ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಿತಿ–ಗತಿ ಹೀಗಿದೆ ನೋಡಿ

ಕೊರತೆಗಳಲ್ಲೇ ನಲುಗಿರುವ ರಾಜ್ಯದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು
Last Updated 12 ಮಾರ್ಚ್ 2022, 18:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಗಳಿಗೆ ಕಟ್ಟಡಗಳಿವೆ. ಆದರೆ, ಕಾಯಂ ಬೋಧಕರು, ಕಾರ್ಯಾಗಾರ ಹಾಗೂ ಬೋಧಕೇತರ ಸಿಬ್ಬಂದಿ, ಗ್ರಂಥಾ ಲಯ, ಪೂರ್ಣ ಪ್ರಮಾಣದಲ್ಲಿ ಪ್ರಯೋ ಗಾಲಯಗಳಿಲ್ಲ. ಈ ಕೊರತೆಯು ವಿದ್ಯಾರ್ಥಿಗಳ ಕಲಿಕೆ, ಕೌಶಲ, ಉನ್ನತ ಉದ್ಯೋಗದ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಬಡವರು ಹಾಗೂ ಮಧ್ಯಮ ವರ್ಗದವರ ಮಕ್ಕಳಿಗೂ ಕಡಿಮೆ ವೆಚ್ಚದಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಸಿಗಬೇಕೆಂಬ ಆಶಯದಿಂದ 2007ರಿಂದ ವಿವಿಧ ಹಂತಗಳಲ್ಲಿ ರಾಜ್ಯ ಸರ್ಕಾರವೇ 14 ಎಂಜಿನಿಯರಿಂಗ್‌ ಕಾಲೇಜುಗಳನ್ನು ಆರಂಭಿಸಿದೆ. ಬೋಧನಾ ಶುಲ್ಕವೂ ಕಡಿಮೆ ಇದೆ. ಆದರೆ ಕಲಿಕೆಗೆ ಬೇಕಾದ ಸೌಲಭ್ಯಗಳಿಲ್ಲ!

ಬಹುತೇಕ ಕಾಲೇಜುಗಳಲ್ಲಿ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌, ಮೆಕ್ಯಾನಿಕಲ್‌,ಸಿವಿಲ್‌ ಎಂಜಿನಿಯರಿಂಗ್‌ ವಿಭಾಗಗಳಿವೆ.ಕೆಲವೆಡೆ ಎಲೆಕ್ಟ್ರಿಕಲ್‌, ಕೃತಕ ಬುದ್ಧಿಮತ್ತೆ,ಟೆಕ್ಸ್‌ಟೈಲ್ಸ್‌ ಅಂಡ್‌ ಸಿಲ್ಕ್‌ ವಿಭಾಗಗ
ಳಿವೆ. ಇಲ್ಲೆಲ್ಲೂ ಅಗತ್ಯವಿರುವಷ್ಟು ಬೋಧಕರಿಲ್ಲ. ಕೆಲವೆಡೆ ಒಬ್ಬರೇ ಕಾಯಂ ಬೋಧಕರು. ಹೆಚ್ಚಿನ ವಿಭಾಗಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ.

ಮಂಜೂರಾಗದ ಹುದ್ದೆ: ಗಂಗಾವತಿ, ತಳಕಲ್‌, ಚಳ್ಳಕೆರೆ, ಹಾಗೂ ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ 2019ರ ಬಳಿಕ ಆರಂಭವಾಗಿರುವ ಕಾಲೇಜುಗಳಿಗೆ ಬೋಧಕೇತರ ಸಿಬ್ಬಂದಿ ಹುದ್ದೆಗಳೇ ಮಂಜೂರಾಗಿಲ್ಲ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನಿಯಮಾವಳಿಗಳಿಗೆ ಅನು ಗುಣವಾಗಿ ಬೋಧಕರ ಹುದ್ದೆಗಳೂ ಮಂಜೂರಾಗಿಲ್ಲ.

ಬೋಧಕ–ವಿದ್ಯಾರ್ಥಿಗಳ ನಡುವಿನ ಅನುಪಾತ 1:15ರ ಬದಲು 1:20 ಇರಬೇಕು ಎಂದು ಎಐಸಿಟಿಇ ಬದಲಾವಣೆ ಮಾಡಿದ್ದರಿಂದ, 2007ರಲ್ಲಿ ಆರಂಭವಾಗಿದ್ದ ಕಾಲೇಜುಗಳಲ್ಲಿದ್ದ ಬೋಧಕರನ್ನು ಹೆಚ್ಚುವರಿಯೆಂದು ಪರಿಗಣಿಸಿ, ಹುದ್ದೆ ಸಮೇತ ನಾಲ್ಕು ಹೊಸ ಕಾಲೇಜುಗಳಿಗೆ ವರ್ಗಾಯಿಸಲಾಗಿದೆ. ಅವರಷ್ಟೇ ಅಲ್ಲಿಕಾರ್ಯನಿರ್ವಹಿಸುತ್ತಿದ್ದಾರೆ. ‘ವಾಸ್ತವ
ವಾಗಿ ಆ ಕಾಲೇಜುಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಬೋಧಕರ ಹುದ್ದೆಗಳು ಮಂಜೂರಾಗಿಲ್ಲ’ ಎಂದು ಪ್ರಾಂಶುಪಾಲ
ರೊಬ್ಬರು ಬೇಸರ ವ್ಯಕ್ತಪಡಿಸಿದರು.

----

ವಿದ್ಯುತ್‌ ಬಿಲ್‌ ಕಟ್ಟಲು ಹಣವಿಲ್ಲ!

ವಿದ್ಯುತ್‌ ಬಿಲ್‌ ಕಟ್ಟದ ಕಾರಣ, ಬೆಂಗಳೂರಿನ ಶ್ರೀಕೃಷ್ಣರಾಜೇಂದ್ರ
ಸಿಲ್ವರ್‌ ಜ್ಯೂಬಿಲಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮೂರು ತಿಂಗಳ ಹಿಂದೆ ಬೆಸ್ಕಾಂ ವಿದ್ಯುತ್‌ ಕಡಿತಗೊಳಿಸಿತ್ತು. ಒಂದು ತಿಂಗಳ ಕಾಲ ಜನರೇಟರ್‌ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

‘ಕಾಲೇಜುಗಳ ನಿರ್ವಹಣೆಗೆ ಅನುದಾನ ನೀಡುವಂತೆ ಪತ್ರ ಬರೆದರೂ ತಾಂತ್ರಿಕ ಶಿಕ್ಷಣ ಇಲಾಖೆ ಸ್ಪಂದಿಸುವುದಿಲ್ಲ. ಕೈಯಿಂದ ಖರ್ಚು ಮಾಡಬೇಕಾಗುತ್ತದೆ. ಸ್ವಂತ ಹಣದಲ್ಲಿ ಡೀಸೆಲ್‌ ತಂದು ಜನರೇಟರ್‌ಗೆ ಹಾಕಿದೆವು. ವಿದ್ಯುತ್ ಇಲ್ಲದೆ ಇದ್ದರೆ ಲ್ಯಾಬ್‌ಗಳನ್ನು ನಿರ್ವಹಿಸುವುದಾದರೂ ಹೇಗೆ’ ಎಂಬುದು ಪ್ರಾಂಶುಪಾಲರ ಪ್ರಶ್ನೆ.

ಐಐಟಿ, ಐಐಎಂ ಮಾದರಿಯಲ್ಲಿ ಅನುದಾನ ನೀಡಲಿ

ಸರ್ಕಾರಿ ಸ್ವಾಮ್ಯದ ಐಐಟಿ, ಐಐಎಂ, ಐಐಎಸ್ಸಿ ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವು ಮಾದರಿಯಾಗಿವೆ. ಅವುಗಳ ನಿರ್ವಹಣೆಗೆ ಅಗತ್ಯವಿರುವ ಅನುದಾನವನ್ನು ಪ್ರತಿವರ್ಷ ನೀಡಲಾಗುತ್ತದೆ. ಅದೇ ರೀತಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೂ ನೀಡಬೇಕು. ಅಲ್ಲದೆ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸೀಮಿತವಾಗಿ ಪ್ರತ್ಯೇಕ ಆಯುಕ್ತಾಲಯ ಸ್ಥಾಪಿಸಿ, ಅದರ ವ್ಯಾಪ್ತಿಗೆ ಇವುಗಳನ್ನು ತರಬೇಕು. ಆಗ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂಬುದು ಪ್ರಾಧ್ಯಾಪಕರೊಬ್ಬರ ಅಭಿಪ್ರಾಯ.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು; ಮಂಜೂರಾದ ಹುದ್ದೆ; ಭರ್ತಿ; ಖಾಲಿ; ಮೊದಲ ವರ್ಷದ ಸೀಟುಗಳ ಸಂಖ್ಯೆ; ದಾಖಲಾತಿ

ಶ್ರೀಕೃಷ್ಣರಾಜೇಂದ್ರ ಸಿಲ್ವರ್‌ ಜ್ಯೂಬಿಲಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು; 55(152)*; 35(39) 20 (113); 230;152

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಹೂವಿನಹಡಗಲಿ; 53 (45); 21(12); 32(33); 260; 116

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ರಾಮನಗರ; 55 (99); 44(12); 11(87); 240;240

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಹಾವೇರಿ; 53( 108); 43( 12); 10(96) ;240;200

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಕಾರವಾರ; 57(114); 14(8); 43(106); 252;124

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ರಾಯಚೂರು; 91 (85); 35 (16); 56(69); 240;133

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಚಾಮರಾಜನಗರ; 48 (46); 33(5); 15(41); 240;114

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಹಾಸನ; 52(38); 37(1); 15(37); 240;203

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಕೆ.ಆರ್‌.ಪೇಟೆ; 107(54); 31(8); 76(46); 240;180

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಕುಶಾಲನಗರ; 62(100); 26(10); 36(10); 240;170

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಮೊಸಳೆಹೊಸಹಳ್ಳಿ; 67; 19; 48; 124;252

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ತಳಕಲ್‌; 30; 7; 23; 300;168

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಗಂಗಾವತಿ; 34; 6; 28; 300;102

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಚಳ್ಳಕೆರೆ; 10; 3; 7; 120;63

(* ಆವರಣದಲ್ಲಿ ಇರುವುದು ಬೋಧಕೇತರ ಹುದ್ದೆಗಳ ಮಾಹಿತಿ)

----
‘ಮೂರು ತಿಂಗಳಲ್ಲಿ ಸುಧಾರಣೆ’

ಸೂಪರ್‌ 30 ಯೋಜನೆಯಡಿ ಕೈಗಾರಿಕೆಗಳ ನೆರವಿ ನೊಂದಿಗೆ ಪ್ರಯೋಗಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಲಿಕೆ ಮತ್ತು ಬೋಧನೆಯಲ್ಲಿ ಸುಧಾರಣೆ ತರಲು ಡಿಜಿಟಲೀಕರಣ ಮಾಡಲಾಗುತ್ತಿದೆ. ಹೊಸದಾಗಿ ವೃಂದ ಮತ್ತು ನೇಮಕಾತಿ ನಿಯಮಾವಳಿ ರೂಪಿಸಲಾಗುತ್ತಿದೆ. ಉದ್ಯಮಗಳಲ್ಲಿ ಕೆಲಸ ಮಾಡುವವರಿಗೂ ಬೋಧನೆಗೆ ಅವಕಾಶ ನೀಡುತ್ತೇವೆ.

ಸ್ಮಾರ್ಟ್ ಕ್ಲಾಸ್‌ ರೂಂ ವ್ಯವಸ್ಥೆ, ಆಡಿಯೊ, ವಿಡಿಯೊ ಮೂಲಕ ಕಂಟೆಂಟ್‌ ಲಭ್ಯವಾಗುವಂತೆ ಮಾಡುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟ ವನ್ನು ಮೌಲ್ಯಮಾಪನ ಮಾಡಿ, ಸಾಮಾನ್ಯಮಟ್ಟಕ್ಕಿಂತ ಕಡಿಮೆ ಇದ್ದರೆ ಸುಧಾರಣೆ ಮಾಡುತ್ತೇವೆ. ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಇದರಿಂದ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ.

ಶೇಕಡ 50ಕ್ಕಿಂತಲೂ ಹೆಚ್ಚು ಬೋಧನಾ ಸಿಬ್ಬಂದಿ ಇದ್ದಾರೆ. ಬೋಧ ಕೇತರ ಸಿಬ್ಬಂದಿಯ ಕೊರತೆ ಇರುವುದು ನಿಜ. ಹಲವು ಕಡೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ.

ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವರು


----


ಐಐಟಿ ಮಾದರಿಯ ಸಂಸ್ಥೆಗೂ ಕೊರತೆ
–ಸಚ್ಚಿದಾನಂದ ಕುರಗುಂದ

ಬೆಂಗಳೂರು: ನೂರು ವರ್ಷಗಳನ್ನು ಪೂರೈಸಿರುವ ಬೆಂಗಳೂರಿನ ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿಇ) ಈಗ ಐಐಟಿ ಮಾದರಿಯ ಸ್ವಾಯತ್ತ ಸಂಸ್ಥೆ. ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿರುವ ಈ ಕಾಲೇಜಿನ ಸ್ಥಾನಮಾನ ಹೆಚ್ಚಿದ್ದರೂ, ಕೊರತೆಗಳು ನೀಗಿಲ್ಲ.

ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಲೆಂದೇ ರೂಪಿಸಲಾದ ಮಸೂದೆಗೆ ಅಂಗೀಕಾರ ದೊರೆತು 2022ರ ಫೆ.28ರಂದು ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಕಾಲೇಜು ‘ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯ’ (ಯುವಿಸಿಇ) ಎಂದು ಬದಲಾಗಿದೆ.

ಮಂಜೂರಾದ 175 ಬೋಧಕರ ಹುದ್ದೆಗಳ ಪೈಕಿ, ಅರ್ಧದಷ್ಟು, ಅಂದರೆ ಕೇವಲ 88 ಮಂದಿ ಖಾಯಂ ಆಧಾರದಲ್ಲಿ ಇರುವುದರಿಂದ ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಮಂಜೂರಾದ 150ರಲ್ಲಿ 20 ಬೋಧಕೇತರ ಸಿಬ್ಬಂದಿಯಷ್ಟೇ ಇದ್ದಾರೆ. ಬೋಧಕರು ಆಡಳಿತಾತ್ಮಕ ಕೆಲಸಗಳನ್ನೂ ಮಾಡುತ್ತಿದ್ದಾರೆ. ಬೋಧಕರ ಕೊರತೆಯಿಂದಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಬಿಎ) ಮಾನ್ಯತೆಯೂ ದೊರೆಯುತ್ತಿಲ್ಲ.

‘ಕಾಲೇಜನ್ನು ಸರ್ಕಾರವೇ ಕುಸಿಯುವಂತೆ ಮಾಡುತ್ತಿದೆ. ಪರಿಪೂರ್ಣವಾಗಿ ಬೋಧಿಸಲಾಗದೆ ಕಣ್ಣೀರು ಹಾಕುತ್ತಿದ್ದೇವೆ. ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿರುವ ಸಂಸ್ಥೆಗೆ ಪ್ರಾಧ್ಯಾಪಕರನ್ನೇ ನೇಮಿಸಿಕೊಳ್ಳದಿದ್ದರೆ ಹೇಗೆ? ಗ್ರೂಪ್‌ ಡಿ ಉದ್ಯೋಗಿಗಳಿಗೆ ಬಡ್ತಿ ನೀಡಿ ಇನ್‌ಸ್ಟ್ರಕ್ಟರ್‌ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗಿದೆ. ಉತ್ತಮ ಸಿಬ್ಬಂದಿಯನ್ನು ನೇಮಿಸದೆ ಐಐಟಿ ದರ್ಜೆ ಸ್ಥಾನಮಾನ ನೀಡಿದರೆ ಸಾಕೇ’ ಎಂದು ಪ್ರಾಧ್ಯಾಪಕರೊಬ್ಬರು ಪ್ರಶ್ನಿಸುತ್ತಾರೆ.

‘ಸ್ಥಾನಮಾನವನ್ನು ಹೆಚ್ಚಿಸಿದ್ದರೂ, ಬಜೆಟ್‌ನಲ್ಲಿ ಅಭಿವೃದ್ಧಿಗೆ ಅನುದಾನವನ್ನೇ ಮೀಸಲಿಟ್ಟಿಲ್ಲ. ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಹೊಂದಲು ಕನಿಷ್ಠ
₹500 ಕೋಟಿ ನೀಡಬೇಕು. ಮೂಲಸೌಕರ್ಯಗಳನ್ನು ಕಲ್ಪಿಸಿ, ಬೋಧಕರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು’ ಎಂದು ಅಧಿಕಾರಿಯೊಬ್ಬರು ಆಗ್ರಹಿಸಿದರು.

ಮೆಕ್ಯಾನಿಕಲ್‌ ವಿಭಾಗದ ಕಟ್ಟಡ ಹಳೆಯದಾಗಿದೆ. ಆರು ಅಂತಸ್ತುಗಳ ಹೊಸ ಕಟ್ಟಡಕ್ಕೆಂದು ಸರ್ಕಾರ ₹85 ಕೋಟಿ ಮಂಜೂರು ಮಾಡಿದೆ. ಕಾಲೇಜಿನ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ಹಳೆಯ ವಿದ್ಯಾರ್ಥಿಗಳ ಸಂಘವು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹತ್ತು ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದೆ.

‘ವಿಶ್ವದಾದ್ಯಂತ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ದೇಣಿಗೆ ನೀಡಲು ಸಿದ್ಧರಿದ್ದಾರೆ. ಆದರೆ, ಸ್ವಾಯತ್ತತೆ ಸಮರ್ಪಕವಾಗಿ ಜಾರಿಯಾಗಬೇಕು. ನಮಗೂ ಅವಕಾಶ ಇರಬೇಕು’ ಎಂದು ಹಳೆಯ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.

–––––


ಗುಣಮಟ್ಟ ಬಿಟ್ಟುಕೊಡದ ಯುಬಿಡಿಟಿ
–ಬಾಲಕೃಷ್ಣ ಪಿ.ಎಚ್‌.


ದಾವಣಗೆರೆ: ಬ್ರಹ್ಮಪ್ಪ, ದೇವೇಂದ್ರಪ್ಪ ತವನಪ್ಪ ಎಂಬ ಸಹೋದರರು ದಾನ ಮಾಡಿದ ಜಾಗದಲ್ಲಿ 1951ರಲ್ಲಿ ಆರಂಭಗೊಂಡ ಎಂಜಿನಿಯರಿಂಗ್‌ ವಿದ್ಯಾಸಂಸ್ಥೆಯೇ ಬಿಡಿಟಿ. 70 ವರ್ಷಗಳ ಬಳಿಕವೂ ಗುಣಮಟ್ಟವನ್ನು ಬಿಟ್ಟುಕೊಡದೆ, ವಿದ್ಯಾರ್ಥಿಗಳ ಕೊರತೆಯಾಗದಂತೆ ನೋಡಿಕೊಂಡಿದೆ.

ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು–ಬಿಡಿಟಿ ಮೊದಲು ಸರ್ಕಾರದ ಅಧೀನದಲ್ಲಿತ್ತು. 1992ರಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡು, ‘ಯುನಿವರ್ಸಿಟಿ’ ಸೇರಿ ಯುಬಿಡಿಟಿ ಎಂದಾಯಿತು. 2009ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕಾಲೇಜು ಘಟಕವಾಗಿ, 2011ರಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿ ವಿಟಿಯು ಕಾಲೇಜು ಘಟಕವಾಗಿಯೇ ಮುಂದುವರಿದಿದೆ.

ವಿಶಾಲ ಕಟ್ಟಡವಿದೆ. ಮೂಲಸೌಕರ್ಯಗಳ ಕೊರತೆ ಇಲ್ಲ. ಬೇರೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗಿದ್ದರೂ, ಇಲ್ಲಿ ಕೊರತೆಯಾಗಿಲ್ಲ. ಪ್ರಥಮ ವರ್ಷದ ಯುಜಿಯಲ್ಲಿ 440 ಮತ್ತು ಪಿಜಿಯಲ್ಲಿ 426 ವಿದ್ಯಾರ್ಥಿಗಳು ಸೇರಿ ಒಟ್ಟು 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬೋಧಕರು–ಸಿಬ್ಬಂದಿಯ ಕೊರತೆಯೂ ಇಲ್ಲ. ಕಾಯಂ ಬೋಧಕರಿಲ್ಲದ ಕೊರತೆಯನ್ನು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಲಾಗಿದೆ.

‘ಎಂಬಿಎ, ಎಂಸಿಎ ಸೇರಿ 9 ಪಿಜಿಗಳಿದ್ದು, ಎಲ್ಲವೂ ಸಂಶೋಧನಾ ಕೇಂದ್ರಗಳು. ಸುಮಾರು 100 ಮಂದಿ ಪಿಎಚ್‌.ಡಿ, ಎಂ.ಎಸ್ಸಿ ಸಂಶೋಧಕರಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ ನಾವು ಪ್ರಥಮ ಸ್ಥಾನದಲ್ಲಿದ್ದೇವೆ. ಖಾಸಗಿ ಕಾಲೇಜುಗಳಿಗಿಂತ ಚೆನ್ನಾಗಿದೆ. ವಿಟಿಯು ಫಲಿತಾಂಶದಲ್ಲಿ 13 ರ‍್ಯಾಂಕ್‌ಗಳು ನಮ್ಮ ವಿದ್ಯಾರ್ಥಿಗಳಿಗೇ ಬಂದಿವೆ. ಮೂವರು ಚಿನ್ನದ ಪದಕ ಪಡೆದಿದ್ದಾರೆ’ ಎಂದು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಎಸ್‌.ಹೊಳಿ ತಿಳಿಸಿದರು.

ಸಿಇಟಿ ಮೂಲಕವೇ ಪ್ರವೇಶ ನೀಡಲಾಗುತ್ತಿದ್ದು, ಮ್ಯಾನೇಜ್‌ಮೆಂಟ್‌ ಕೋಟಾ ಇಲ್ಲ. 300 ಯುವಕರು, 300 ಯುವತಿಯರು ವಸತಿನಿಲಯಗಳಲ್ಲಿದ್ದುಕೊಂಡು ಓದುತ್ತಿದ್ದಾರೆ.

––––

ಕೋವಿಡ್‌ ಆರೈಕೆ ಕೇಂದ್ರವಾಗಿದ್ದ ತಳಕಲ್‌ ಕಾಲೇಜು!

–ಸಿದ್ದನಗೌಡ ಪಾಟೀಲ

ಕೊಪ್ಪಳ: ಜಿಲ್ಲೆಯ ಕುಕನೂರ ತಾಲ್ಲೂಕಿನ ತಳಕಲ್‌ ಗ್ರಾಮದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೋವಿಡ್‌ ಸಂದರ್ಭದಲ್ಲಿ ಎರಡು ತಿಂಗಳು ಸೋಂಕಿತರ ಆರೈಕೆ ಕೇಂದ್ರವಾಗಿದ್ದರೂ, ಶೈಕ್ಷಣಿಕ ಮೂಲಸೌಕರ್ಯದ ವಿಷಯದಲ್ಲಿ ರೋಗಪೀಡಿತ ಸ್ಥಿತಿಯಲ್ಲಿದೆ.

250 ಹಾಸಿಗೆ ಸಾಮರ್ಥ್ಯದ ಇಲ್ಲಿನ ಉತ್ತಮ ಪರಿಸರದಿಂದ ಅನೇಕ ಸೋಂಕಿತರು ಗುಣಮುಖರಾದರು. ಆದರೆ ಸ್ಥಾಪನೆಯಾದ ನಾಲ್ಕು ವರ್ಷದಿಂದ ಎಂಜಿನಿಯರಿಂಗ್‌ ಕೌಶಲ ಕಲಿಸಲು ಬೇಕಾದ ಸೌಕರ್ಯವಿಲ್ಲದೆ ಕಾಲೇಜು ನರಳುತ್ತಿದೆ.

ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿ, ‘ಬಿಕೋ ಎನ್ನುತ್ತಿರುವ ಬೃಹತ್‌ ಭವನವಾದ’ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕದವರಿಗೆ ಮೊದಲ ಪ್ರಾಶಸ್ತ್ಯ. ಈ ಕಾಲೇಜನ್ನು ₹ 139 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 100ಕ್ಕೂ ಹೆಚ್ಚು ಕೊಠಡಿಗಳಿವೆ. 155 ವಿದ್ಯಾರ್ಥಿಗಳಿದ್ದಾರೆ. ಆರು ಕಾಯಂ ಬೋಧಕರು ಹಾಗೂ 25 ಅರೆಕಾಲಿಕ ಬೋಧಕರಿದ್ದಾರೆ.

ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಅಂಡ್‌ ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್ ಸೈನ್ಸ್, ಇ-ಕಮ್ಯುನಿಕೇಶನ್ ಸೇರಿದಂತೆ 5 ಕೋರ್ಸ್‌ಗಳಿವೆ. 3 ಕೊಠಡಿಗಳಲ್ಲಿ ತರಗತಿ, 2 ಕೊಠಡಿಗಳಲ್ಲಿ ಪ್ರಯೋಗಾಲಯ, ಪ್ರಾಚಾರ್ಯರು– ಕಚೇರಿ ಸಿಬ್ಬಂದಿ ಒಂದು ಕೊಠಡಿ ಇದೆ. ಪ್ರಯೋಗಾಲಯ, ಡಿ ದರ್ಜೆ ನೌಕರರಿಲ್ಲ. ಉದ್ಯಾನ, ಕಚೇರಿ, ಪೀಠೋಪಕರಣ ಕೊರತೆ ಇದೆ.

ಕಾಲೇಜು ಆರಂಭವಾಗಿ ತಿಂಗಳಾದರೂ ವಿದ್ಯಾರ್ಥಿಗಳಿಗೆ ವಸತಿ, ಊಟವಿಲ್ಲವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಿಬ್ಬಂದಿ ವಸತಿಗೃಹಗಳನ್ನೇ ತಾತ್ಕಾಲಿಕ ವಸತಿ ನಿಲಯಗಳನ್ನಾಗಿಸಿ, ಊಟದ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಟಿನ್, ಪ್ರಯೋಗಾಲಯ, ಬಸ್ ಸೌಲಭ್ಯವಿಲ್ಲ. ಅಂದಾಜಿಸಿದ್ದಕ್ಕಿಂತಲೂ ₹ 40 ಕೋಟಿ ವೆಚ್ಚದ ಕಾಮಗಾರಿಗಳು ಬಾಕಿ ಇವೆ.

ಕಾಲೇಜಿಗೆ ಕನಿಷ್ಠ 50 ಸ್ವಚ್ಛತಾ ಸಿಬ್ಬಂದಿ ಬೇಕು. ಆದರೆ ಕೇವಲ ಇಬ್ಬರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಸೌಕರ್ಯಗಳನ್ನು ಕೊಡದಿದ್ದರೆ ಕಾಲೇಜು ಹಾಳುಕೊಂಪೆಯಾಗುವುದರಲ್ಲಿ ಸಂಶಯವೇ ಇಲ್ಲ’ ಎನ್ನುವ ಆತಂಕ ಕೆಲವು ಸಿಬ್ಬಂದಿಯದ್ದು.

ಕಾಲೇಜಿನಲ್ಲಿ ಕೌಶಲ ಕೇಂದ್ರವೂ ಆರಂಭವಾಗಿದ್ದು, ಶಿಥಿಲಗೊಂಡ ಹಳೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ಇಲ್ಲಿಯೇ ಆರಂಭಿಸಬೇಕೆಂಬ ಒತ್ತಾಯವೂ ಇದೆ.

'ಗಂಗಾವತಿ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 316 ವಿದ್ಯಾರ್ಥಿಗಳಿದ್ದಾರೆ. ಆರು ಕಾಯಂ ಬೋಧಕರಿದ್ದಾರೆ. ಪ್ರಯೋಗಾಲಯದ ಕೊರತೆ ನೀಗಿಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಪ್ರಾಚಾರ್ಯ ಡಾ.ನಾಗರಾಜ ಪಾಟೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT