ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಟೀನ್‌ ಹೆಸರು ಬದಲಾದರೆ ಅನ್ನ ಇಳಿಯುವುದಿಲ್ಲವೇ?: ಸಿ.ಟಿ.ರವಿ ಪ್ರಶ್ನೆ

Last Updated 25 ಆಗಸ್ಟ್ 2021, 12:12 IST
ಅಕ್ಷರ ಗಾತ್ರ

ಮಂಡ್ಯ: ‘ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆ. ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೆ ಅನ್ನ ಗಂಟಲಲ್ಲಿ ಇಳಿಯುವುದಿಲ್ಲವೇ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬುಧವಾರ ಪ್ರಶ್ನಿಸಿದರು.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ‘ಇಂದಿರಾಗಾಂಧಿ ಭಾವಚಿತ್ರ ಇರುವ ಕಾರಣ ಅದನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್‌ ಎಂದು ನಾಮಕರಣಮಾಡುವ ಬಗ್ಗೆ ಮಾತನಾಡಿದ್ದೇನೆ. ಅನ್ನಪೂರ್ಣೇಶ್ವರಿ ಪಾರ್ವತಿಯ ಅಂಶ, ಹೆಸರು ಬದಲಾದರೂ ಬಡವರಿಗೆ ಅನ್ನ ನೀಡುವ ಉದ್ದೇಶ ಮುಂದುವರಿಯಲಿದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಒಂದೇ ಕುಟುಂಬ ಸದಸ್ಯರು ನೂರಾರು ಯೋಜನೆಗಳಗೆ ತಮ್ಮದೇ ಹೆಸರು ಇಟ್ಟುಕೊಂಡಿದ್ದಾರೆ. ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು 1989- 90ರವರೆಗೆ ಕಾಯಬೇಕಾಯಿತು. ನಮ್ಮ ಬೆಂಬಲದೊಂದಿಗೆ ರಚನೆಯಾಗಿದ್ದ ವಿ.ಪಿ.ಸಿಂಗ್‌ ಸರ್ಕಾರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರಸ್ತಾವದ ಮೇರೆಗೆ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲಾಯಿತು’ ಎಂದರು.

‘ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರ ಎಲ್ಲೂ ನಿರ್ಲಕ್ಷ್ಯ ಮಾಡಿಲ್ಲ. ಕಾವೇರಿ ಅಂತಿಮ ತೀರ್ಪು ಬಂದಿದ್ದು ನೀರು ಹಂಚಿಕೆಯಾಗಿದೆ. ನಮ್ಮ ಪಾಲಿನ ನೀರಿನಲ್ಲಿ ನಾವು ಯಾವುದೇ ಯೋಜನೆ ಜಾರಿಗೊಳಿಸಬಹುದು. ಈ ಕುರಿತು ತಮಿಳುನಾಡು ಜನರಿಗೆ ಇರುವ ಆತಂಕ ದೂರ ಮಾಡಲಾಗುವುದು, ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಕುಡಿಯುವ ನೀರಿನ ಯೋಜನೆಗೆ ಅಡ್ಡಿಯಾಗಲಾರದು ಎಂಬುದು ನನ್ನ ಅಭಿಪ್ರಾಯ’ ಎಂದರು.

‘ಸಾರ್ವಜನಿಕ ಸಂಸ್ಥೆಗಳು ಬಿಳಿ ಆನೆಯಾಗಿದ್ದು ಸಾಕುವುದು ಕಷ್ಟ. ಅವುಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡುವ ಸಲುವಾಗಿ ಆಸ್ತಿ ನಗದೀಕರಣ ಜಾರಿಗೊಳಿಸಲಾಗುತ್ತಿದೆ. ಖಾಸಗಿ ಗುತ್ತಿಗೆ ಪ್ರಕ್ರಿಯೆ ಇಂದು ನಿನ್ನೆಯದಲ್ಲ, 1991ರಿಂದಲೂ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿ ನಿರ್ವಹಣೆಗೆ ಒಳಪಡಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT