ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರು ಅನಾವಶ್ಯಕ ಗುಂಪು ಸೇರುವಿಕೆಗೆ ಕಡಿವಾಣ: ಡಾ.ಕೆ.ಸುಧಾಕರ್

Last Updated 14 ಏಪ್ರಿಲ್ 2021, 6:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ನಿಯಂತ್ರಿಸಲು ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಲ್ಲಿಸಬೇಕು. ಜನರು ಸೇರುವ ಸ್ಥಳಗಳಲ್ಲಿ ಕಡಿವಾಣ ಹಾಕಲು ನಿರ್ಧರಿಸಿದ್ದೇವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಆ ಎಲ್ಲ ವಿಚಾರಗಳನ್ನು ತಿಳಿಸುತ್ತೇವೆ’ ಎಂದರು.

‘ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಸಿದ್ಧ ಮಾಡುತ್ತಿದ್ದೇವೆ. ಲಸಿಕೆ ಹೆಚ್ಚಳ ಮಾಡುತ್ತಿದ್ದೇವೆ. ಇದೇ 18ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಸಾಂಕ್ರಾಮಿಕ ರೋಗ ಹರಡುವಿಕೆ ಕುರಿತು ಚರ್ಚಿಸಲು ಸಭೆ ನಡೆಸಲಾಗುತ್ತಿದೆ. ಹೀಗಾಗಿ, ರಾಜಕೀಯವನ್ನು ಮರೆತು ಎಲ್ಲರೂ ಭಾಗಿಯಾಗಬೇಕು. ಕೊರೊನಾ ನಿಯಂತ್ರಣ ಕುರಿತು ಮುಖ್ಯಮಂತ್ರಿಗೆ ಎಲ್ಲರೂ ಸಲಹೆ ನೀಡಬೇಕಿದೆ’ ಎಂದರು.

‘ಕೊರೊನಾ ವಿಚಾರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ. ಸಾವಿನ‌ ಪ್ರಮಾಣ ಕೂಡಾ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತಷ್ಟು ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಮಾರ್ಮಿಕವಾಗಿ ಹೇಳಿದ್ದಾರೆ’ ಎಂದರು.

‘ಕೊರೊನಾ ನಿಯಂತ್ರಣ ಕೇವಲ ಸರ್ಕಾರ ಮಾಡುವ ಕೆಲಸ ಅಲ್ಲ. ಮಹಾರಾಷ್ಟ್ರದಲ್ಲೂ ಕೂಡಾ ಬಹಳಷ್ಟು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 7ರ ಆಸುಪಾಸಿನಲ್ಲಿದೆ. ಜನತಾ ಕರ್ಫ್ಯೂ, ಸ್ವಯಂ ವಿಧಿಸಿಕೊಳ್ಳುವ ಕರ್ಫ್ಯೂ’ ಎಂದರು.

‘ಐಸಿಯುಗಳು ಮುಗಿದು ಹೋಗಿದೆ ಅಂದರೆ ಅದು ತಪ್ಪು. ಅದನ್ನು ನಾನು ಹೇಳಲು ಹೋಗುವುದಿಲ್ಲ. ಅನೇಕ ಐಸಿಯು ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗುತ್ತಿದ್ದಾರೆ. ಖಾಸಗಿ ವಲಯದಲ್ಲಿ ಅನೇಕ ಆಸ್ಪತ್ರೆಗಳಿವೆ. ಇದರ ಅಂಕಿಅಂಶ ಕೊಡುತ್ತೇವೆ’ ಎಂದೂ ಹೇಳಿದರು.

ಲಾಕ್‌ಡೌನ್ ಹೇರಿದರೆ ಮತ್ತಷ್ಟು ಸಮಸ್ಯೆ: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ‘ಸರ್ಕಾರವೂ ಸಂಕಷ್ಟದಲ್ಲಿದೆ, ಜನರೂ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಲಾಕ್‌ಡೌನ್ ಹೇರಿದರೆ ಮತ್ತಷ್ಟು ಸಮಸ್ಯೆ. ವ್ಯಾಪಾರಿಗಳಿಗೆ, ಜನರಿಗೆ ಸಂಕಷ್ಟ ಎದುರಾಗಲಿದೆ. ಲಾಕ್‌ಡೌನ್ ಒಂದೇ ಪರಿಹಾರ ಅಲ್ಲ. ಮುಖ್ಯಮಂತ್ರಿ ಕೂಡ ಇದನ್ನೇ ಹೇಳಿದ್ದಾರೆ. ಜನ ಸ್ವಯಂ ನಿಯಂತ್ರಣ ಮಾಡಬೇಕು. ಕೋವಿಡ್ ನಿಯಮ‌ ಪಾಲನೆ ಮಾಡಬೇಕು. ಕರ್ಫ್ಯೂ ಅಥವಾ ಲಾಕ್‌ಡೌನ್ ಬಗ್ಗೆ ಸರ್ವಪಕ್ಷಗಳ ನಾಯಕರ ಜೊತೆ ಸಭೆಯ ನಂತರ ತೀರ್ಮಾನಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT