ಶುಕ್ರವಾರ, ಮಾರ್ಚ್ 31, 2023
25 °C
ಸಿದ್ದರಾಮಯ್ಯ ಮನೆಗೆ ನಾಳೆ ಮುತ್ತಿಗೆ

ಕೋಲಾರ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧೆಗೆ ದಲಿತ ಮುಖಂಡರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರ ದಿಂದಲೇ ಸ್ಪರ್ಧಿಸಬೇಕು. ಅವರು ನಯಾಪೈಸೆ ಖರ್ಚು ಮಾಡುವುದು ಬೇಡ. ನಾವೇ ನಮ್ಮ ಆಸ್ತಿ ಮಾರಿ ಅವರ ಚುನಾವಣೆ ಖರ್ಚು ವೆಚ್ಚ ನೋಡಿಕೊಳ್ಳುತ್ತೇವೆ’ ಎಂದು ಜಿಲ್ಲೆಯ ದಲಿತ ಮುಖಂಡರು ಹೇಳಿದ್ದಾರೆ.  

ಸಿದ್ದರಾಮಯ್ಯ ಕೋಲಾರ ದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿ ಮಾರ್ಚ್‌ 21ರಂದು ಬೆಂಗಳೂರಿಗೆ ತೆರಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು. 

ಭಾನುವಾರ ಸಭೆ ನಡೆಸಿದ ದಲಿತ ಮುಖಂಡರು, ‘ಕ್ಷೇತ್ರದ 4 ಸಾವಿರಕ್ಕೂ ಅಧಿಕ ದಲಿತರು ಮಂಗಳವಾರ ಬೆಳಿಗ್ಗೆಯೇ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ. ಅವರು ಸ್ಪರ್ಧೆಗೆ ಒಪ್ಪುವವರೆಗೆ ಮನೆ ಬಿಟ್ಟು ಬರಲ್ಲ’ ಎಂದು ಘೋಷಿಸಿದರು.

ಕೋಲಾರ ಅಹಿಂದ ಸಂಘಟನೆಗಳ ಮುಖಂಡರು ಭಾನುವಾರ ಪ್ರತ್ಯೇಕ ಸಭೆ ನಡೆಸಿ ಮಂಗಳವಾರ ಬೆಳಿಗ್ಗೆ  ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದರು. ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು

ಸಮೀಕ್ಷೆ: ಸ್ಥಳೀಯರ ಸಂದೇಹ

ಸಮೀಕ್ಷೆ ನಡೆಸಲು ಬಂದಿದ್ದ ಆಂಧ್ರಪ್ರದೇಶದ ಖಾಸಗಿ ಏಜೆನ್ಸಿಯ ಸುನಿಲ್‌ ಕನುಗೋಲು ಎಂಬುವರು ಕೋಲಾರ ನಗರ ಹೊರವಲಯದ ನಾಗಾರ್ಜುನ್ ಹೋಟೆಲ್‍ನಲ್ಲಿ ತಂಗಿದ್ದರು. ಅದರ ಮಾಲೀಕ ಜೆಡಿಎಸ್‌ ಪಕ್ಷದವರು. ಆಮಿಷಕ್ಕೆ ಒಳಗಾಗಿ ರಾಹುಲ್‌ ಗಾಂಧಿ ಅವರಿಗೆ ತಪ್ಪುಮಾಹಿತಿ ನೀಡಿರಬಹುದು ಎಂದು ಅಹಿಂದ ಮುಖಂಡರು ಆರೋಪಿಸಿದರು.

‘ಸುನಿಲ್‌ ಕನುಗೋಲು ಸಮೀಕ್ಷೆ ಬಗ್ಗೆ ಅನುಮಾನವಿದೆ. ಸಮೀಕ್ಷೆ ವೇಳೆ ಗ್ರಾಮಾಂತರದಲ್ಲಿ ಪಕ್ಷದ ಸಂಘಟನೆ ನಡೆದಿರಲಿಲ್ಲ. ಅವರು ಈಗ ಬಂದು ಸಮೀಕ್ಷೆ ಮಾಡಬೇಕಿತ್ತು’ ಎಂದು ನಗರಸಭೆ ಸದಸ್ಯ ಅಂಬರೀಷ್ ಹೇಳಿದರು.

‘ನಮ್ಮ ಸಮೀಕ್ಷೆ ತಂದೆ ಪರವಾಗಿತ್ತು’

ತಿ.ನರಸೀಪುರ (ಮೈಸೂರು ಜಿಲ್ಲೆ): ‘ಕೋಲಾರದಲ್ಲಿ ನಾನೇ ಚುನಾವಣಾ ಸಮೀಕ್ಷೆ ಮಾಡಿಸಿದ್ದೆ. ತಂದೆ ಪರವಾಗಿಯೇ ವರದಿ ಬಂದಿತ್ತು. ಆದರೂ ಅಲ್ಲಿ ಸ್ಪರ್ಧೆ ಬೇಡ ಎಂದು ಹೈಕಮಾಂಡ್‌ ಹೇಳಿರುವುದರ ಕಾರಣ ಗೊತ್ತಾಗಿಲ್ಲ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೋಲಾರದಲ್ಲಿ ನಡೆದ ಬೇರೆ ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇರುವುದಾಗಿ ವರದಿಗಳು ಬಂದಿದ್ದವು. ‘ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷದ ನಾಯಕರು, ಆ ಕ್ಷೇತ್ರದ ಮುಖಂಡರೊಂದಿಗೆ ಸಮಾಲೋಚಿಸಬೇಕಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು