ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಲಾಕ್‌ಡೌನ್‌ ಅವಧಿಯಲ್ಲಿ ಅರಣ್ಯ ನಾಶ ಹೆಚ್ಚಳ

Last Updated 29 ಮೇ 2021, 22:04 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಮಲೆನಾಡಿನಲ್ಲಿ ಅರಣ್ಯ ನಾಶದ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಅರಣ್ಯ ಸಚಿವರಿಗೆ ವರದಿ ಸಲ್ಲಿಸಿರುವ ರಾಜ್ಯ ಜೀವವೈವಿಧ್ಯ ಮಂಡಳಿ, ಈ ಕುರಿತು ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಅರಣ್ಯ ನಾಶ ಮತ್ತು ಹಸಿ ಮರಗಳ ಕಡಿತಲೆ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿರುವ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪ್ರಾಥಮಿಕ ಸಮೀಕ್ಷಾ ವರದಿಯನ್ನು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಸಲ್ಲಿಸಿದ್ದಾರೆ.

‘ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕೋವಿಡ್‌ ನಿಯಂತ್ರಣ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕೆಲವು ಸಮಾಜ ವಿರೋಧಿ ವ್ಯಕ್ತಿಗಳು ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ನಗರಗಳಿಂದ ಹಳ್ಳಿಗಳಿಗೆ ಬಂದಿರುವವರು ಸೇರಿದಂತೆ ಕೆಲವರು ಅರಣ್ಯ ನಾಶದಲ್ಲಿ ತೊಡಗಿದ್ದಾರೆ. ಈ ಕೃತ್ಯಕ್ಕಾಗಿ ಜೆಸಿಬಿ, ವಿದ್ಯುತ್‌ ಚಾಲಿತ ಯಂತ್ರಗಳನ್ನು ಬಳಸುತ್ತಿದ್ದಾರೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅರಣ್ಯ ನಾಶ ನಡೆದಿರುವ ಕುರಿತು ಮಂಡಳಿಗೆ ದೂರುಗಳು ಬಂದಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ವಗರೆಹಳ್ಳಿಯ ‘ಪಾರಂಪರಿಕ ಜೀವವೈವಿಧ್ಯ ತಾಣ’ವಾಗಿರುವ ಹೊಗರೆಕಾನುಗಿರಿ ಬೆಟ್ಟದ ಬುಡದಲ್ಲಿ 12ಕ್ಕೂ ಹೆಚ್ಚು ಸ್ಥಳಗಳಲ್ಲಿ 480 ಎಕರೆಯಷ್ಟು ಅರಣ್ಯ ನಾಶ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಬಾಳೂರು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 472ಕ್ಕೂ ಹೆಚ್ಚು ಬೃಹತ್‌ ಮರಗಳನ್ನು ಎರಡು ವಾರಗಳ ಅವಧಿಯಲ್ಲಿ ಕತ್ತರಿಸಲಾಗಿದೆ. ಕೊಪ್ಪ ತಾಲ್ಲೂಕಿನ ಹರಿಹರಪುರ ಸಮೀಪದ ಸೂರಳಿ ಎಂಬಲ್ಲಿ 42 ಎಕರೆಗೂ ಹೆಚ್ಚು ಅರಣ್ಯ ನಾಶ ಮಾಡಲಾಗಿದೆ. ಕೊಪ್ಪ ತಾಲ್ಲೂಕಿನ ಬಸರಿಕಟ್ಟೆ, ದೇವಗೋಡು ಗ್ರಾಮಗಳಲ್ಲೂ ವ್ಯಾಪಕ ಅರಣ್ಯ ನಾಶ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹಳೆ ಸೊರಬ ದೇವರಕಾನು ಅರಣ್ಯದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ 140ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. 300 ವರ್ಷಕ್ಕೂ ಹೆಚ್ಚು ಹಳೆಯ ದೇವದಾರು, ನೇರಳೆ, ಬರಣಿಗೆ, ತೇಗದ ಮರಗಳನ್ನು ಕತ್ತರಿಸಲಾಗಿದೆ. ಆನವಟ್ಟಿಯ ಬಳಿಯ ದುಗ್ಲಿ ಹೊಸೂರು, ಚೌಡಿಕಾನು, ತೆಕ್ಕೂರು, ನಿಟ್ಟಕ್ಕಿ ಹಳ್ಳಿಗಳಲ್ಲಿ ಶುಂಠಿ ಮಾಫಿಯಾದ ಹಲವರು ಅರಣ್ಯ ನಾಶದಲ್ಲಿ ನಿರತರಾಗಿದ್ದಾರೆ. ಮಟಗುಪ್ಪೆ, ಕಾರಹೊಂಡ, ಬೀರದೇವರವನ, ಎಲಸಿ ಗ್ರಾಮಗಳಲ್ಲೂ ಒಂದೂವರೆ ತಿಂಗಳಿನಿಂದ ವ್ಯಾಪಕ ಅರಣ್ಯ ನಾಶ ನಡೆಯುತ್ತಿದೆ ಎಂದು ಮಂಡಳಿ ಹೇಳಿದೆ.

‌ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬಿಳಿಸಿರಿ, ಮಂಚಾಲೆ, ಬೊಮ್ಮತ್ತಿ, ಚಿತ್ರಟ್ಟಿ ಪ್ರದೇಶದಲ್ಲಿ ಅವ್ಯಾಹತವಾಗಿ ಅರಣ್ಯ ನಾಶ ನಡೆಯುತ್ತಿದೆ. ಹೊಸನಗರ ತಾಲ್ಲೂಕಿನ ಹುಂಚ ಹೋಬಳಿಯ ಗುಡ್ಡೆಕೊಪ್ಪದಲ್ಲಿ ಮೈಸೂರು ಕಾಗದ ಕಾರ್ಖಾನೆಗೆ ಸೇರಿದ 50 ಎಕರೆಗೂ ಹೆಚ್ಚು ವಿಸ್ತೀರ್ಣದ ನೆಡುತೋಪನ್ನು ಅತಿಕ್ರಮಣ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬಳಿ 40 ಎಕರೆ ಅರಣ್ಯವನ್ನು ಖಾಸಗಿಯವರು ಕಟಾವು ಮಾಡಲು ಪ್ರಯತ್ನಿಸಿದ್ದು, ಸ್ಥಳೀಯರು ತಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ರಮಕ್ಕೆ ಒತ್ತಾಯ
‘ಉಲ್ಲೇಖಿಸಿದ ಪ್ರಕರಣಗಳೂ ಸೇರಿದಂತೆ ಲಾಕ್‌ಡೌನ್‌ ಅವಧಿಯಲ್ಲಿ ನೂರಾರು ಸ್ಥಳಗಳಲ್ಲಿ ಅರಣ್ಯ ನಾಶ ನಡೆದಿರುವ ದೂರುಗಳು ಬರುತ್ತಿವೆ. ಇಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಕಾಯ್ದೆ ಮತ್ತು ಜೀವವೈವಿಧ್ಯ ಸಂರಕ್ಷಣಾ ಕಾಯ್ದೆಗಳ ಉಲ್ಲಂಘನೆ ನಡೆದಿದೆ. ತಕ್ಷಣವೇ ಅರಣ್ಯ ಜಾಗೃತ ದಳದ ಮೂಲಕ ಸ್ಥಳ ಸಮೀಕ್ಷೆ ನಡೆಸಿ, ಹಾನಿಯ ಮೊತ್ತ ಅಂದಾಜು ಮಾಡಿ, ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ವರದಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT