ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ತಾಯಿ,ಅವಳಿ ಶಿಶುಗಳ ಸಾವು

ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂದು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ
Last Updated 3 ನವೆಂಬರ್ 2022, 20:40 IST
ಅಕ್ಷರ ಗಾತ್ರ

ತುಮಕೂರು:ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಲ್ಲ ಎಂದು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಅನಾಥ ಮಹಿಳೆಯೊಬ್ಬರು ತೀವ್ರ ರಕ್ತ ಸ್ರಾವದಿಂದ ಗುರುವಾರ ಮೃತಪಟ್ಟಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಕೆಯ ಗರ್ಭದಲ್ಲಿದ್ದ ಅವಳಿ ಶಿಶುಗಳು ಕೂಡ ಮೃತಪಟ್ಟಿವೆ. ಅವರಿಗೆ ಆರು ವರ್ಷದ ಮಗಳಿದ್ದಾಳೆ.

ಭಾರತಿ ನಗರದಲ್ಲಿ ವಾಸವಿದ್ದ ಕಸ್ತೂರಿ (30) ಎಂಬ ಮಹಿಳೆಗೆ ಬುಧವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಒಬ್ಬಂಟಿ
ಯಾಗಿದ್ದ ಆಕೆಯನ್ನು ಅಕ್ಕಪಕ್ಕದ ಮನೆಯ ಮಹಿಳೆಯರು ಜಿಲ್ಲಾ ಆಸ್ಪತ್ರೆಗೆ ಕರೆದು
ಕೊಂಡು ಹೋಗಿದ್ದರು. ಆದರೆ, ಆಕೆಯ ಬಳಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣ ನೀಡಿದ ಜಿಲ್ಲಾಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರು.

ಮಹಿಳೆಯ ಜತೆಯಲ್ಲಿದ್ದ ನೆರೆ ಹೊರೆಯವರು ವೈದ್ಯರು ಮತ್ತು ಸಿಬ್ಬಂದಿಯನ್ನು ಪರಿಪರಿಯಾಗಿ ಬೇಡಿಕೊಂಡರೂ ಅವರ ಮನಸ್ಸು ಕರಗಿಲ್ಲ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದರು.

ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ತೆರಳಲು ಹಣ ಹೊಂದಿಸಲಾಗದ ಕಾರಣ ರಾತ್ರಿ ಮನೆಗೆ ವಾಪಸ್ಸಾಗಿದ್ದರು. ಗುರುವಾರ ಬೆಳಗಿನ ಜಾವ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡು, ಮನೆಯಲ್ಲಿಯೇ ಹೆರಿಗೆಯಾಗಿದೆ.

ಮೊದಲಿಗೆ ಗಂಡು ಮಗು ಜನಿಸುವ ಹೊತ್ತಿಗೆ ತೀವ್ರ ರಕ್ತ ಸ್ರಾವವಾಗಿದ್ದು, ಆ ವೇಳೆಗೆ ಮಗುವೂ ಸಾವನ್ನಪ್ಪಿದೆ. ಮತ್ತೊಂದು ಗಂಡು ಮಗು ಜನಿಸುವ ಮುನ್ನವೇ ಮಹಿಳೆ
ಮೃತಪಟ್ಟಿದ್ದಾರೆ.

ಈ ವಿಷಯ ತಿಳಿಯುತ್ತಲೇ ಅಕ್ಕಪಕ್ಕದ ಮನೆಯವರು ಸೇರಿ ಗಲಾಟೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎನ್.ಮಂಜುನಾಥ್, ಜಿಲ್ಲಾ ಸರ್ಜನ್ ಡಾ.ವೀಣಾ ಅವರು ಸೇರಿದ್ದ ಜನರಿಂದ ಮಾಹಿತಿ ಪಡೆದರು.

‘ತುಂಬು ಗರ್ಭಿಣಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡದೆ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಎದ್ದು ಕಾಣುತ್ತದೆ. ವೈದ್ಯೆ ಮತ್ತು ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಮಹಿಳೆ ಮೃತಪಟ್ಟ ಸ್ಥಳಕ್ಕೆ ಮೇಯರ್ ಎಂ.ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯ ಶ್ರೀನಿವಾಸ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು.

ಸಿಗ್ನಲ್‌ನಲ್ಲೇ ಪರದಾಡಿದ ತಾಯಿ–ಹಸುಗೂಸು

‘ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಗಾಬರಿಯಲ್ಲಿದ್ದರಿಂದ ಹೆಲ್ಮೆಟ್‌ ತರಲಾಗಲಿಲ್ಲ. ದಂಡ ಕಟ್ಟಲು ಹಣ ಕೂಡ ಇಲ್ಲ, ಗಾಡಿ ಬಿಡಿ’ ಎಂದು ದಂಪತಿ ಪರಿಪರಿಯಾಗಿ ಕೇಳಿಕೊಂಡರು. ಮಗುವನ್ನು ಆಟೊರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಿರಿ; ₹ 500 ದಂಡ ಕಟ್ಟದಿದ್ದರೆ ವಾಹನ ಬಿಡುವುದಿಲ್ಲ’ ಎಂದು ಎಎಸ್‌ಐ ಪಟ್ಟುಹಿಡಿದರು.

ಇದರಿಂದ ಗೊಂದಲಕ್ಕೀಡಾದ ಅಭಿಷೇಕ್‌ ಸಿಗ್ನಲ್‌ನಲ್ಲೇ ಪತ್ನಿ– ಮಗುವನ್ನು ಬಿಟ್ಟು ಎಟಿಎಂನಿಂದ ಹಣ ತರಲು ತೆರಳಿದರು. ಹಲವು ಎಟಿಎಂ ಕೇಂದ್ರಗಳಲ್ಲಿ ತಾಂತ್ರಿಕ ತೊಂದರೆ ಇದ್ದ ಕಾರಣ ಹಣ ತರಲು ಅರ್ಧ ಗಂಟೆ ಬೇಕಾಯಿತು. ದಂಡ ಕಟ್ಟಿದ ನಂತರವೇ ಎಎಸ್‌ಐ ವಾಹನ ಬಿಟ್ಟು ಕಳುಹಿಸಿದರು. ಅಲ್ಲಿವರೆಗೆ ಮಳೆಯಲ್ಲೇ ತಾಯಿಯು ಮಗುವನ್ನು ಮಡಿಲಲ್ಲಿಟ್ಟುಕೊಂಡು ರಸ್ತೆ ಬದಿಯಲ್ಲಿ ಕುಳಿತಿದ್ದರು.

‘ಚಳಿಯಿಂದ ನಡುಗುತ್ತಿದ್ದ ಮಗು ವನ್ನು ನೋಡಿದರೂ ಪೊಲೀಸ್‌ ಅಧಿಕಾರಿ ದುರ್ವರ್ತನೆ ತೋರಿದರು. ಎಷ್ಟೇ ವಿನಂತಿಸಿದರೂ ಸ್ಪಂದಿಸಲಿಲ್ಲ’ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಗಾರೆ ಕೆಲಸ ಮಾಡುತ್ತಿದ್ದ ಅನಾಥೆ!

ಮೂಲತಃ ತಮಿಳುನಾಡಿನವರಾದ ಕಸ್ತೂರಿ ಹಾಗೂ ಆಕೆಯ ಗಂಡ ಈ ಮೊದಲು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ನಾಲ್ಕು ತಿಂಗಳ ಹಿಂದೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ತನ್ನ ಆರು ವರ್ಷದ ಮಗಳ ಜತೆಯಲ್ಲಿ ಕಸ್ತೂರಿ ನಗರಕ್ಕೆ ವಲಸೆ ಬಂದಿದ್ದರು. ಇಲ್ಲೂ ಸರಿಯಾಗಿ ಕೆಲಸ ಸಿಗದೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ಭಾರತೀನಗರದಲ್ಲಿ ಸರೋಜಮ್ಮ ಎಂಬುವರು ನೀಡಿದ್ದ ಒಂದು ಸಣ್ಣ ಮನೆಯಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈಗ ಮಹಿಳೆ ಸಾವಿನೊಂದಿಗೆ ಆಕೆಯ ಆರು ವರ್ಷದ ಮಗಳು ಅನಾಥವಾಗಿದ್ದಾಳೆ.

ವೈದ್ಯೆ, ಮೂವರು ನರ್ಸ್ ಅಮಾನತು

ಪ್ರಕರಣ ಸಂಬಂಧ ಕರ್ತವ್ಯ ಲೋಪ ಆರೋಪದ ಮೇಲೆ ಡಾ. ಉಷಾ ಅವರನ್ನು ಅಮಾನತು ಮಾಡಲಾಗಿದೆ. ಬುಧವಾರ ಸಂಜೆ ಕರ್ತವ್ಯದ ಮೇಲಿದ್ದ ನರ್ಸ್‌ಗಳಾದ ಯಶೋದ, ಸವಿತಾ, ವಿದ್ಯಾಭಾರತಿ ಅವರನ್ನು ಅಮಾನತು ಮಾಡಿ ತುಮಕೂರು ಜಿಲ್ಲಾ ಸರ್ಜನ್ ಡಾ.ವೀಣಾ ಆದೇಶಿಸಿದ್ದಾರೆ. ಡಾ.ವೀಣಾ ಅವರಿಗೆ ಕಾರಣ ಕೇಳಿ ಡಿಎಚ್‌ಒ ಡಾ.ಬಿ.ಎನ್.ಮಂಜುನಾಥ್ ನೋಟಿಸ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT