ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಕಟ್ಟಡ: ಶಾಲೆಗಳಿಗೆ ರಜೆ ನೀಡಲು ಸೂಚನೆ

ಮಳೆಗಾಲಕ್ಕೆ ಮುನ್ನ ದುರಸ್ತಿಗೆ ಮುಂದಾಗದ ಸರ್ಕಾರ: ಆರೋಪ
Last Updated 22 ಜುಲೈ 2022, 19:30 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ವಿವಿಧೆಡೆ ಭಾರಿ ಮಳೆ ಸುರಿಯುತ್ತಿರುವ ಕಾರಣ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಈಚೆಗೆ ಆದೇಶಿಸಿದೆ.

ಕಟ್ಟಡಗಳ ದುರಸ್ತಿಗೆ ಮಳೆಗಾಲಕ್ಕೆ ಮೊದಲೇ ಕ್ರಮ ಕೈಗೊಳ್ಳದೆ ಈಗ ರಜೆ ನೀಡಲು ಆದೇಶಿಸಿರುವುದು ಶಾಲೆಗಳ ಗುಣಮಟ್ಟ ಸುಧಾರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳು ದೂರಿವೆ.

‘ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕೊಠಡಿ,ಕಟ್ಟಡ (ಶೌಚಾಲಯ ಸೇರಿ)ಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಶಾಲಾ ಕೊಠಡಿ, ಆವರಣದಲ್ಲಿ ಮಳೆ ನೀರು ನಿಲ್ಲುವಂತಿದ್ದರೆ ಪೂರ್ವಾನುಮತಿ ಪಡೆದು ಶಾಲೆಗಳಿಗೆ ರಜೆ ಘೋಷಿಸಬೇಕು. ಇದಕ್ಕೆ ತಪ್ಪಿದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರನ್ನೇ ಹೊಣೆ ಮಾಡಲಾಗುವುದು’ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

‘ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಾಲಮಿತಿಯಲ್ಲಿ ಒದಗಿಸುವುದು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌–8ರ ಅನ್ವಯ ರಾಜ್ಯ ಸರ್ಕಾರದ ಜವಾಬ್ದಾರಿ. ಇದನ್ನು ಶಿಕ್ಷಕರು ಅಥವಾ ಎಸ್‌ಡಿಎಂಸಿಗಳಿಗೆ ವರ್ಗಾಯಿಸುವುದು ತಪ್ಪು’ ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆ ಮಹಾಪೋಷಕ ಪ್ರೊ.ವಿ.ಪಿ. ನಿರಂಜನಾರಾಧ್ಯ ದೂರಿದ್ದಾರೆ.

‘ಕಾಯ್ದೆ ಪ್ರಕಾರ ಶಾಲೆಗಳಿಗೆ 2013ರಲ್ಲೇ ಶೇ 100ರಷ್ಟು ಸೌಕರ್ಯ ಲಭ್ಯವಿರಬೇಕಿತ್ತು. ಕಾಯ್ದೆ ಜಾರಿಯಾಗಿ 12 ವರ್ಷ ಕಳೆದರೂ ರಾಜ್ಯದಲ್ಲಿ ಸೌಲಭ್ಯ ಹೊಂದಿರುವ ಶಾಲೆಗಳ ಸಂಖ್ಯೆ ಕೇವಲ ಶೇ 23.6ರಷ್ಟು. ಉಳಿದ ಶೇ 76.4ರಷ್ಟು ಶಾಲೆಗಳಲ್ಲಿ ಸೌಲಭ್ಯಗಳು ಇಲ್ಲವೆಂದು ಕೇಂದ್ರ ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ.

***

ನಮ್ಮ ಶಾಲೆಯ 4 ಕೊಠಡಿಗ, ಶೌಚಾಲಯ ಶಿಥಿಲಗೊಂಡಿವೆ. ಬೆಂಚ್‌ ಇಲ್ಲದ್ದರಿಂದ ವಿದ್ಯಾರ್ಥಿಗಳು ನೆಲದ ಮೇಲೇ ಕೂರುತ್ತಾರೆ. ಶಾಲಾಭಿವೃದ್ಧಿಗಾಗಿ ದಾನಿಗಳನ್ನು ಹುಡುಕಬೇಕಿದೆ

-ಬೆಣ್ಣೆಹಳ್ಳಿ ಬಸವರಾಜ, ಎಸ್‌ಡಿಎಂಸಿ ಅಧ್ಯಕ್ಷ, ಮಲೇಬೆನ್ನೂರು, ಶಾಲೆ

***

ಹರಿಹರದ ಹಾಲಿವಾಣದ ಪ್ರಾಥಮಿಕ ಶಾಲೆ ಕಟ್ಟಡ ಪೂರ್ಣ ಶಿಥಿಲಗೊಂಡಿದ್ದು, ಪ್ರೌಢಶಾಲೆ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ನೂತನ ಕಟ್ಟಡದ ಬೇಡಿಕೆ ಈಡೇರಿಲ್ಲ.

–ಶಿವಕ್ಕಳ ಅಂಜನೇಯ, ಎಸ್‌ಡಿಎಂಸಿಗಳ ಜಿಲ್ಲಾ ಅಧ್ಯಕ್ಷ, ದಾವಣಗೆರೆ

***

ಅಂಕಿ–ಅಂಶ...

ರಾಜ್ಯದ 1ರಿಂದ 8ನೇ ತರಗತಿ ಮಾಹಿತಿ...

2,22,684

ಸರ್ಕಾರಿ ಶಾಲೆಗಳ ಕೊಠಡಿಗಳ ಒಟ್ಟು ಸಂಖ್ಯೆ

36,496

ಭಾರಿ ಹಾನಿಗೊಳಗಾದ ಕೊಠಡಿಗಳು

32,760

ಅಲ್ಪ ಹಾನಿಗೊಳಗಾದ ಕೊಠಡಿಗಳು

...................

9 ಮತ್ತು 10ನೇ ತರಗತಿ

37,244

ಸರ್ಕಾರಿ ಶಾಲೆಗಳ ಕೊಠಡಿಗಳ ಒಟ್ಟು ಸಂಖ್ಯೆ

3,750

ಭಾರಿ ಹಾನಿಗೊಳಗಾದ ಕೊಠಡಿಗಳು

5,129

ಅಲ್ಪ ಹಾನಿಗೊಳಗಾದ ಕೊಠಡಿಗಳು

ಮಾಹಿತಿ: ವಿಶ್ಲೇಷಣಾ ವರದಿ 2020–2021, ಸಮಗ್ರ ಶಿಕ್ಷಣ ಅಭಿಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT