ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರೀವಾಜ್ಞೆಯಿಂದ ಉದ್ಯೋಗ ಸೃಷ್ಟಿಯಾಗುವುದೆ: ಡಿ.ಕೆ. ಶಿವಕುಮಾರ್‌

Last Updated 18 ಮೇ 2022, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆಯಿಂದ ಉದ್ಯೋಗಗಳು ಸೃಷ್ಟಿಯಾಗುವುದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯದಲ್ಲಿ ಕೋಮು ದ್ವೇಷದ ಘಟನೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ. ಹಿಜಾಬ್‌ನಿಂದ ಆಜಾನ್‌ವರೆಗೆ ಹಲವು ವಿವಾದಗಳು ಇವೆ. ಇಂತಹ ಸಂದರ್ಭದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚಿಸದೇ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಮಸೂದೆಯನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರುವ ಜರೂರತ್ತು ಏನಿತ್ತು’ ಎಂದು ಕೇಳಿದ್ದಾರೆ.

ಆಮ್ಲಜನಕ ಸಿಗದೇ ಮೃತಪಟ್ಟ ಕೋವಿಡ್‌ ರೋಗಿಗಳಿಗೆ ಈ ಸುಗ್ರೀವಾಜ್ಞೆ ಮರು ಜೀವ ನೀಡುವುದೆ? ಇದು ಸುಳ್ಳು ಆರೋಪಗಳ ಮೂಲಕ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ತಂತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.

ಆಯೋಗದ ಅಧಿಕಾರ ಮೊಟಕು: ‘ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ರಾಜ್ಯ ಸರ್ಕಾರ ಚುನಾವಣಾ ಆಯೋಗದ ಅಧಿಕಾರವನ್ನೇ ಮೊಟಕುಗೊಳಿಸಿ, ಚುನಾವಣೆ ನಡೆಸದಂತೆ ತಡೆಯುತ್ತಿದೆ’ ಎಂದು ಶಿವಕುಮಾರ್‌ ಪ್ರತ್ಯೇಕ ಟ್ವೀಟ್‌ನಲ್ಲಿ ದೂರಿದ್ದಾರೆ.

ತನ್ನ ಅಧಿಕಾರವನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸಲ್ಲಿಸಿರುವ ಮೆಮೊದಲ್ಲಿ ತಿಳಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂದು ಹೇಳಬಹುದಾ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT