ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿಯಂತ್ರಣಕ್ಕೆ ವಿಕೇಂದ್ರೀಕರಣ ಮಾರ್ಗ: ಸಿಎಂಗೆ ಬಿ.ಆರ್‌. ಪಾಟೀಲ ಪತ್ರ

Last Updated 19 ಮೇ 2021, 16:22 IST
ಅಕ್ಷರ ಗಾತ್ರ

ಕಲಬುರ್ಗಿ:ಕೇರಳ ಮಾದರಿಯಂತೆ ನಮ್ಮ ರಾಜ್ಯದಲ್ಲಿಯೂ ಗ್ರಾಮಪಂಚಾಯಿತಿ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ನೀಡಿ ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಕೇಂದ್ರೀಕರಣದ ಮಾರ್ಗ ಅನುಸರಿಸಬೇಕು ಎಂದು ಮಾಜಿ ಶಾಸಕ ಬಿ.ಆರ್‌. ಪಾಟೀಲ ಸಲಹೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, ‘ಈ ಬಾರಿ ಕೊರೊನಾ ಸೋಂಕು ಅತಿವೇಗವಾಗಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿ ಜನತೆಯಲ್ಲಿ ಆತಂಕ ಮೂಡಿಸಿದೆ. ನಮ್ಮ ದೇಶದ ಪಂಚಾಯತ್ ರಾಜ್ ವ್ಯವಸ್ಥೆ ತುಂಬಾ ಸದೃಢ ಮತ್ತು ಪರಿಣಾಮಕಾರಿಯಾಗಿ ಇರುವುದರಿಂದ ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಗ್ರಾಮೀಣ ಭಾಗದ ಜನತೆಗೆ ಅನುಕೂಲ ಮಾಡಿಕೊಡಬಹುದು’ ಎಂದಿದ್ದಾರೆ.

ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಆಯಾ ಗ್ರಾಮಗಳ ಶಾಲಾ ಶಿಕ್ಷಕರನ್ನು ಒಳಗೊಂಡು ಒಂದು ಸಮಿತಿಯನ್ನು ರಚಿಸಿ ಆ ಸಮಿತಿಗೆ ಕೋವಿಡ್ ನಿರ್ವಹಣೆ ಜವಾಬ್ದಾರಿ ವಹಿಸಿದರೆ ಸ್ವಲ್ಪಮಟ್ಟಿಗೆ ಸೋಂಕಿನ ಹಾವಳಿ ತಗ್ಗಬಹುದು ಎಂದು ಹೇಳಿದ್ದಾರೆ.

‘ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮಪಂಚಾಯಿತಿಗಳಿಗೆ ವಿಶೇಷ ಅಧಿಕಾರವಿದೆ. ಕೋವಿಡ್ ನಿರ್ವಹಣೆಯಲ್ಲಿ ಗ್ರಾಮಪಂಚಾಯಿತಿಗಳ ಜವಾಬ್ದಾರಿ ತುಂಬಾ ಪ್ರಮುಖವಾಗಿದೆ. ಗ್ರಾಮೀಣ ಭಾಗದ ಸೋಂಕಿತರನ್ನು ಗ್ರಾಮಗಳಲ್ಲಿರುವ ಶಾಲೆ, ಸಮುದಾಯ ಭವನ ಸೇರಿದಂತೆ ವಿಶಾಲವಾದ ಪ್ರದೇಶಗಳನ್ನು ಉಪಯೋಗಿಸಿಕೊಂಡು ಅಲ್ಲಿಯೇ ಸಾಂಸ್ಥಿಕ ಕ್ವಾರಂಟೈನ್‌ಮಾಡಿ ಸೋಂಕಿತರಿಗೆ ಅಗತ್ಯವಾದ ಚಿಕಿತ್ಸೆ ಒದಗಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಈ ಸೋಂಕು ಹತೋಟಿಗೆ ಬರಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT