ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ತರಗತಿ: ‘ಪಾಠ’ವೇ ಮುಗಿದಿಲ್ಲ; ಪರೀಕ್ಷೆಗೆ ಆತುರ!

ಅತಿಥಿ ಉಪನ್ಯಾಸಕರ ಮುಷ್ಕರ ತಂದಿಟ್ಟ ಸಂಕಷ್ಟ
Last Updated 6 ಫೆಬ್ರುವರಿ 2022, 5:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪಾಠ– ಪ್ರವಚನ ಇನ್ನೂ ಮುಗಿದಿಲ್ಲ. ಅದಕ್ಕೂ ಮೊದಲೇ ಹಲವು ವಿಶ್ವವಿದ್ಯಾಲಯಗಳು, ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ (2021–22) ಮೊದಲ ಸೆಮಿಸ್ಟರ್‌ ಪೂರ್ಣಗೊಳಿಸಿ, ಪರೀಕ್ಷೆಗಳನ್ನು ನಡೆಸಲು ಮುಂದಾಗಿವೆ!

2019–20 ಮತ್ತು 2020–21ನೇ ಸಾಲಿನಲ್ಲಿ ಕೋವಿಡ್‌ ಕಾರಣದಿಂದ ಭೌತಿಕ ತರಗತಿಗಳು ಬಹುತೇಕ ನಷ್ಟ ಆಗಿದ್ದವು. ಅಲ್ಲದೆ, ಜೂನ್‌ನಲ್ಲಿ ಆರಂಭಗೊಂಡು ಏಪ್ರಿಲ್‌ನಲ್ಲಿ ಮುಗಿಯಬೇಕಾಗಿದ್ದ ಶೈಕ್ಷಣಿಕ ವರ್ಷವೂ ಬದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೋವಿಡ್‌ಎರಡನೇ ಅಲೆ ಕಡಿಮೆಯಾದ ಬಳಿಕ, ಅಕ್ಟೋಬರ್‌ನಲ್ಲಿ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಮೊದಲ ಸೆಮಿಸ್ಟರ್‌ ಫೆಬ್ರುವರಿ ಅಂತ್ಯದೊಳಗೆ ಮುಗಿಯಬೇಕಿದೆ.

ಇನ್ನು ಅತಿಥಿ ಉಪನ್ಯಾಸಕರನ್ನು ವಿಳಂಬವಾಗಿ ನಿಯೋಜಿಸಿಕೊಂಡ ಕಾರಣ ಬಹುತೇಕ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ಆರಂಭವೇ ಆಗಿರಲಿಲ್ಲ. ಈ ಮಧ್ಯೆ, ಡಿ. 10ರಿಂದ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾ ವಧಿಗೆ ತರಗತಿ ಬಹಿಷ್ಕರಿಸಿ ಮುಷ್ಕರಕ್ಕೆ ಇಳಿದಿದ್ದರು.ಅನೇಕ ಪದವಿ ಕಾಲೇಜು ಗಳು ಅತಿಥಿ ಉಪನ್ಯಾಸಕರನ್ನೇ ಅವ ಲಂಬಿಸಿವೆ. ಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ನಡುವಿನ ತಿಕ್ಕಾಟದಿಂದ ಒಂದೂವರೆ ತಿಂಗಳು (ಜ. 31ರವರೆಗೆ) ಪಾಠ–ಪ್ರವಚನವಿಲ್ಲದೆ ವಿದ್ಯಾರ್ಥಿಗಳು ಬೀದಿಗೆ ಬೀಳುವಂತಾಗಿತ್ತು. ಅದರ ಮಧ್ಯೆಯೇ ಪರೀಕ್ಷೆ ಎದುರಿಸಬೇಕಾದ ಆತಂಕ ವಿದ್ಯಾರ್ಥಿಗಳಿಗೆ ಎದುರಾಗಿದೆ.

ರಾಜ್ಯದಲ್ಲಿ 430 ಪ್ರಥಮ ದರ್ಜೆ ಕಾಲೇಜುಗಳಿವೆ. ಅವುಗಳಲ್ಲಿ ಸುಮಾರು 7 ಸಾವಿರದಷ್ಟು ಕಾಯಂ ಉಪನ್ಯಾಸ ಕರಿದ್ದಾರೆ. ಉಪನ್ಯಾಸಕರ ಕೊರತೆ ತುಂಬಲು ಕಳೆದ ಸಾಲಿನಲ್ಲಿ 14 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿತ್ತು. ಅಂದರೆ, ಶೇ 70ರಷ್ಟು ತರಗತಿಗಳನ್ನು ಅತಿಥಿ ಉಪನ್ಯಾಸಕರಿಂದ ನಡೆಸಬೇಕಾದ ಅನಿವಾರ್ಯ ಇದೆ. ಕೆಲವು ಕಾಲೇಜುಗಳಲ್ಲಿ ಪ್ರಾಂಶು ಪಾಲರನ್ನು ಹೊರತುಪಡಿಸಿದರೆ, ಕಾಯಂ ಉಪನ್ಯಾಸಕರೇ ಇಲ್ಲ. ಕೆಲವಡೆ ಉಪನ್ಯಾಸಕರಿದ್ದರೂ, ಪ್ರಮುಖ ವಿಷಯಗಳ ಉಪನ್ಯಾಸಕರ ಕೊರತೆ ಇದೆ. ಅದರಲ್ಲೂ ಗ್ರಾಮೀಣ ಭಾಗದ ಅನೇಕ ಕಾಲೇಜುಗಳಲ್ಲಿ ಒಂದಿಬ್ಬರು ಕಾಯಂ ಉಪನ್ಯಾಸಕರಿದ್ದರೆ, ಉಳಿದ ವರು ‘ಅತಿಥಿ’ಗಳು!

ಹೊಸ ನೇಮಕಾತಿ ನಿಯಮಗಳಡಿ ಫೆ. 1ರಿಂದ ಹೊಸತಾಗಿ 10,200 ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸಿಕೊಂಡಿದೆ. ಹೊಸತಾಗಿ ನೇಮಕಗೊಂಡವರು ಪಾಠ ಮಾಡಲು ಆರಂಭಿಸಿದ್ದಾರೆ. ಫೆ. 30ರ ಒಳಗೆ ಮೊದಲ ಸೆಮಿಸ್ಟರ್‌ ಅಂತ್ಯಗೊಳಿಸ ಬೇಕಿದೆ. ಆಯಾ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಪರೀಕ್ಷಾ ಕಾರ್ಯ ನಿರ್ವಹಿಸುತ್ತವೆ. ಪ್ರಸಕ್ತ ಸಾಲಿನಿಂದ (ಮೊದಲ ಸೆಮಿಸ್ಟರ್‌) ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗಿರುವುದರಿಂದ ಏಕ ರೂಪದಲ್ಲಿ ಪಠ್ಯಕ್ರಮ ಮತ್ತು ಪರೀಕ್ಷೆ ನಡೆಯಬೇಕಿದೆ.

‘ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಕೋವಿಡ್‌ ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿದ್ದರೆ, ಈ ಬಾರಿ ಅತಿಥಿ ಉಪನ್ಯಾಸಕರ ಮುಷ್ಕರ ದಿಂದ ಸಮಸ್ಯೆ ಆಗಿದೆ. ಕೋವಿಡ್‌ ಕಾರಣಕ್ಕೆ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಯೇ ಇಲ್ಲದೆ ತೇರ್ಗಡೆಯಾದ ವಿದ್ಯಾರ್ಥಿಗಳು ಪದವಿಗೆ ಸೇರಿದ್ದಾರೆ. ಇದೀಗ, ಪದವಿಯಲ್ಲೂ ಸರಿಯಾಗಿ ಪಾಠ–ಪ್ರವಚನ ಸಿಗದೆ ಪರೀಕ್ಷೆಗೆ ತಯಾರಿ ನಡೆಸಬೇಕಾದ ಅನಿವಾರ್ಯತೆಗೆ ಈ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅಲ್ಲದೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಗೊಂದಲ ಮುಂದುವರಿದಿದ್ದು, ಅನೇ ಕರಿಗೆ ಈ ನೀತಿ ಇನ್ನೂ ಅರ್ಥವೇ ಆಗಿಲ್ಲ. ಕೆಲವು ವಿಶ್ವವಿದ್ಯಾಲಯಗಳನ್ನ ಹೊರತುಪಡಿಸಿದರೆ, ಹಲವೆಡೆ ಉಪ ನ್ಯಾಸಕರಿಗೆ ಕಾರ್ಯಾಗಾರಗಳು ನಡೆ ದಿಲ್ಲ’ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

*

ಪಠ್ಯಕ್ರಮ ಪೂರ್ಣಗೊಳಿಸಿದ ಬಳಿಕ ಪರೀಕ್ಷೆಗಳನ್ನು ನಡೆಸಬೇಕಿದೆ. ಈ ಬಗ್ಗೆ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಶೀಘ್ರದಲ್ಲಿ ವಿಡಿಯೊ ಸಂವಾದ ನಡೆಸಲಾಗುವುದು.
-ಪಿ. ಪ್ರದೀಪ್‌, ಆಯುಕ್ತರು, ಉನ್ನತ ಶಿಕ್ಷಣ ಇಲಾಖೆ

*

ಅತಿಥಿ ಉಪನ್ಯಾಸಕರ ಮುಷ್ಕರದಿಂದ ಪದವಿ ಕಾಲೇಜುಗಳಲ್ಲಿ ಪಾಠ ಪ್ರವಚನ ಪೂರ್ಣಗೊಂಡಿಲ್ಲ. ಪರೀಕ್ಷೆಗೂ ಮೊದಲು ಈ ವಿಚಾರವನ್ನು ಖಚಿತಪಡಿಸಿಕೊಳ್ಳಬೇಕು.
-ಟಿ.ಎಂ. ಮಂಜುನಾಥ,ಅಧ್ಯಕ್ಷರು, ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT