ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ನೆಪದಲ್ಲಿ ಹಲ್ಲೆ, ಕೊಲೆ: ಆರ್‌ಎಫ್‌ಒ ಸೇರಿ 17 ಮಂದಿ ವಿರುದ್ಧ ಪ್ರಕರಣ

Last Updated 14 ಅಕ್ಟೋಬರ್ 2022, 4:16 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಜಿಂಕೆ ಮಾಂಸ ಕಳವು ಪ್ರಕರಣದ ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ತಂದೆ, ಜೇನುಕುರುಬ ಸಮುದಾಯದ ಹೊಸಹಳ್ಳಿ ಹಾಡಿ ನಿವಾಸಿ ಕರಿಯಪ್ಪ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಪುತ್ರ ಸತೀಶ್‌ ನೀಡಿದ ದೂರು ಆಧರಿಸಿ ಎನ್‌.ಬೇಗೂರು ವಲಯ ಅರಣ್ಯಾಧಿಕಾರಿ ಸೇರಿದಂತೆ 17 ಮಂದಿ ವಿರುದ್ಧ ಅಂತರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

‘ಅ.10ರ ಮಧ್ಯಾಹ್ನ 12.30ರ ವೇಳೆ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಆಹಾರ ಪದಾರ್ಥಗಳನ್ನು ಬಿಸಾಡಿ, ಸಹೋದರಿಗೆ ಗನ್‌ ತೋರಿ ತಂದೆ ಎಲ್ಲಿದ್ದಾನೆಂದು ತಿಳಿಸದಿದ್ದರೆ ಪೆಟ್ರೋಲ್ ಹಾಕಿ ಸುಡುತ್ತೇನೆ ಎಂಬ ಪ್ರಾಣ ಬೆದರಿಕೆ ಹಾಕಿದ್ದರು. ತಂದೆಯನ್ನು ವಶಕ್ಕೆ ಪಡೆದಿದ್ದರು. ನಂತರ ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಯೊಬ್ಬರಿಂದ ತಿಳಿಯಿತು’ ಎಂದು ಸತೀಶ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಎರಡು ದಿನ ವಶದಲ್ಲಿಟ್ಟುಕೊಂಡು, ಚಿತ್ರ ಹಿಂಸೆ ನೀಡಿ ತಂದೆಯ ಸಾವಿಗೆ ಕಾರಣರಾದ ಸಿಬ್ಬಂದಿ ವಿರುದ್ಧ ಕ್ರಮ ವಹಿಸಬೇಕು ಎಂಬ ದೂರು ಆಧರಿಸಿ ಆಧರಿಸಿಎನ್.ಬೇಗೂರು ವಲಯ ಅರಣ್ಯಾಧಿಕಾರಿ ಅಮೃತೇಶ, ಡಿಆರ್‌ಎಫ್‌ಒ ಕಾರ್ತಿಕ್ ಯಾದವ್, ಸಿಬ್ಬಂದಿ ಆನಂದ, ಬಾಹುಬಲಿ, ರಾಮು, ಶೇಖರಯ್ಯ, ಸದಾಶಿವಯ್ಯ, ಮಂಜ, ಉಮೇಶ, ರಾಜನಾಯಕ, ಸುಷ್ಮ, ಮಾದೇವಿ, ಅಯ್ಯಪ್ಪ, ಸೋಮಶೇಖರ, ಸಂಜಯ್, ತಂಗಮಣಿ, ಸಿದ್ಧಿಖ್‌ ಪಾಷ ಅವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ಗುರುವಾರ ಎಚ್‌.ಡಿ.ಕೋಟೆ ಹೆಚ್ಚುವರಿ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

ಸಾವಿನ ಘಟನೆ ಖಂಡಿಸಿ ಆದಿವಾಸಿ ಗಿರಿಜನ ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಕೂಡಲೇ, ಎನ್‌.ಬೇಗೂರು ವಲಯ ಅರಣ್ಯಾಧಿಕಾರಿ ಕಚೇರಿಗೆ ಬೀಗ ಹಾಕಿ ಸಿಬ್ಬಂದಿ ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT