ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಕೃತ್ಯಕ್ಕೆ ಹಣ ಹೊಂದಿಸಲು ಡಕಾಯತಿ: ಮೂವರಿಗೆ ಏಳು ವರ್ಷ ಶಿಕ್ಷೆ

ಭಯೋತ್ಪಾದನೆ ಕೃತ್ಯಕ್ಕೆ ಹಣ ಹೊಂದಿಸಲು ಡಕಾಯತಿ
Last Updated 1 ಡಿಸೆಂಬರ್ 2022, 18:47 IST
ಅಕ್ಷರ ಗಾತ್ರ

ಬೆಂಗಳೂರು:ಭಯೋತ್ಪಾದಕ ಕೃತ್ಯ ಗಳಿಗೆ ಹಣ ಕ್ರೋಢೀಕರಿಸುವ ಸಲುವಾಗಿನಗರ ವ್ಯಾಪ್ತಿಯಲ್ಲಿ ಡಕಾಯತಿ ಮಾಡಿ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದಮೂವರು ಆರೋಪಿಗಳಿಗೆ ನಗರದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಈ ಕುರಿತ ಪ್ರಕರಣವನ್ನು ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಗಂಗಾಧರ ಅವರು, ಮೊರ್ಷಿದಾಬಾದ್ ಜಿಲ್ಲೆಯ ದಿಘಿರ್‌ಪಹಾರ್‌ ಗ್ರಾಮದ ನಜೀರ್ ಶೇಖ್‌ ಅಲಿಯಾಸ್ ಪತ್ಲಾ ಅನಸ್ (25), ಇದೇ ಜಿಲ್ಲೆಯ ಇಚಖ್ಖಲಿ ಗ್ರಾಮದ ಮೊಸರಫ್‌ ಹೊಸೈನ್‌ (22) ಹಾಗೂ ಬೀರ್‌ಭುಮ್‌ ಜಿಲ್ಲೆಯ ಮುಲುಕ್‌ ಶಾಂತಿ ಪಲ್ಲಿ ಗ್ರಾಮದ ಹಬೀಬುರ್ ರಹಮಾನ್‌ ಅಲಿಯಾಸ್ ಎಸ್‌.ಕೆ.ಹಬೀಬುರ್‌ಗೆ (28) ಶಿಕ್ಷೆ ವಿಧಿಸಿದೆ.

ವಿಚಾರಣೆ ವೇಳೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ‘ಮೂವರೂ ಆರೋಪಿಗಳಬಾಂಗ್ಲಾದ ಜಮಾತ್ ಉಲ್ ಮುಜಾಹಿದ್ದೀನ್ (ಜೆಯುಎಂ) ಸಂಘಟನೆಯ ನಂಟು ಹೊಂದಿದ್ದಾರೆ. ಭಾರತದಲ್ಲೂ ಜೆಎಂಬಿಯ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಡಕಾಯತಿಗಳನ್ನು ಎಸಗಿದ್ದಾರೆ. ಈ ಮೂಲಕ ಹಣ ಸಂಗ್ರಹಿಸುವ ಕೃತ್ಯಗಳಲ್ಲಿ ತೊಡಗಿದ್ದರು ಮತ್ತು ತನಿಖೆಯ ವೇಳೆ ಸ್ಫೋಟಕ ವಸ್ತುಗಳನ್ನು ಹೊಂಚಿಕೊಂಡು ರಾಕೆಟ್ ಲಾಂಚರ್ ಪರೀಕ್ಷಿಸಿದ್ದಾರೆ’ ಎಂಬ ಆರೋಪಗಳ ಕುರಿತಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಪ್ರಾಸಿಕ್ಯೂಷನ್‌ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ, ‘ಆರೋಪಿಗಳು ಭಾರತೀಯ ದಂಡ ಸಂಹಿತೆ–1860 ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967 ಹಾಗೂ ಶಸ್ತ್ರಾಸ್ತ್ರ ಕಾಯ್ದೆ–1959ರ ವಿವಿಧ ಕಲಂಗಳ ಅನುಸಾರ ಅಪರಾಧ ಎಸಗಿರುವುದು ಸಾಬೀತಾಗಿದೆ’ ಎಂಬ ತೀರ್ಮಾನೊಂದಿಗೆ ಶಿಕ್ಷೆ ಮತ್ತು ಗರಿಷ್ಠ ಐದು ಸಾವಿರದಂತೆ ದಂಡ ವಿಧಿಸಿದೆ.

2019-20ರಲ್ಲೇ ದೋಷಾರೋಪ ಪಟ್ಟಿ

ಆರೋಪಿಗಳು 2018ರಲ್ಲಿ ನಗರದ ಕೆ.ಆರ್‌.ಪುರ, ಕೊತ್ತನೂರು ಮತ್ತು ಅತ್ತಿಬೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡಕಾಯತಿ ನಡೆಸಿ ಹಣ, ಬೆಲೆಬಾಳುವ ಎಲೆಕ್ಟ್ರಾನಿಕ್‌ ವಸ್ತುಗಳನ್ನು ದೋಚಿದ್ದರು.ಚಿಕ್ಕಬಾಣಾವರ ವ್ಯಾಪ್ತಿಯ ಮನೆಯೊಂದರಲ್ಲಿ ಆಶ್ರಯ ಹೊಂದಿದ್ದರು. ಭಯೋತ್ಪಾದನಾ ಸಂಘಟನೆಯ ನಂಟು ಹೊಂದಿದ ಆಧಾರದಲ್ಲಿ ತನಿಖೆ ಕೈಗೊಂಡಿದ್ದ ಎನ್‌ಐಎ ತನಿಖಾಧಿಕಾರಿಗಳು ಆರೋಪಿಗಳಿಂದ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ವಸ್ತುಗಳು, ರಾಸಾಯನಿಕ ಉಪಕರಣಗಳು, ಬಾಂಬ್‌ಗಳನ್ನು ತಯಾರಿಸಲು ಬಳಸುವ ಕಂಟೈನರ್‌, ಸುಧಾರಿತ ಸ್ಫೋಟಕ ಸಾಧನ, ಡಿಜಿಟಲ್ ಕ್ಯಾಮೆರಾ ಮತ್ತು ಕೈಬರಹದ ದಾಖಲೆಗಳನ್ನು ವಶಪಡಿಸಿಕೊಂಡು 2019 ಮತ್ತು 2020ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT