ಭಾನುವಾರ, ಮಾರ್ಚ್ 26, 2023
24 °C

ಬೆಳಕಿನ ಹಬ್ಬಕ್ಕೆ ಜನರಲ್ಲಿ ಖರೀದಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ದೀಪಾವಳಿ ಆಚರಣೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ನಗರದ ಮಾರುಕಟ್ಟೆಗಳಲ್ಲಿ ಮಂಗಳವಾರ ನೆರೆದಿದ್ದರು. ಬೆಳಕಿನ ಹಬ್ಬಕ್ಕೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ, ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮಳಿಗೆಗಳಲ್ಲಿ ಮುಗಿಬಿದ್ದರು.

ಕಳೆದ ವರ್ಷ ಕೋವಿಡ್‌ ಕಾರಣದಿಂದ ಎಲ್ಲರೂ ಸರಳವಾದ ದೀಪಾವಳಿ ಆಚರಿಸಿದ್ದರು. ಈ ವರ್ಷ ಕೋವಿಡ್‌ ತೀವ್ರತೆ ತಗ್ಗಿರುವುದರಿಂದ ಬೆಂಗಳೂರಿಗರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಹಬ್ಬಕ್ಕೆ ಎಂದಿನಂತೆ ಹೂವಿನ ದರಗಳು ಏರಿಕೆ ಕಂಡಿವೆ. ಕೆ.ಆರ್‌.ಮಾರುಕಟ್ಟೆ, ಬಸವನಗುಡಿ, ಹೆಬ್ಬಾಳ, ರಾಜಾಜಿನಗರ, ಮಲ್ಲೇಶ್ವರ, ಜಯನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ.

ಬುಧವಾರದಿಂದ ಶುಕ್ರವಾರದವರೆಗೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯುವ ಕಾರಣದಿಂದ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಮಂಗಳವಾರವೇ ಕೊಂಡೊಯ್ದರು.

‘ದೀಪಾವಳಿಗೆ ಹೆಚ್ಚು ಖರೀದಿಯಾಗುವುದು ಸೇವಂತಿಗೆ ಹಾಗೂ ಚೆಂಡು ಹೂ. ಆದರೆ, ಈ ಹಬ್ಬಕ್ಕೆ ಗುಣಮಟ್ಟದ ಹೂಗಳು ಮಾರುಕಟ್ಟೆಗೆ ಬರುತ್ತಿಲ್ಲ. ಮಳೆಯಿಂದಾಗಿ ಸೇವಂತಿಗೆ ಹಾಗೂ ಚೆಂಡು ಹೂ ಭಾರಿ ಹಾನಿಗೆ ಒಳಗಾಗಿದೆ. ಹಾಗಾಗಿ ಬೆಲೆಗಳು ಅಷ್ಟೇನೂ ಏರಿಕೆಯಾಗಿಲ್ಲ. ಉಳಿದ ಹೂಗಳ ದರ ಎಂದಿನಂತೆ ಸ್ವಲ್ಪ ಹೆಚ್ಚಾಗಿದ್ದು, ಗುರುವಾರದ ವೇಳೆಗೆ ಮತ್ತಷ್ಟು ಏರಬಹುದು’ ಎಂದು ಕೆ.ಆರ್‌.ಮಾರುಕಟ್ಟೆಯ ಹೂವಿನ ವರ್ತಕ ದಿವಾಕರ್ ತಿಳಿಸಿದರು.

ಪೂಜಾ ಸಾಮಗ್ರಿಗಳ ಖರೀದಿ ಭರಾಟೆ: ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕರು ಹಿಂದಿನಿಂದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದೇ ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ. ಪೂಜೆಯ ವೇಳೆ ನೋಮುದಾರ, ಅರಿಶಿನ–ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ, ಪೂಜಾ ಸಾಮಗ್ರಿಗಳ ಮಳಿಗೆಗಳ ಬಳಿಯೂ ಜನರ ದಂಡು ಬೀಡುಬಿಟ್ಟಿತ್ತು.

ಬೀದಿಗಳಲ್ಲಿ ಹಣತೆಯ ರಾಶಿ: ದೀಪಾವಳಿಯ ಸೂಚಕವಾಗಿ ಮನೆಯ ಹೊರ ಮತ್ತು ಒಳಭಾಗಗಳಲ್ಲಿ ದೀಪ
ಗಳನ್ನು ಬೆಳಗುವುದರಿಂದ ಮಣ್ಣಿನ ಹಣತೆಗಳನ್ನು ರಸ್ತೆ ಬದಿಗಳಲ್ಲಿ ರಾಶಿ ಹಾಕಲಾಗಿದ್ದು, ಹಬ್ಬಕ್ಕಾಗಿ ಸಿದ್ಧಪಡಿಸಿರುವ ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿದ್ದವು. ದೀಪವೊಂದರ ಬೆಲೆ ₹5ರಿಂದ ಆರಂಭಗೊಂಡು ₹300ವರೆಗೆ ಮಾರಾಟವಾಗುತ್ತಿದೆ.

ಹೂವಿನ ದರಪಟ್ಟಿ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಮಲ್ಲಿಗೆ;1,000

ಕನಕಾಂಬರ;1,200

ಕಾಕಡ;500

ಗುಲಾಬಿ;200

ಸೇವಂತಿಗೆ;100

ಸುಗಂಧರಾಜ;80

ಚೆಂಡುಹೂವು;50

----

ಹಣ್ಣು;ಚಿಲ್ಲರೆ ದರ;ಹಾಪ್‍ಕಾಮ್ಸ್ ದರ

ಸೇಬು;120;140

ದಾಳಿಂಬೆ;150;192

ಕಿತ್ತಳೆ;70;50

ದ್ರಾಕ್ಷಿ;50;54

ಸೀಬೆ;50;53

ಸಪೋಟ;40;40

ಸೀತಾಫಲ;40;51

ಮೂಸಂಬಿ;60;65

ಅನಾನಸ್;40;41

ಏಲಕ್ಕಿ ಬಾಳೆ;50;54

––

ತರಕಾರಿ;ಚಿಲ್ಲರೆ ದರ;ಹಾಪ್‍ಕಾಮ್ಸ್ ದರ

ಬಟಾಣಿ;180;250

ಬೆಳ್ಳುಳ್ಳಿ;90;136

ಟೊಮೆಟೊ;40;48

ಕ್ಯಾರೆಟ್;50;62

ಶುಂಠಿ;60;78

ಈರುಳ್ಳಿ;45;52

ಬೀನ್ಸ್;40;50

ಬದನೆ;40;54

ಮೆಣಸಿನಕಾಯಿ;40;50

ಬೆಂಡೆಕಾಯಿ;30;46

ಹೂಕೋಸು;50;67

ಆಲೂಗಡ್ಡೆ;30;36

ಮೂಲಂಗಿ;35;48

ಎಲೆಕೋಸು;20;23

–– 

ಸೊಪ್ಪು;ಚಿಲ್ಲರೆ(ಕಟ್ಟಿಗೆ);ಹಾಪ್‍ಕಾಮ್ಸ್ (ಕೆ.ಜಿ.ಗೆ)

ಮೆಂತ್ಯೆ;35;147

ಕೊತ್ತಂಬರಿ;30;100

ಸಬ್ಬಕ್ಕಿ;30;100

ಪಾಲಕ್;25;104

ದಂಟು;15;64.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು