ಸೋಮವಾರ, ಜುಲೈ 4, 2022
24 °C

ಅನುದಾನ ವ್ಯಾಪ್ತಿಗೆ ಖಾಸಗಿ ಶಾಲೆ: ಚರ್ಚಿಸಿ ತೀರ್ಮಾನ - ಬಿ.ಸಿ. ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘1995ರ ನಂತರ ಶಾಲೆಗಳಿಗೆ ಅನುಮತಿ ನೀಡುವಾಗ ಅನುದಾನ ಕೇಳಬಾರದು ಎಂಬ ಷರತ್ತು ವಿಧಿಸಲಾಗಿದೆ. ಆದರೂ, ಕೆಲವು ಶಾಲೆಗಳು ಅನುದಾನ ಕೇಳುತ್ತಿವೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ, ಅನುದಾನಕ್ಕೆ ಒಳಪಡಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಚಂದ್ರಶೇಖರ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ 1994-95 ನಡುವೆ 450ಕ್ಕೂ ಹೆಚ್ಚು ಕನ್ನಡ ಶಾಲೆಗಳು ಸ್ಥಾಪನೆಯಾಗಿವೆ. ಅವುಗಳಲ್ಲಿ 15 ಶಾಲೆಗಳನ್ನು ಮಾತ್ರ ಅನುದಾನಕ್ಕೆ ಒಳಪಡಿಸಲಾಗಿದೆ. ಹಿಂದುಳಿದ ಪ್ರದೇಶದ ಶಾಲೆಗಳ ಅಭಿವೃದ್ಧಿ ಆಗಬೇಕಿದ್ದರೆ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು’ ಎಂದು ಪಾಟೀಲ ಒತ್ತಾಯಿಸಿದರು.

ಸದಸ್ಯರ ಪ್ರಶ್ನೆಗೆ ದನಿಗೂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಅನುದಾನಕ್ಕೆ ಒಳಪಡಿಸದೇ ಇದ್ದರೆ ಕನ್ನಡ ಶಾಲೆಗಳನ್ನು ಉಳಿಸುವುದು ಹೇಗೆ? ಹಣಕಾಸಿನ ಕೊರತೆ ಎಂದು ನೆಪ ಬೇಡ. ಹಣಕಾಸು ಇಲಾಖೆಯಿಂದ ಅನುದಾನವನ್ನು ಪಡೆದು, ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ಆಗ ಸಚಿವ ನಾಗೇಶ್, ‘ಯೋಚನೆ ಮಾಡುತ್ತೇನೆ’ ಎಂದರು. ಇದು ಹೊಸ ರೀತಿಯ ಉತ್ತರ ಎಂದು ಇಡೀ ಸದನ ನಗೆಗಡಲಲ್ಲಿ ತೇಲಿತ್ತು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಯೋಚಿಸುತ್ತೇನೆ ಎನ್ನುವ ಮೂಲಕ ಶಿಕ್ಷಣ ಸಚಿವರು ಹೊಸ ಧಾಟಿಯ ಸಮರ್ಪಕ ಉತ್ತರ ನೀಡಿದ್ದಾರೆ’ ಎಂದರು.

‘ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವ ವಿಚಾರದಲ್ಲಿ ಈ ರೀತಿ ಮೀನಾಮೇಷ ಸರಿಯಲ್ಲ’ ಎಂದು ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು.

ಶೀಘ್ರ ನಿರ್ಧಾರ: ಕಾಂಗ್ರೆಸ್‌ನ ಹರೀಶ್ ಕುಮಾರ್, ‘ಖಾಸಗಿ ಶಾಲೆಗಳು ಪ್ರತಿವರ್ಷ ಕಟ್ಟಡ ಸುರಕ್ಷತೆ ಮತ್ತು ಅಗ್ನಿಶಾಮಕ ಸುರಕ್ಷಿತ ಪತ್ರವನ್ನು ನೀಡಬೇಕೆಂಬ ನಿಯಮ ಸಡಿಲಿಸಬೇಕು. ನವೀಕರಣದ ಅವಧಿಯನ್ನು 10 ವರ್ಷಕ್ಕೆ ನಿಗದಿಪಡಿಸಬೇಕು. ಇಲ್ಲದೇ ಹೋದರೆ ಖಾಸಗಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿ ಸಚಿವ ನಾಗೇಶ್, ‘ಕಟ್ಟಡ ಸುರಕ್ಷತೆ, ಅಗ್ನಿ ಪ್ರತಿಬಂಧಕ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮ ಖಾಸಗಿ ಶಾಲೆಗಳಿಗಷ್ಟೆ ಅಲ್ಲ, ಸರ್ಕಾರಿ ಶಾಲೆಗಳಿಗೂ ಅನ್ವಯ. ಆದರೆ, ನೆಲ ಮಹಡಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಟ್ಟಡಗಳ ಸದೃಢತೆ ಪ್ರಮಾಣಪತ್ರ ಅನ್ವಯವಾಗುವುದಿಲ್ಲ. ನೆಲ ಮಹಡಿಯಲ್ಲಿರುವ ಖಾಸಗಿ ಶಾಲೆಗಳಿಗೂ ಈ ರಿಯಾಯಿತಿ ನೀಡುವ ನಿಟ್ಟಿನಲ್ಲಿ ಈಗಾಗಲೇ 3–4 ಸಭೆಗಳನ್ನು ನಡೆಸಿದ್ದು, ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು