ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಗದ್ದಲ: ಸದನ ಸಮಿತಿ ರದ್ದತಿಗೆ ಆಯನೂರು ಆಗ್ರಹ

Last Updated 7 ಜನವರಿ 2021, 16:24 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಪರಿಷತ್‌ನಲ್ಲಿಡಿ. 15ರಂದು ನಡೆದ ಅಹಿತಕರ ಘಟನೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸದನ ಸಮಿತಿ ರಚಿಸುವ ವೇಳೆ ನಿಯಮಬಾಹಿರ ಹಾಗೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಸಮಿತಿ ರದ್ದು ಮಾಡಿ ಈ ವಿಷಯವನ್ನು ನೀತಿ ನಿರೂಪಣಾ ಸಮಿತಿಗೆ ವಹಿಸಬೇಕು’ ಎಂದು ಸಭಾಪತಿಗೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ಪತ್ರ ಬರೆದಿದ್ದಾರೆ.

‘ಸಮಿತಿಗೆ ಮರಿತಿಬ್ಬೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಕಾಂಗ್ರೆಸ್‌, ಬಿಜೆಪಿಯ ತಲಾ ಇಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಮರಿತಿಬ್ಬೇಗೌಡ ಅವರು ತಾಂತ್ರಿಕವಾಗಿ ಜೆಡಿಎಸ್‌ ಸದಸ್ಯರಾಗಿದ್ದರೂ ಮಾನಸಿಕವಾಗಿ ಹಾಗೂ ಸದನದಲ್ಲಿ ಅವರ ನಡವಳಿಕೆ ಹಾಗೂ ನಿಲುವುಗಳಲ್ಲಿ ಅವರು ಬಹಿರಂಗವಾಗಿಯೇ ಕಾಂಗ್ರೆಸ್‌ ಪಕ್ಷದವರಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ, ಸಮಿತಿ ರಚನೆಯಲ್ಲಿ ಪಕ್ಷಪಾತ ನೀತಿ ಅನುಸರಿಸಲಾಗಿದೆ’ ಎಂದು ಅವರು ದೂರಿದ್ದಾರೆ.

‘ಅಹಿತಕರ ಘಟನೆಗೆ ಹಾಗೂ ಉಪ ಸಭಾಪತಿ ಮೇಲೆ ದೈಹಿಕ ಹಲ್ಲೆ ನಡೆಸಿದ ಘಟನೆಯ ಸೂತ್ರಧಾರ ಹರಿಪ್ರಸಾದ್‌ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿರುವ ಉದ್ದೇಶ ಪ್ರಶ್ನಾರ್ಹವಾಗಿದೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಪರಿಷತ್ತಿನಿಂದ ರಚಿಸುವ ಎಲ್ಲ ಸಮಿತಿ ಮತ್ತು ಸದನ ಸಮಿತಿಗಳಿಗೆ ಆಯಾ ಪಕ್ಷದ ಮುಖ್ಯ ಸಚೇತಕರಿಂದ ಸದಸ್ಯರ ಹೆಸರು ಪ‍ಡೆಯುವ ಪರಿ‍ಪಾಟ ಅನುಸರಿಸಲಾಗುತ್ತದೆ. ಆದರೆ, ಈ ವಿಷಯದಲ್ಲಿ ಏಕಪಕ್ಷೀಯವಾಗಿ ಸದಸ್ಯರನ್ನು ಆಯ್ಕೆ ಮಾಡಿದ್ದೀರಿ. ಈ ನಡೆ ಅನುಮಾನಕ್ಕೆ ಕಾರಣವಾಗುತ್ತದೆ. ಅಲ್ಲದೆ, ಪರಿಶೀಲನಾ ಅಂಶಗಳನ್ನು ಗಮನಿಸಿದಾಗ ಸಮಿತಿ ತನ್ನ ವ್ಯಾಪ್ತಿಯಲ್ಲಿ ಪರಿಶೀಲಿಸಲು ಸಾಧ್ಯವಾಗದ ಅಂಶಗಳನ್ನು ಕೂಡಾ ನಮೂದಿಸಿರುವುದು ಕಂಡುಬರುತ್ತದೆ’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

‘ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ನೀವು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು, ತಮ್ಮ ವಿಫಲತೆಯನ್ನು ಮುಚ್ಚಿಕೊಳ್ಳಲು ಮತ್ತು ಮಾತೃಪಕ್ಷಕ್ಕೆ ನಿಷ್ಠೆ ಪ್ರಕಟಿಸಿ ವಿರೋಧ ಪಕ್ಷದವರ ಮೇಲೆ ಗೂಬೆ ಕೂರಿಸುವ ಕುತಂತ್ರದಿಂದ ಸಮಿತಿ ರಚಿಸಿದ್ದೀರಿ. ದುರುದ್ದೇಶದಿಂದ ಹಾಗೂ ಪಕ್ಷಪಾತದಿಂದ ಕೂಡಿರುವ ಈ ಸಮಿತಿ ಕ್ರಮಬದ್ಧವಾಗಿಲ್ಲ ಮತ್ತು ಅಸ್ತಿತ್ವರಹಿತವಾಗಿದೆ’ ಎಂದೂ ಆಯನೂರು ಮಂಜನಾಥ್‌ ಅವರು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT