ಬುಧವಾರ, ಜನವರಿ 19, 2022
23 °C

ಕೋವಿಡ್‌: ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ಎರಡು ಓಮೈಕ್ರಾನ್‌ ಪ್ರಕರಣಗಳು ಕರ್ನಾಟಕ ಪತ್ತೆಯಾಗಿರುವ ಬೆನ್ನಲ್ಲೆ, ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಓಮೈಕ್ರಾನ್‌ ಪ್ರಕರಣ ಪತ್ತೆಯಾಗಿರುವುದನ್ನು ಕೇಂದ್ರ ಸರ್ಕಾರ ದೃಢ ಪಡಿಸಿದೆ. ಆದರೆ, ವಿವರವಾದ ಪರೀಕ್ಷಾ ವರದಿ ಬಂದಿಲ್ಲ. ಪ್ರಕರಣಗಳ ಸಂಪೂರ್ಣ ವಿವರ ಪಡೆಯುವಂತೆ ರಾಜ್ಯದ ಆರೋಗ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಹೊಸ ಹೊಸ ತಳಿಗಳಿಂದ ಸೋಂಕು ಹರಡುವುದನ್ನು ನಿಯಂತ್ರಿಸುವ ಕುರಿತು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದರು.

ಯಾರಿಗೂ ಆತಂಕ ಬೇಡ– ಸಚಿವ ಸುಧಾಕರ್: ‘ಓಮೈಕ್ರಾನ್‌ ಸೋಂಕಿತರ ರೋಗ ಲಕ್ಷಣಗಳು ಲಘು ಪ್ರಮಾಣದ್ದಾಗಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ‘ಡೆಲ್ಟಾ ವೈರಾಣು ತೀವ್ರ ಸ್ವರೂಪದ್ದಾಗಿತ್ತು. ಅದಕ್ಕೆ ಹೋಲಿಸಿದಾಗ ಇದು ಗಂಭೀರ ಸ್ವರೂಪದ್ದಾಗಿ ಕಾಣುತ್ತಿಲ್ಲ. ಆದರೆ, ಅದು ಹೇಗೆ ಹರಡುತ್ತದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಸಾರ್ವಜನಿಕರು ದೊಡ್ಡ ಸಭೆಗಳಲ್ಲಿ ಭಾಗವಹಿಸುವುದನ್ನು ಬಿಡಬೇಕು. ಗುಂಪು ಸೇರಬಾರದು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು