ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲಿಕೆಗೂ ಮೊದಲೇ ಬೀದಿಗಿಳಿದ ಜನರು: ಅಪಾಯ ಆಹ್ವಾನಿಸುವ ಉತ್ಸಾಹ

ಎಲ್ಲೆಡೆ ವಾಹನ ದಟ್ಟಣೆ
Last Updated 11 ಜೂನ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಘೋಷಣೆಗೆ ಕಾಯುತ್ತಾ ಕುಳಿತಂತಿದ್ದ ಜನರು ನಿರ್ಬಂಧ ತೆರವು ಅಧಿಕೃತವಾಗಿ ಜಾರಿಯಾಗುವ ಮುನ್ನವೇ ತಂಡೋಪತಂಡವಾಗಿ ರಸ್ತೆಗೆ ಇಳಿದಿದ್ದು ಶುಕ್ರವಾರ ರಾಜ್ಯದ ಹಲವು ಕಡೆಗಳಲ್ಲಿ ಕಂಡು ಬಂತು. ಎಲ್ಲ ದಿಕ್ಕುಗಳಲ್ಲಿ ವಾಹನಗಳ ದಟ್ಟಣೆ ಕಾಣಿಸಿದ್ದು ಜನರು ಪೈಪೋಟಿಗೆ ಬಿದ್ದವರಂತೆ ಓಡಾಟ ಆರಂಭಿಸಿದ್ದು, ಕೋವಿಡ್‌ ನಿಯಂತ್ರಣಕ್ಕೆ ಹಿನ್ನಡೆಯಾಗುವ ಆತಂಕಕ್ಕೆ ಕಾರಣವಾಗಿದೆ.

ಹೆಚ್ಚಿನ ಸಂಖ್ಯೆಯ ಸೋಂಕಿತರಿರುವ 11 ಜಿಲ್ಲೆಗಳಲ್ಲಿ ಇದೇ 21ರವರೆಗೆ ಲಾಕ್‌ಡೌನ್‌ ವಿಸ್ತರಿಸಿ, 20 ಜಿಲ್ಲೆಗಳಲ್ಲಿ ಇದೇ 14ರಿಂದ ಲಾಕ್‌ಡೌನ್‌ ಸಡಿಲಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಪ್ರಕಟಿಸಿದ್ದರು. ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ಆದರೆ, ಪ್ರಮುಖ ನಗರಗಳೂ ಸೇರಿದಂತೆ ಹಲವು ಕಡೆ ಶುಕ್ರವಾರವೇ ಲಾಕ್‌ಡೌನ್‌ ಸಡಿಲಿಕೆಯ ವಾತಾವರಣ ಕಂಡುಬಂತು.

ಹೊಸ ಮಾರ್ಗಸೂಚಿ ಜಾರಿಗೆ ಇನ್ನೂ ಎರಡು ದಿನ ಬಾಕಿ ಇದೆ. ಅದಕ್ಕೆ ಮುನ್ನವೇ ಹಲವು ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೂ ವ್ಯಾಪಾರ ವಹಿವಾಟು ನಡೆದಿದೆ. ಲಾಕ್‌ಡೌನ್‌ ನಿರ್ಬಂಧಗಳನ್ನು ಲೆಕ್ಕಿಸದೆ ಜನರು ಸಂಚರಿಸಿದ್ದಾರೆ. ಜನರ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದ್ದ ಪೊಲೀಸರು, ಜನರನ್ನು ನಿರ್ಬಂಧಿಸುವುದಕ್ಕೆ ಮುಂದಾಗಲಿಲ್ಲ. ಎಲ್ಲಿಯೂ ತಪಾಸಣೆ ಕಂಡುಬರಲಿಲ್ಲ. ಕೆಲವು ಮೇಲ್ಸೇತುವೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ ಗಳನ್ನು ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಕಂಡುಬಂತು. ಇವೆಲ್ಲವೂ ರಾಜ್ಯದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂಬ ಭೀತಿ ಹುಟ್ಟಿಸಿವೆ.

ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ಜನಸಂಚಾರ ಹೆಚ್ಚಾಗಿತ್ತು. ಪೀಣ್ಯ, ಟಿ. ದಾಸರಹಳ್ಳಿ, ಮೆಜೆಸ್ಟಿಕ್‌, ಚಾಮರಾಜಪೇಟೆ, ಶಿವಾಜಿನಗರ, ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ಸಂಚಾರ ದಟ್ಟಣೆ ಕಂಡುಬಂತು.

‘ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ಜನರು ಹೊರ ಬರುತ್ತಿದ್ದಾರೆ. ನಂತರ ಕೋವಿಡ್‌ ಲಸಿಕೆ ಪಡೆಯುವ ಕಾರಣ ನೀಡಿ ಇಡೀ ದಿನ ಓಡಾಡುತ್ತಿದ್ದಾರೆ. ವಾಹನಗಳ ಸಂಖ್ಯೆ ಜಾಸ್ತಿ ಇದ್ದಾಗ ಪೊಲೀಸ್‌ ಸಿಬ್ಬಂದಿ ವಿಚಾರಣೆ ನಡೆಸದೇ ಕಳುಹಿಸುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಲಬುರ್ಗಿ, ಬೀದರ್‌, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲೂ ಶುಕ್ರವಾರ ಬೆಳಿಗ್ಗೆಯಿಂದ ದೈನಂದಿನ ವ್ಯಾಪಾರ, ವಹಿವಾಟು ಬಿರುಸಾಗಿತ್ತು. ಕೆಲವೆಡೆ ಜನರು ಮಾಸ್ಕ್‌ ಧರಿಸದೆ, ಅಂತರ ಕಾಯ್ದುಕೊಳ್ಳದೇ ಖರೀದಿಗೆ ಮುಗಿಬಿದ್ದಿದ್ದರು. ಕಲಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಹೋಟೆಲ್‌, ಖಾನಾವಳಿಗಳಲ್ಲಿ ಜನರು ಕುಳಿತು ಊಟ ಮಾಡುತ್ತಿದ್ದರು. ಚಹಾ, ಪಾನ್‌ ಅಂಗಡಿಗಳೂ ತೆರೆದಿದ್ದವು. ಬಿಗಿ ಕ್ರಮ ಕೈಗೊಳ್ಳುವತ್ತ ಪೊಲೀಸರು ಆಸಕ್ತಿ ತೋರಲಿಲ್ಲ.

ಧಾರವಾಡ, ಗದಗ, ವಿಜಯಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಶುಕ್ರವಾರ ಹೆಚ್ಚಿನ ಸಂಖ್ಯೆಯ ಜನರು ರಸ್ತೆಗಿಳಿದಿದ್ದರು. ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ವಾಹನಗಳ ಸಂಚಾರದಲ್ಲಿ ಏರಿಕೆಯಾಗಿತ್ತು. ಕೆಲ ಸಮಯ ತಪಾಸಣೆ ನಡೆಸಿದ ಪೊಲೀಸರು, ಬಳಿಕ ಸುಮ್ಮನಾದರು. ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಪೊಲೀಸರು ಅರ್ಧದಷ್ಟು ಬ್ಯಾರಿಕೇಡ್‌ಗಳನ್ನು ತೆರೆವು ಮಾಡಿದ್ದರು.

ಕಿಂಡಿಯಲ್ಲಿ ಮದ್ಯ: ಬೆಂಗಳೂರು ನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರ ಮದ್ಯ ಮಾರಾಟವೂ ಜೋರಾಗಿತ್ತು. ಕೆಲವು ಮದ್ಯದಂಗಡಿಗಳಲ್ಲಿ ಬೆಳಿಗ್ಗೆ 10 ಗಂಟೆಯ ಬಳಿಕವೂ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದುದು ಕಂಡುಬಂತು.

ಬಿಗಿ ನಿಯಂತ್ರಣ:

ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ವಿಜಯನಗರ (ಹೊಸಪೇಟೆ), ಬಳ್ಳಾರಿ, ಕಾರವಾರ, ಶಿರಸಿ, ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಗಿ ನಿಯಂತ್ರಣ ಮುಂದುವರಿದಿತ್ತು.

ನಾಲ್ಕು ದಿನ ತಾಳ್ಮೆ ಇರಲಿ: ಬೊಮ್ಮಾಯಿ

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಈಗಷ್ಟೇ ನಿಯಂತ್ರಣಕ್ಕೆ ಬರುತ್ತಿದೆ. ಲಾಕ್‌ಡೌನ್‌ ಸಡಿಲಿಕೆ ನಿರ್ಧಾರದ ಬೆನ್ನಲ್ಲೇ ಜನರು ರಸ್ತೆಗೆ ಇಳಿಯಬಾರದು. ನಾಲ್ಕು ದಿನ ತಾಳ್ಮೆಯಿಂದ ಇರಬೇಕು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೆಲವು ಜಿಲ್ಲೆಗಳಲ್ಲಿ ಇದೇ 14ರ ಬಳಿಕ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಆಗಲಿದೆ. ಈಗಲೇ ಜನರು ಲಾಕ್‌ಡೌನ್‌ ಅಂತ್ಯಗೊಂಡಿದೆ ಎಂಬಂತೆ ರಸ್ತೆಗೆ ಇಳಿಯುತ್ತಿರುವುದು ಸರಿಯಲ್ಲ’ ಎಂದರು.

‘ಮುಖ್ಯಮಂತ್ರಿ ಪ್ರಕಟಿಸಿರುವ ತೀರ್ಮಾನಗಳು ಸೋಮವಾರದಿಂದ ಜಾರಿಗೆ ಬರಲಿವೆ. ಆದರೆ, ಶುಕ್ರವಾರದಿಂದಲೇ ಹೊಸ ಮಾರ್ಗಸೂಚಿ ಜಾರಿಯಾಗಿದೆ ಎಂದು ಕೆಲವರು ಭಾವಿಸಿದಂತಿದೆ. ಅನಗತ್ಯವಾಗಿ ಯಾರೂ ರಸ್ತೆಗೆ ಇಳಿಯಬಾರದು. ಪೊಲೀಸರು ಬಲ ಪ್ರಯೋಗ ಮಾಡುವುದಕ್ಕೆ ಅವಕಾಶ ಕಲ್ಪಿಸಬಾರದು’ ಎಂದು ಹೇಳಿದರು.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಯಾವುದೇ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಿಲ್ಲ. ಲಾಕ್‌ಡೌನ್‌ ಜಾರಿಯಾದ ಬಳಿಕ ಹೊರ ಜಿಲ್ಲೆಗಳಿಗೆ ತೆರಳಿದ್ದ ಬೃಹತ್‌ ಸಂಖ್ಯೆಯ ಜನರು ನಗರಕ್ಕೆ ವಾಪಸಾಗಲಿದ್ದಾರೆ. ಈ ಕಾರಣದಿಂದ ಬಸ್‌ ನಿಲ್ದಾಣ, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

‘ಈಗ ಮೈಮರೆತರೆ ಮತ್ತೆ ಅಪಾಯ’

‘ಕೋವಿಡ್ ಮೊದಲನೇ ಅಲೆಯ ಬಳಿಕ ಜನತೆ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಸಭೆ–ಸಮಾರಂಭಗಳನ್ನು ನಡೆಸಿದರು. ಆಗ ಮಾಡಿದ ತಪ್ಪುಗಳು, ನಿರ್ಲಕ್ಷ್ಯದಿಂದ ಏನಾಯಿತು ಎಂಬುದನ್ನು ನೋಡಿದ್ದೇವೆ. ಮೂರನೇ ಅಲೆ ನವೆಂಬರ್–ಡಿಸೆಂಬರ್‌ನಲ್ಲಿ ಬರುವ ಸಾಧ್ಯತೆಯಿದೆ. ಈಗ ಲಾಕ್‌ಡೌನ್‌ ಸಡಿಲಗೊಳಿಸುತ್ತಿರುವ ಕಾರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯವಾಗಿ ಗುಂಪು ಸೇರುವುದು, ಓಡಾಡುವುದು ಮಾಡಬಾರದು. ಜ್ವರ, ಕೆಮ್ಮು ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡಾಗ ಹಾಗೂ ಊರುಗಳಿಂದ ನಗರ ಪ್ರದೇಶಕ್ಕೆ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು.’

-ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್

‘ಎಚ್ಚರ ತಪ್ಪಿದಲ್ಲಿ ಮತ್ತೆ ಆಮಂತ್ರಣ’

‘ಕೋವಿಡ್ ಮೊದಲ ಅಲೆಯಲ್ಲಿ ಮಾಡಿದ ತಪ್ಪಿನಿಂದ ಎರಡನೇ ಅಲೆಯಲ್ಲಿ ಗಂಡಾಂತರ ಎದುರಿಸಬೇಕಾಯಿತು. ಜನರ ನಿರ್ಲಕ್ಷ್ಯದಿಂದಲೇ ಎರಡನೇ ಅಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಿತು. ಈ ಮೊದಲು ಮಾಡಿದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು. ಗುಂಪಾಗಿ ಸೇರದಿರುವುದು, ಮುಖಗವುಸನ್ನು ಸರಿಯಾದ ಕ್ರಮದಲ್ಲಿ ಧರಿಸುವುದು, ಸೋಂಕುನಿವಾರಕ ದ್ರಾವಣದಿಂದ ಕೈಗಳನ್ನು ಸ್ವಚ್ಛಪಡಿಸಿಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಈ ವೇಳೆ ಎಚ್ಚರ ತಪ್ಪಿದರೆ ಮತ್ತೆ ಕೋವಿಡ್‌ಗೆ ಆಮಂತ್ರಣ ನೀಡಿದಂತಾಗುತ್ತದೆ. ಸಭೆ–ಸಮಾರಂಭಗಳನ್ನು ಸದ್ಯ ನಡೆಸಬಾರದು.’

-ಡಾ.ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ

‘ಎಚ್ಚರಿಕೆ ಅಗತ್ಯ’:

‘ಲಾಕ್‌ಡೌನ್‌ ಸಡಿಲಿಕೆ ಆದ ಮಾತ್ರಕ್ಕೆ ಕೊರೊನಾ ವೈರಾಣು ಸೋಂಕು ರಾಜ್ಯದಲ್ಲಿ ಸಂಪೂರ್ಣ ಹತೋಟಿಗೆ ಬಂದಿದೆ ಎಂದು ಭಾವಿಸಿ ಜನರು ಮೈಮರೆಯಬಾರದು. ಎರಡು ಡೋಸ್‌ ಲಸಿಕೆ ಪಡೆದವರು ಕೂಡ ಎಚ್ಚರಿಕೆಯಿಂದ ಇರಲೇಬೇಕು. ರಾಜ್ಯದ ಶೇಕಡ 70ರಷ್ಟು ಜನರು ಲಸಿಕೆ ಪಡೆಯುವವರೆಗೂ ತೀವ್ರ ಎಚ್ಚರಿಕೆ ಅಗತ್ಯ’

-ಡಾ.ಕೆ. ಸುಧಾಕರ್‌,ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT