ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ: ಕೈ ಸುಡುವ ಪಟಾಕಿ | ಹೊಸೂರಿನ ಪಟಾಕಿ ಸಂತೆಯಲ್ಲಿ ವಹಿವಾಟು ಮಂಕು

ಹೊಸೂರಿನ ಪಟಾಕಿ ಸಂತೆಯಲ್ಲಿ ವಹಿವಾಟು ಮಂಕು
Last Updated 22 ಅಕ್ಟೋಬರ್ 2022, 19:37 IST
ಅಕ್ಷರ ಗಾತ್ರ

ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಏರಿಕೆ, ನಿರಂತರವಾಗಿ ಸುರಿದ ಮಳೆ ಈ ಬಾರಿಯ ಪಟಾಕಿ ಸದ್ದನ್ನು ಕೊಂಚ ಕಡಿಮೆಯಾಗಿಸುವ ಸಾಧ್ಯತೆ ಇದೆ. ಪಟಾಕಿಗಳ ಬೆಲೆ ಶೇ 70ರಷ್ಟು ಹೆಚ್ಚಾಗಿದ್ದು, ವರ್ಷವಿಡೀ ಪಟಾಕಿ ಸಂತೆ ನಡೆಯುವ ಹೊಸೂರಿನಲ್ಲೂ ವಹಿವಾಟು ಕುಸಿಯುವಂತಾಗಿದೆ.

ದೀಪಾವಳಿ ಪಟಾಕಿ ಎಂದ ಕೂಡಲೇ ಹೊಸೂರು ಮತ್ತು ಅತ್ತಿಬೆಲೆ ಸುತ್ತಮುತ್ತಲ ಪಟಾಕಿ ಅಂಗಡಿಗಳು ನೆನಪಾಗುತ್ತವೆ. ಈ ಬಾರಿಯೂ ಹೊಸೂರು ರಸ್ತೆಯುದ್ದಕ್ಕೂ ಪಟಾಕಿ ಅಂಗಡಿಗಳು ತಲೆ ಎತ್ತಿವೆ. ಬೆಂಗಳೂರಿನಿಂದ ಹೊಸೂರು ಕಡೆಗೆ ಹೊರಟರೆ ಹೆಬ್ಬಗೋಡಿಯಿಂದಲೇ ಪಟಾಕಿ ಅಂಗಡಿಗಳು ಕಣ್ಣಿಗೆ ರಾಚುತ್ತವೆ. ಅತ್ತಿಬೆಲೆ ಬಳಿ ಇರುವ ಕರ್ನಾಟಕ ಮತ್ತು ತಮಿಳುನಾಡು ಗಡಿಯ ಬಳಿ ನೂರಾರು ತಾತ್ಕಾಲಿಕ ಅಂಗಡಿ ಮಳಿಗೆಗಳು ತೆರೆದುಕೊಂಡಿವೆ.

ಅತ್ತಿಬೆಲೆ ಬಳಿಯ ಕರ್ನಾಟಕದ ಗಡಿಯಲ್ಲಿ ಹಬ್ಬದ ಸಂದರ್ಭದಲ್ಲಷ್ಟೇ ವ್ಯಾಪಾರ ನಡೆಸುವ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದ್ದರೆ, ತಮಿಳುನಾಡು ಭಾಗದಲ್ಲಿ ವರ್ಷವಿಡೀ ವಹಿವಾಟು ನಡೆಸುವ ಶಾಶ್ವತ ಅಂಗಡಿಗಳಿವೆ. ಒಟ್ಟಾರೆ 300ಕ್ಕೂ ಹೆಚ್ಚು ಅಂಗಡಿಗಳಿದ್ದು, ಎಲ್ಲಾ ಅಂಗಡಿಗಳಿಗೂ ಶಿವಕಾಶಿಯಿಂದಲೇ ಪಟಾಕಿ ಸರಬರಾಜಾಗುತ್ತಿದೆ. ಶಿವಕಾಶಿಯಲ್ಲಿ ಪಟಾಕಿ ತಯಾರಿಕಾ ಘಟಕ ಹೊಂದಿದವರೂ ಇಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದ್ದಾರೆ.

ಬೆಲೆ ಏರಿಕೆ ವಹಿವಾಟನ್ನು ಮಂಕಾಗಿಸಿದ್ದರೂ, ಶೇ 90ರಷ್ಟು ರಿಯಾಯಿತಿ ದರದಲ್ಲಿ ಪಟಾಕಿ ಮಾರಾಟ ಹೊಸೂರಿನಲ್ಲಿ ನಡೆಯುತ್ತಿದೆ. ಸ್ಟ್ಯಾಂಡರ್ಡ್‌ ಮತ್ತು ಫೈರ್ ವರ್ಕ್ಸ್‌ ರೀತಿಯ ಕೆಲವು ಕಂಪನಿಗಳ ಪಟಾಕಿಗಳಿಗೆ ಮಾತ್ರ ಶೇ 80ರಷ್ಟು ರಿಯಾಯಿತಿ ಇದ್ದರೆ, ಉಳಿದೆಲ್ಲಾ ಪಟಾಕಿಗಳಿಗೂ ಶೇ 90ರಷ್ಟು ರಿಯಾಯಿತಿ ಸಿಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು, ಮಾಲೂರು, ಹೊಸಕೋಟೆ, ಕೋಲಾರ, ಮಂಡ್ಯ, ಚನ್ನಪಟ್ಟಣ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಗ್ರಾಹಕರು ಪಟಾಕಿ ಖರೀದಿಸಲು ಇಲ್ಲಿಗೆ ಬರುತ್ತಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಬಹುತೇಕ ಪಟಾಕಿ ಅಂಗಡಿಗಳ ಬಳಿ ಪುನೀತ್‌ ರಾಜ್‌ಕುಮಾರ್ ಭಾವಚಿತ್ರಗಳನ್ನು ದೊಡ್ಡದಾಗಿ ಅಂಟಿಸಲಾಗಿದೆ.

‘ಶೇ 90ರಷ್ಟು ರಿಯಾಯಿತಿ, ನೂರಾರು ರೀತಿಯ ಪಟಾಕಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶ ಇದೆ. ವಾಹನ ನಿಲುಗಡೆಗೂ ಸ್ಥಳಾವಕಾಶ ಇದೆ. ಆದ್ದರಿಂದ ಬೆಂಗಳೂರಿನಿಂದ ಹೊಸೂರಿಗೆ ಬಂದು ಪಟಾಕಿ ಖರೀದಿಸುತ್ತಿದ್ದೇವೆ’ ಎಂದು ಬೆಂಗಳೂರಿನ ತ್ರಿವೇಣಿ ಹೇಳಿದರು.

ದರ ಏರಿಕೆ: ವಹಿವಾಟು ಕುಸಿತ

ಕಳೆದ ವರ್ಷಗಳ ಪಟಾಕಿ ವಹಿವಾಟಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ನಿಂತರವಾಗಿ ಸುರಿದ ಮಳೆ ಪಟಾಕಿ ವಹಿವಾಟಿನ ಮೇಲೆ ತಣ್ಣೀರು ಎರಚಿದ್ದರೆ, ಬೆಲೆ ಏರಿಕೆ ಬಿಸಿ ಕೂಡ ಪಟಾಕಿ ಸದ್ದನ್ನು ಕಡಿಮೆಯಾಗಿಸಿದೆ.‌

‘ಈಗ ಮಳೆಯೂ ಕಡಿಮೆಯಾಗಿದೆ. ಆದ್ದರಿಂದ, ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಗೆ ಜನ ಬರುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಪಟಾಕಿ ಅಂಗಡಿಯ ಸ್ವಾತಿ ಮನೋಹರ್ ಹೇಳಿದರು.

ನಗರದಲ್ಲೂ ವ್ಯಾಪಾರಕ್ಕೆ ನಿರುತ್ಸಾಹ

ಬೆಂಗಳೂರಿನಲ್ಲಿ ಪ್ರತಿವರ್ಷ 250ಕ್ಕೂ ಹೆಚ್ಚು ಕಡೆ ನಡೆಯುತ್ತಿದ್ದ ಪಟಾಕಿ ವಹಿವಾಟು, ಈ ಬಾರಿ 60 ಕಡೆಗಷ್ಟೇ ಸೀಮಿತವಾಗಿದೆ.

ಪಟಾಕಿ ಬೆಲೆ ದುಬಾರಿ ಆಗಿರುವುದು ವ್ಯಾಪಾರಿಗಳಲ್ಲೂ ಆಸಕ್ತಿ ಕುಂದಿಸಿದ್ದು, ಪರವಾನಗಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅ.26ರ ತನಕ ವ್ಯಾಪಾರ ನಡೆಸಲು ಪೊಲೀಸರಿಂದ ಅನುಮತಿ ಸಿಕ್ಕಿದೆ, ಶನಿವಾರದಿಂದ ವ್ಯಾಪಾರ ಆರಂಭವಾಗಿದೆ ಎಂದು ಪಟಾಕಿ ವ್ಯಾಪಾರಿಗಳ ಸಂಘದ ಚಂದ್ರಶೇಖರ್ ತಿಳಿಸಿದರು.

‘60 ಕಡೆ ಪಟಾಕಿ ಅಂಗಡಿ ತೆರೆಯಲು ಅವಕಾಶ ಸಿಕ್ಕರೂ ಅಲ್ಲಿಯೂ ಪರಿಪೂರ್ಣವಾಗಿ ವಹಿವಾಟು ನಡೆಯುವುದಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಶೇ 40ರಷ್ಟು ವ್ಯಾಪಾರಿಗಳಷ್ಟೇ ಮುಂದೆ ಬಂದಿದ್ದಾರೆ. ಬೆಲೆ ಏರಿಕೆ, ಸಾರಿಗೆ ವೆಚ್ಚ, ಕಾರ್ಮಿಕರ ವೆಚ್ಚ ಎಲ್ಲವೂ ದುಬಾರಿಯಾಗಿದೆ. ಇದರ ನಡುವೆ ಮಳೆ ಕೂಡ ಕಾಡುತ್ತಿದೆ. ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವ ಭಯದಲ್ಲಿ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ಶಿವಕಾಶಿಯಲ್ಲೂ ಉತ್ಪಾದನೆ ಕುಂಠಿತ

ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಶಿವಕಾಶಿಯಲ್ಲೂ ಪಟಾಕಿ ಉತ್ಪಾದನೆ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಪಟಾಕಿ ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳು, ಕಬ್ಬಿಣ, ಪ್ಯಾಕ್ ಮಾಡಲು ಬಳಸವ ರಟ್ಟಿನ ಬಾಕ್ಸ್‌ಗಳ ಬೆಲೆಯೂ ಶೇ 70ರಷ್ಟು ಹೆಚ್ಚಾಗಿದೆ. ಆದ್ದರಿಂದ ಉತ್ಪಾದನೆಯೇ ಕಡಿಮೆಯಾಗಿದೆ. ಇದೂ ಕೂಡ ಪಟಾಕಿ ಬೆಲೆ ಏರಿಕೆಗೆ ಕಾರಣವಾಗಿದೆ’ ಎನ್ನುತ್ತಾರೆ ಹೊಸೂರಿನ ವ್ಯಾಪಾರಿಗಳು.

ಶೇ 50ರಿಂದ 60ರಷ್ಟು ವಹಿವಾಟು ಕುಸಿತ

ಈ ಬಾರಿ ಪಟಾಕಿ ವಹಿವಾಟಿನಲ್ಲಿ ಶೇ 50ರಿಂದ 60ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ನಗರದ ಗಣಪತಿ ಭಂಡಾರಕರ್‌ ಪಟಾಕಿ ಮಳಿಗೆಯ ಮಾಲೀಕ ಜಯರಾಂ.

ಬೆಲೆ ಏರಿಕೆಯಿಂದಾಗಿ ಒಂದೆಡೆ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಶಿವಕಾಶಿಯಿಂದ ಪಟಾಕಿ ಪೂರೈಕೆ ಕಡಿಮೆಯಾಗಿದೆ. ಅಲ್ಲದೆ ಜನರಲ್ಲಿ ಪಟಾಕಿ ಖರೀದಿಯ ಉತ್ಸಾಹವೂ ಕಡಿಮೆಯಾಗಿದೆ. ನಿರೀಕ್ಷೆಗೆ ತಕ್ಕಂತೆ ವಹಿವಾಟು ನಡೆಯುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT