದುಕು ಡೋಲಾಯಮಾನವಾಗಿದೆ.

ರಾಯಚೂರಿನಲ್ಲಿ ನಾಲ್ವರು, ಬಾಗಲಕೋಟೆ, ಬೀದರ್‌, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ, ಕೊಡಗು ಹಾಗೂ ಕೋಲಾರ ಜಿಲ್ಲೆಗಳಲ್ಲಿ ತಲಾ ಮೂವರು, ಬೆಳಗಾವಿ, ಬೆಂಗಳೂರು ನಗರ, ಗದಗ, ಹಾಸನ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ತಲಾ ಒಬ್ಬರು ಮನೆಯ ಆಧಾರವಾಗಿದ್ದ ಅಪ್ಪ, ಅಮ್ಮನನ್ನು ಕಳೆದುಕೊಂಡಿದ್ದಾರೆ.

ಪಾಲಕರನ್ನು ಕಳೆದುಕೊಂಡವರ ಪೈಕಿ 20 ಮಂದಿ ಒಂಟಿ ಮಕ್ಕಳು. ಉಳಿದ 22 ಮಂದಿಗೆ ಒಡಹುಟ್ಟಿದವರು ಇದ್ದಾರೆ. ಸದ್ಯ ಈ ಮಕ್ಕಳು, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ ಸೇರಿದಂತೆ ಆಪ್ತರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

‘ಅನಾಥ ಮಕ್ಕಳಿಗೆ ಸರ್ಕಾರ ‘ಬಾಲಸೇವಾ ಯೋಜನೆ’ ಜಾರಿಗೆ ತರಲಿದ್ದು ಮಾಸಿಕ ₹3,500 ನೆರವು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. ಈ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ಒದಗಿಸಲು ಹಲವು ಮಠಗಳು, ಸಂಘ ಸಂಸ್ಥೆಗಳು ಮುಂದಾಗಿವೆ. ಸರ್ಕಾರ ನಡೆಸುವ ಆರೈಕೆ ಕೇಂದ್ರಗಳಿಗೆ ಸೇರಿಸಿದರೆ ಸರಿಯಾಗಿ ಗಮನಿಸುವುದಿಲ್ಲ ಎಂದು ಸಂಬಂಧಿಕರು ಹೆದರುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT