ಶನಿವಾರ, ಸೆಪ್ಟೆಂಬರ್ 24, 2022
24 °C

ದಕ್ಷಿಣ ಕನ್ನಡ: ವ್ಯಾಪಾರ ನಿರ್ಬಂಧ ತೆರವು– 144 ಸೆಕ್ಷನ್‌ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳ ಬಳಿಕ ವ್ಯಾಪಾರ ವಹಿವಾಟು ಹಾಗೂ ಜನರ ಓಡಾಟಕ್ಕೆ ಸಂಬಂಧಿಸಿ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಜಿಲ್ಲಾಡಳಿತವು ತೆರವುಗೊಳಿಸಿದೆ. ಆದರೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 144ರ ಅಡಿ ವಿಧಿಸಿರುವ ನಿಷೇಧಾಜ್ಞೆ ಆ.14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ.

‘ಜಿಲ್ಲೆಯಲ್ಲಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ತಿಳಿಯಾಗಿದ್ದು, ಶಾಂತಿ ಸುವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಗಳಾಗಿವೆ. ವ್ಯಾಪಾರ ವಹಿವಾಟುಗಳಿಗೆ, ಜನರ ಓಡಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಇದೇ 8 ರಿಂದ (ಸೋಮವಾರ) ಜಾರಿಯಾಗುವಂತೆ ಹಿಂಪಡೆಯಲಾಗಿದೆ. ಹಾಗಾಗಿ ಮದ್ಯ ಮಾರಾಟ ಮಳಿಗೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಂಗಡಿಗಳು ಇನ್ನು ಮೊದಲಿನಂತೆಯೇ ವ್ಯಾಪಾರ ವಹಿವಾಟು ನಡೆಸಬಹುದು’ ಎಂದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

‘ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿ ಜಾರಿಗೊಳಿಸಿರುವ ನಿಷೇಧಾಜ್ಞೆ ಆ.14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದಕ್ಕೆ ಅವಕಾಶ ಇಲ್ಲ. ಶಸ್ತ್ರಗಳನ್ನು ಹಿಡಿದುಕೊಂಡು ಓಡಾಡುವಂತಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಸಾರ್ವಜನಿಕರ ಓಡಾಟಕ್ಕೆ ಸಂಬಂಧಿಸಿದಂತೆ ವಿಧಿಸಲಾದ ನಿರ್ಬಂಧಗಳು ತೆರವಗಿವೆ. ಆದರೂ ಜನರು ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು’ ಎಂದು ಅವರು ವಿನಂತಿಸಿದ್ದಾರೆ.

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಮುಂದುವರಿಸಿ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಅವರು ಭಾನುವಾರ ಆದೇಶ ಹೊರಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು