ಶುಕ್ರವಾರ, ಸೆಪ್ಟೆಂಬರ್ 25, 2020
29 °C

ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಮೈದುಂಬುತ್ತಿರುವ ಜಲಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ ಜಲಾಶಯದ ಎಲ್ಲಾ 26 ಗೇಟ್ ಗಳನ್ನು ಈ ವರ್ಷದಲ್ಲಿ ಮೊದಲ ಬಾರಿಗೆ ತೆಗೆದು (ಗೇಟ್ ಹಾಗೂ ಆಲಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟಕ ಸೇರಿ) 1,80,000 ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಬಿಡಲಾಗುತ್ತಿದೆ. ಶುಕ್ರವಾರ ಜಲಾಶಯದ ಬಲಭಾಗದ ಸೀತಮ್ಮನಗಿರಿಯಿಂದ ಕಾಣುತ್ತಿರುವುದು ಹೀಗೆ ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೇಕರ.

ಬೆಂಗಳೂರು: ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಶನಿವಾರವೂ ಆಲಮಟ್ಟಿ, ನಾರಾಯಣಪುರ, ಕೃಷ್ಣರಾಜಸಾಗರ ಜಲಾಶಯಗಳಿಂದ ನೀರನ್ನು ನದಿಗೆ ಹರಿಸಲಾಗಿದ್ದು, ಕೆಲವೆಡೆ ಪ್ರವಾಹ ಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಎರಡು ದಿನಗಳ ಭಾರೀ ಮಳೆಯ ನಂತರ ಬ್ರಹ್ಮಗಿರಿ ಶ್ರೇಣಿಯಲ್ಲಿ ಶನಿವಾರ ಮಳೆ ಕಡಿಮೆಯಾಗಿತ್ತು.

ಕೃಷ್ಣಾ ಒಳಹರಿವು ಹೆಚ್ಚಳ: ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗಿದ್ದು,  ರಾಜಾಪುರ ಬ್ಯಾರೇಜ್‌ನಿಂದ 1.22 ಲಕ್ಷ ಕ್ಯುಸೆಕ್‌, ದೂಧ್‌ಗಂಗಾ ನದಿಯಿಂದ 33,264 ಕ್ಯುಸೆಕ್‌ ಸೇರಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.62 ಲಕ್ಷ ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಶುಕ್ರವಾರ 1.50 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ.

ಜಲಾಶಯದ ಎಲ್ಲ 26 ಗೇಟ್‌ಗಳು ಹಾಗೂ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ಸೇರಿದಂತೆ ಒಟ್ಟಾರೆ 1.80 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ. 519.60 ಮೀ ಗರಿಷ್ಠ ಮಟ್ಟದ ಜಲಾಶಯದಲ್ಲಿ 517.95 ಮೀ.ವರೆಗೆ ನೀರು ಸಂಗ್ರಹವಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಯಾದಗಿರಿ– ರಾಯಚೂರು ಜಿಲ್ಲೆಗಳ ನದಿ ತೀರದಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಿಂದ ಶನಿವಾರ ಮಧ್ಯಾಹ್ನ 75 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಗಂಟೆ ಗಂಟೆಗೂ ಹೆಚ್ಚುತ್ತಿದ್ದು, ಹೊರ ಹರಿವನ್ನು ಹೆಚ್ಚಿಸಲಾಗುತ್ತಿದೆ. ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ಕೇಂದ್ರ ಸಂಪೂರ್ಣ ಮುಳುಗಿದೆ. ನದಿ ಅಂಚಿನ ಕೃಷಿ ಜಮೀನುಗಳೂ ಜಲಾವೃತವಾಗಿವೆ.


ಕಳಸ ಸಮೀಪದ ಕಳಸೇಶ್ವರನಗರದ ಸೇತುವೆಯನ್ನು ಭದ್ರಾ ನದಿಯು ಶನಿವಾರ ಸತತ ಮೂರನೇ ವರ್ಷವೂ ಮುಳುಗಿಸಿತು. (ಚಿತ್ರ: ಇಗ್ನೇಷಿಯಸ್ ಸಂದೇಶ್)

ಜಲಾಶಯಕ್ಕೆ ಶನಿವಾರ 80 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಜಲಾಶಯದ ಮಟ್ಟ 118.15 ಅಡಿಗೆ (ಗರಿಷ್ಠ 124.80) ತಲುಪಿದೆ. ಕಬಿನಿಯಿಂದ 70,600 ಕ್ಯುಸೆಕ್‌ ಹಾಗೂ ನುಗು ಜಲಾಶಯದಿಂದ 9,442 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.

ನಡುಗಡ್ಡೆಯಲ್ಲಿ ಸಿಕ್ಕಿಕೊಂಡ ಕುರಿಗಾಹಿ

ಯಾದಗಿರಿ: ನಾರಾಯಣಪುರ ಜಲಾಶಯದಿಂದ ನೀರನ್ನು ಹೊರಬಿಟ್ಟಿರುವುದರಿಂದಾಗಿ ಹುಣಸಗಿ ಸಮೀಪ ನಡುಗಡ್ಡೆ ಸೃಷ್ಟಿಯಾಗಿದೆ. ಇಲ್ಲಿನ ಐ.ಬಿ. ತಾಂಡಾದ ಕುರಿಗಾಹಿ ಟೋಪಣ್ಣ ಎಂಬುವರು  200ಕ್ಕೂ ಹೆಚ್ಚು ಕುರಿಗಳೊಂದಿಗೆ ಈ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗೆ ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್‌ ತಂಡವನ್ನು ಕರೆಸಲಾಗುತ್ತಿದೆ.

ತಮ್ಮ ತಂದೆ ಟೀಕಪ್ಪ ಅವರೊಂದಿಗೆ ಕುರಿಗಳನ್ನು ಮೇಯಿಸಲು ಟೋಪಣ್ಣ ಎಂಬುವರು 8 ದಿನಗಳ ಹಿಂದೆ ನದಿಯ ಬಳಿಯ ನಡುಗಡ್ಡೆಗೆ ತೆರಳಿದ್ದರು. ಮೂರು ದಿನಗಳ ಹಿಂದೆ ಟೀಕಪ್ಪ ಕೆಲಸದ ನಿಮಿತ್ತ ತಾಂಡಾಕ್ಕೆ ವಾಪಸ್ಸಾಗಿದ್ದರು. ಆದರೆ, ಟೋಪಣ್ಣ ವಾಪಸ್ ಬಂದಿರಲಿಲ್ಲ. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದಾಗಿ ಟೋಪಣ್ಣ ನಡುಗಡ್ಡೆಯಲ್ಲಿಯೇ ಕುರಿಗಳೊಂದಿಗೆ ಸಿಲುಕಿಕೊಂಡಿದ್ದಾರೆ.

ಕಾರ್ಯಾಚರಣೆ ಆರಂಭ: ಒಂದು ಮೃತದೇಹ ಪತ್ತೆ

ಮಡಿಕೇರಿ: ಕೊಡಗಿನ ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿಯ ಬೆಟ್ಟ ಕುಸಿತದ ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಅವರ ಅಣ್ಣ ಆನಂದತೀರ್ಥ (86) ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ನಾರಾಯಣ ಆಚಾರ್‌ ಸೇರಿದಂತೆ ಇನ್ನೂ ನಾಲ್ವರ ಭೂಕುಸಿತದಲ್ಲಿ ನಾಪತ್ತೆಯಾಗಿದ್ದರು.

ತಲಕಾವೇರಿ ಭಾಗದಲ್ಲಿ ಮಳೆ ಅಬ್ಬರ ಕೊಂಚ ತಗ್ಗಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಆರಂಭಿಸಲು ರಕ್ಷಣಾ ತಂಡಕ್ಕೆ ಸಾಧ್ಯವಾಯಿತು. ಪ್ರತಿಕೂಲ ಹವಾಮಾನದಿಂದ ಎರಡು ದಿನ ಕಾರ್ಯಾಚರಣೆ ನಡೆದಿರಲಿಲ್ಲ. ಮನೆಯಿದ್ದ ಸ್ಥಳದಿಂದ ಸುಮಾರು 600 ಮೀಟರ್‌ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

ಮಳೆ ಅಬ್ಬರ ತಗ್ಗಿದರೂ ಪ್ರವಾಹ ಇಳಿದಿಲ್ಲ. ಜಿಲ್ಲೆಯ 52 ಸ್ಥಳಗಳಲ್ಲಿ ಪ್ರವಾಹ ಸ್ಥಿತಿಯಿದ್ದು, 561 ಮಂದಿಯನ್ನು ರಕ್ಷಿಸಿ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. 14 ಕಡೆ ಭೂಕುಸಿತವಾಗಿದೆ. 8 ಕಡೆ ರಸ್ತೆ ಸಂಚಾರ ಬಂದ್‌ ಆಗಿದೆ. 9 ಪರಿಹಾರ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಹಿಳೆ ನೀರುಪಾಲು

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸಮೀಪದ ಅಗ್ರಹಾರ ಗ್ರಾಮದ ಬಳಿ ಗೌರಮ್ಮ (87) ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಗ್ರಾಮದ ಆದಿಸುಬ್ರಹ್ಮಣ್ಯೇಶ್ವರ ದೇಗುಲಕ್ಕೆ ತೆರಳಿದ್ದ ಗೌರಮ್ಮ, ಕೈಕಾಲು ತೊಳೆಯಲು ಹೋದಾಗ ಜಾರಿ ನೀರು ಪಾಲಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ನೀರಕಟ್ಟೆ ಬಳಿ ಪಿಕ್‌ಅಪ್‌ ವಾಹನವೊಂದು ನದಿಯಲ್ಲಿ ಕೊಚ್ಚಿ ಹೋಗಿದ್ದು, ಚಾಲಕ ಪಾರಾಗಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು