ಸೋಮವಾರ, ಆಗಸ್ಟ್ 8, 2022
22 °C
ಮುಖ್ಯಮಂತ್ರಿಗೆ ಪತ್ರ ಬರೆದ ಡಿಸಿಎಂ ಗೋವಿಂದ ಕಾರಜೋಳ

118 ಎಇಇಗಳು ಜಲ ಸಂಪನ್ಮೂಲದಲ್ಲೇ ಮುಂದುವರಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿರುವ 118 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು (ಎಇಇ) ಅದೇ ಇಲಾಖೆಯಲ್ಲಿ ಮುಂದುವರಿಸುವಂತೆ ಕೋರಿ ಲೋಕೋಪಯೋಗಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಲೋಕೋಪಯೋಗಿ, ಜಲ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ನಡುವೆ ಎಂಜಿನಿಯರ್‌ಗಳ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ನಡುವೆಯೇ ಯಾವುದೇ ಪೂರ್ವಭಾವಿ ಮಾಹಿತಿ ನೀಡದೆ 118 ಎಇಇಗಳ ಸೇವೆಯನ್ನು ಲೋಕೋಪಯೋಗಿ ಇಲಾಖೆಗೆ ಹಿಂದಿರುಗಿಸಿ ಮೇ 27ರಂದು ಆದೇಶ ಹೊರಡಿಸಿರುವ ಜಲ ಸಂಪನ್ಮೂಲ ಇಲಾಖೆಯ ನಿಲುವನ್ನು ಗೋವಿಂದ ಕಾರಜೋಳ ಆಕ್ಷೇಪಿಸಿದ್ದಾರೆ.

’ಈಗಾಗಲೇ ಲೋಕೋಪಯೋಗಿ ಇಲಾಖೆಯಲ್ಲಿ ವೃಂದ ಬಲಕ್ಕಿಂತ ಹೆಚ್ಚಿನ ಎಂಜಿನಿಯರ್‌ಗಳು ಇದ್ದಾರೆ. ಯಾವುದೇ ಇಲಾಖೆಯನ್ನು ಆಯ್ಕೆಮಾಡಿಕೊಳ್ಳದ ಎಲ್ಲರೂ ಲೋಕೋಪಯೋಗಿ ಇಲಾಖೆಯಲ್ಲೇ ಮುಂದುವರಿದಿದ್ದಾರೆ. ಈ ಹಂತದಲ್ಲಿ 118 ಎಇಇಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಹುದ್ದೆಗಳು ಲಭ್ಯವಿಲ್ಲ. ಆದ್ದರಿಂದ ಅವರನ್ನು ಜಲ ಸಂಪನ್ಮೂಲ ಇಲಾಖೆಯ ಸೇವೆಯಲ್ಲೇ ಮುಂದುವರಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮೂರೂ ಇಲಾಖೆಗಳ ವೃಂದ ಬಲಕ್ಕೆ ಅನುಗುಣವಾಗಿ ಅಧಿಕಾರಿಗಳನ್ನು ಹಂಚಿಕೆ ಮಾಡಬೇಕಿದೆ. ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಇವೆ. ಮೂರೂ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಭರ್ತಿಯಾಗಿರುವ ಹುದ್ದೆಗಳ ಸಮಗ್ರ ಮಾಹಿತಿ ಕಲೆಹಾಕಿದ ಬಳಿಕ ಅಧಿಕಾರಿಗಳ ಹಂಚಿಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ತಜ್ಞರ ಸಮಿತಿಯ ತೀರ್ಮಾನಕ್ಕೆ ವಿರುದ್ಧವಾಗಿ 118 ಎಇಇಗಳ ಸೇವೆಯನ್ನು ಹಿಂದಿರುಗಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು