ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: 34,170 ಹೆಕ್ಟೇರ್ ಬೆಳೆ ಹಾನಿ

ಆಗಸ್ಟ್‌ ಮೊದಲ ವಾರ ಸುರಿದ ಭಾರಿ ಮಳೆಗೆ ಜಿಲ್ಲೆಯ ಅನ್ನದಾತ ಕಂಗಾಲು
Last Updated 21 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಮುಂಗಾರು ಮಳೆಯನ್ನು ಪ್ರೀತಿಸುತ್ತಿದ್ದ ಕೊಡಗು ಜಿಲ್ಲೆಯ ಅನ್ನದಾತರು ಈಗ ಮುಂಗಾರನ್ನೇ ಶಪಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಮುಂಗಾರು ಅಬ್ಬರಿಸಿ, ಅನ್ನದಾತನನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ.

ಜುಲೈ ಅಂತ್ಯದ ತನಕವೂ ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇರಲಿದೆ ಎಂದೇ ಭಾವಿಸಿದ್ದ ರೈತರಿಗೆ, ಆಗಸ್ಟ್‌ ಮೊದಲ ವಾರ ಸುರಿದ ಭಾರಿ ಮಳೆಯಿಂದ ಮತ್ತೆ ನಿರಾಸೆ ಅನುಭವಿಸುವಂತಾಗಿದೆ.

ಒಂದು ವಾರ ಸುರಿದ ಭಾರಿ ಮಳೆಗೆ ಕಾಫಿ ತೋಟದಲ್ಲಿ ತೇವಾಂಶ ಹೆಚ್ಚಾಗಿದೆ. ಕಾಫಿ ಫಸಲು ನೆಲಕಂಡಿವೆ. ಗಾಳಿಯ ಅಬ್ಬರಕ್ಕೆ ಬಾಳೆ, ಏಲಕ್ಕಿ, ಕಾಳು ಮೆಣಸು ಸೇರಿದಂತೆ ಸಂಬಾರ ಪದಾರ್ಥಗಳು ನಾಶವಾಗಿವೆ. ಜಿಲ್ಲೆಯಲ್ಲಿ 34,170 ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಇನ್ನೂ ಸರ್ವೆ ಕಾರ್ಯ ನಡೆಯುತ್ತಿದ್ದು, ನಾಶದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿಯಂತೆ ಶೇ 33 ಮತ್ತು ಅದಕ್ಕೂ ಮೇಲ್ಪಟ್ಟು ಬೆಳೆ ಹಾನಿಗೊಳಗಾದ ರೈತರು ಬೆಳೆಹಾನಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ರೈತರು ಪರಿಹಾರ ಕೋರಿ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಹತ್ತಿರದ ನಾಡ ಕಚೇರಿ ಅಥವಾ ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಗೆ ಸಲ್ಲಿಸಬಹುದು ಎಂದು ಜಿಲ್ಲಾಡಳಿತ ಕೋರಿದೆ.

ಗಾಳಿ ಅಬ್ಬರಕ್ಕೆ ಅಪಾರ ಹಾನಿ

ಆಗಸ್ಟ್‌ ಮೊದಲ ವಾರದಲ್ಲಿ ಬರೀ ಮಳೆ ಸುರಿಯಲಿಲ್ಲ. ಜೊತೆಗೆ, ಗಾಳಿಯ ಅಬ್ಬರವೂ ಜೋರಾಗಿತ್ತು. ಇದರಿಂದ ಕಾಳು ಮೆಣಸಿನ ಬಳ್ಳಿಗಳು ನೆಲಕಚ್ಚಿವೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ. ಹತ್ತಾರು ವರ್ಷದಿಂದ ಬೆಳೆಸಿದ ಬೆಲೆ ಬಾಳುವ ಮರಗಳೂ ಬಿದ್ದು ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ಕಾಫಿ ಬೆಳೆಗಾರರು ಕಣ್ಣೀರು ಸುರಿಸುತ್ತಿದ್ದಾರೆ.

341 ಮನೆಗೆ ಹಾನಿ

ಮಡಿಕೇರಿ ತಾಲ್ಲೂಕಿನ 80, ಸೋಮವಾರಪೇಟೆ ತಾಲ್ಲೂಕಿನ 101, ವಿರಾಜಪೇಟೆ ತಾಲ್ಲೂಕಿನಲ್ಲಿ 160 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ವಿಭಾಗ, ಸಣ್ಣ ನೀರಾವರಿ ಇಲಾಖೆ, ಪಿಎಂಜಿಎಸ್‌ವೈ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಮೂಲಸೌಲಭ್ಯಗಳಿಗೂ ಹಾನಿಯಾಗಿದ್ದು, ಮತ್ತೆ ಮೂರನೇ ವರ್ಷವೂ ದುರಸ್ತಿ ಕಾರ್ಯಕ್ಕೆ ಅನುದಾನ ಕೋರುವ ಸ್ಥಿತಿ ಬಂದಿದೆ.

‘ಸೆಸ್ಕ್’‌ ದೊಡ್ಡ ನಷ್ಟ

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ (ಸೆಸ್ಕ್‌) ದೊಡ್ಡ ಮೊತ್ತದ ನಷ್ಟವಾಗಿದೆ. ಮೂರು ತಾಲ್ಲೂಕಿನಲ್ಲಿ ಒಟ್ಟು 2,677 ವಿದ್ಯುತ್‌ ಕಂಬಗಳು ಧರೆಗುರಳಿವೆ. 25,650 ಮೀಟರ್‌ ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದೆ. ಅದೇ 75 ವಿದ್ಯುತ್‌ ಪರಿವರ್ತಕಕ್ಕೆ ಹಾನಿಯಾಗಿದ್ದು ಅಂದಾಜು ₹ 3 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಗದ್ದೆಯಲ್ಲಿ ಮಣ್ಣು

ನಾಟಿ ಮಾಡಿದ್ದ ಗದ್ದೆಗಳಿಗೆ ಪ್ರವಾಹದಿಂದ ಮಣ್ಣು ಬಂದು ನಿಂತಿದೆ. ಮಡಿಕೇರಿ ತಾಲ್ಲೂಕಿನ‌ ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಭಾಗದಲ್ಲಿ ಗದ್ದೆಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಕೆಲವೆಡೆ ನಾಟಿ ಮಾಡಿ ಸಸಿ ಕೊಳೆಯುತ್ತಿದೆ ಎಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಲಕ್ಷ್ಮಣತೀರ್ಥ ನದಿಯು ಉಕ್ಕೇರಿದ ಪರಿಣಾಮ ದಕ್ಷಿಣ ಕೊಡಗು ವ್ಯಾಪ್ತಿಯಲ್ಲೂ ಅಪಾರ ನಷ್ಟವಾಗಿದೆ.

ಬೆಳೆ ಹಾನಿಯಾದ ವಿವರ (ಹೆಕ್ಟೇರ್‌ಗಳಲ್ಲಿ)
* 3,200 ಕೃಷಿ ಬೆಳೆ
* 2,970 ತೋಟಗಾರಿಕೆ ಬೆಳೆ
* 28,000 ಕಾಫಿ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT