ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ: ಜುಲೈ 13ವರೆಗೆ ರೆಡ್‌ ಅಲರ್ಟ್‌– ಜುಲೈ 11ರಂದು ಶಾಲೆಗಳಿಗೆ ರಜೆ

Last Updated 10 ಜುಲೈ 2022, 14:35 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಭಾನುವಾರವೂ ಮುಂದುವರಿದಿದೆ. ಗುಡ್ಡ ಕುಸಿತದಿಂದ ಹಾಗೂ ರಸ್ತೆಗೆ ಮರ ಬಿದ್ದಿದ್ದರಿಂದ ಕೆಲವು ಪ್ರದೇಶಗಳು ಸಂಪರ್ಕ ಕಡಿದುಕೊಂಡಿವೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಮೂರು ಜಿಲ್ಲೆಗಳಿಗೆ ಜುಲೈ 13ವರೆಗೆ ‘ರೆಡ್‌ ಅಲರ್ಟ್‌‘ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ, ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಇಡೀ ಧಾರಾಕಾರ ಮಳೆಯಾಗಿದೆ. ಕುರ್ನಾಡು ಸಮೀಪದ ಮಿತ್ತಕೋಡಿ ಮತ್ತೆ ಭೂಕುಸಿತ ಉಂಟಾಗಿದ್ದು, ಗುಡ್ಡ ಪ್ರದೇಶದ ಮಣ್ಣು ರಸ್ತೆಗೆ ಬಿದ್ದಿರುವುದರಿಂದ ಮಿತ್ತಕೋಡಿ ಅರ್ಕಾನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಘಾಟಿಯ ಎಂಟನೆ ತಿರುವಿನಲ್ಲಿ ಭಾನುವಾರ ಮುಂಜಾನೆ ರಸ್ತೆಗೆ ಮರ ಬಿದ್ದು ಒಂದು ಗಂಟೆ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಮಚ್ಚಿನ ಗ್ರಾಮದ ಬಂಗಳಾಯಿಯಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿದು 60 ಕೃಷಿ ಕುಟುಂಬಗಳ ತೋಟಗಳಿಗೆ ಹಾನಿಯಾಗಿದೆ.ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಪಡಂಗಡಿ ಗ್ರಾಮದ ಕುಂದ್ರೆಂಜ- ಪೊಯ್ಯಗುಡ್ಡೆ -ಮದ್ದಡ್ಕ ಸಂಪರ್ಕ ರಸ್ತೆಯು ಮಳೆಗೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಇದೇ ಗ್ರಾಮದ ಪಾಲ್ತ್ಯಾರ್ ಎಂಬಲ್ಲಿ ಮಣ್ಣು ಕುಸಿದು ಮನೆಯೊಂದು ಅಪಾಯದ ಸ್ಥಿತಿಯಲ್ಲಿದೆ.ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯ ಅಂಗಡಿಯ ಚಾವಣಿ ಮೇಲೆ ಗುಡ್ಡ ಜರಿದು ಬಿದ್ದಿದೆ.

ಪುತ್ತೂರು ತಾಲ್ಲೂಕಿನ ಪರ್ಲಡ್ಕ- ಕುಂಜೂರುಪಂಜ- ಪಾಣಾಜೆ ರಸ್ತೆಯ ಚೆಲ್ಯಡ್ಕ ಎಂಬಲ್ಲಿರುವ ಸೇತುವೆ ಶನಿವಾರ ರಾತ್ರಿಯಿಂದ ಮುಳುಗಡೆಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಸುಬ್ರಹ್ಮಣ್ಯದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು (21 ಸೆಂ.ಮೀ.) ಮಳೆ ದಾಖಲಾಗಿದೆ. ಮೂಲ್ಕಿಯಲ್ಲಿ 20 ಸೆಂ.ಮೀ, ಮೂಡುಬಿದಿರೆ ಮತ್ತು ಬೆಳ್ತಂಗಡಿಯಲ್ಲಿ ತಲಾ 18 ಸೆಂ.ಮೀ. ಧರ್ಮಸ್ಥಳದಲ್ಲಿ 17 ಸೆಂ.ಮೀ, ಮಾಣಿಯಲ್ಲಿ 16 ಸೆಂ.ಮೀ, ಸುಳ್ಯದಲ್ಲಿ 13 ಸೆಂ.ಮೀ. ಮಂಗಳೂರು ವಿಮಾನನಿಲ್ದಾಣ ಮತ್ತು ಪುತ್ತೂರಿನಲ್ಲಿ 12 ಸೆಂ.ಮೀ, ಪಣಂಬೂರಿನಲ್ಲಿ 11 ಸೆಂ.ಮೀ ಹಾಗೂ ಮಂಗಳೂರು ನಗರದಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ. ಭಾನುವಾರ ಬೆಳಿಗ್ಗೆ ಕೆಲಹೊತ್ತು ಬಿಸಿಲು ಕಾಣಿಸಿಕೊಂಡಿತ್ತು. ಬಳಿಕೆ ಬಿಟ್ಟು ಬಿಟ್ಟು ಮಳೆಯಾಗಿದೆ. ಆದರೆ, ಮಳೆಯ ತೀವ್ರತೆ ಕಡಿಮೆಯಾಗಿತ್ತು.

ಅಪಾಯದ ಮಟ್ಟ ತಲುಪಿದ ನೇತ್ರಾವತಿ:

ಬಂಟ್ವಾಳದ ಸಮೀಪ ನೇತ್ರಾನತಿ ನದಿ ಈ ಮುಂಗಾರಿನಲ್ಲಿ ಮೊದಲ ಬಾರಿ ಭಾನುವಾರ ಅಪಾಯದ ಮಟ್ಟ (8.6 ಮೀ.) ತಲುಪಿದೆ. ನೇತ್ರಾವತಿಯಲ್ಲಿ ನೀರು ಹರಿವಿನ ಮಟ್ಟ 9 ಮೀ. ಮೀರಿದೆ. ಅಜಿಲಮೊಗರು ಜುಮ್ಮಾ ಮಸೀದಿ ಬಳಿ ನೇತ್ರಾವತಿ ನದಿ ನೀರು ಉಕ್ಕಿ ಹರಿದ ಪರಿಣಾಮ‌ ಇಲ್ಲಿನ ರಸ್ತೆಭಾನುವಾರ ಬೆಳಿಗ್ಗೆ ಜಲಾವೃತಗೊಂಡಿತ್ತು.

ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ ಹಾಗೂಕುಮಾರ ಪರ್ವತದ ಸುತ್ತಮುತ್ತ ಭಾರಿ ಮಳೆಯಾಗಿದ್ದರಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರ ನದಿಯ ಉಪನದಿ ದರ್ಪಣತೀರ್ಥ ಸೇತುವೆಯಲ್ಲಿ ಸುಮಾರು 200 ಮೀ. ದೂರದವರೆಗೆ ಹೆದ್ದಾರಿ ಜಲಾವೃತವಾಗಿತ್ತು.

ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಲಿಮಾರಿನಲ್ಲಿ, ಬ್ರಹ್ಮಾವರ ತಾಲ್ಲೂಕಿನ ಕೋಟ, ಹೊನ್ನಾಡಿ, ಗಿಳಿಯಾರಿನಲ್ಲಿ ನೆರೆ ಉಂಟಾಗಿದೆ. ಜಿಲ್ಲೆಯಾದ್ಯಂತ 22 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT