ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಬಂದ ಡೆಂಗಿ ಮತ್ತು ಚಿಕೂನ್‌ಗುನ್ಯಾ

ಕಳೆದ ವರ್ಷ ಮಳೆಗಾಲದ ಬಳಿಕ ಏರಿಕೆ ಕಂಡಿದ್ದ ಜ್ವರ
Last Updated 10 ಡಿಸೆಂಬರ್ 2020, 19:57 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲ ಪ್ರಾರಂಭವಾದ ಬಳಿಕ ವ್ಯಾಪಿಸಿಕೊಳ್ಳುತ್ತಿದ್ದ ಡೆಂಗಿ ಮತ್ತು ಚಿಕೂನ್‌ಗುನ್ಯಾ ಜ್ವರವು ಈ ಬಾರಿ ನಿಯಂತ್ರಣಕ್ಕೆ ಬಂದಿದೆ. ಈ ವರ್ಷ ‌3,502 ಮಂದಿ ಮಾತ್ರ ಡೆಂಗಿ ಜ್ವರದಿಂದ ಬಳಲಿದ್ದಾರೆ.

ಕಳೆದ ವರ್ಷ 16 ಸಾವಿರಕ್ಕೂ ಅಧಿಕ ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ 13 ಮಂದಿ ಮೃತಪಟ್ಟಿದ್ದರು. 10 ಸಾವಿರಕ್ಕೂ ಅಧಿಕ ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದ್ದವು. ದಶಕದಲ್ಲೇ ಅತಿ ಹೆಚ್ಚು ಮಂದಿ ಈ ಜ್ವರಕ್ಕೆ ಒಳಪಟ್ಟಿದ್ದರು. ಹೀಗಾಗಿ ಈ ವರ್ಷ ಕೂಡ ಡೆಂಗಿ ಹಾಗೂ ಚಿಕೂನ್‌ಗುನ್ಯ ಕಾಡುವ ಬಗ್ಗೆ ಆರೋಗ್ಯ ಕ್ಷೇತ್ರದ ತಜ್ಞರು ಕಳವಳ ವ್ಯಕ್ತಪಡಿಸಿದ್ದರು.

ಕೋವಿಡ್ ಕಾರಣ ವರ್ಷದ ಆರಂಭದಲ್ಲಿಯೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿತ್ತು. ಹೀಗಾಗಿ ಡೆಂಗಿ ನಿಯಂತ್ರಣಕ್ಕೆ ಬಂದಿದ್ದು, ಈ ಜ್ವರದಿಂದ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ. ಇಲಾಖೆಯ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ 46,958 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ. 39 ಮಂದಿ ಸಾವಿಗೀಡಾಗಿದ್ದಾರೆ.

ಚಿಕೂನ್‌ಗುನ್ಯಾ ಇಳಿಕೆ: ಕಳೆದ ವರ್ಷ ಈ ವೇಳೆಗೆ 15 ಸಾವಿರಕ್ಕೂ ಅಧಿಕ ಮಂದಿ ಡೆಂಗಿ ಜ್ವರಕ್ಕೆ ಒಳಪಟ್ಟಿದ್ದರು. ಮಳೆಗಾಲ ಪ್ರಾರಂಭವಾದ ಬಳಿಕ ಈ ಜ್ವರಕ್ಕೆ ಒಳಪಡುವವರ ಸಂಖ್ಯೆ ದುಪ್ಪಟ್ಟಾಗಿತ್ತು. ಚಿಕೂನ್‌ಗುನ್ಯಾ ಜ್ವರ ಕೂಡ ಕಳೆದ ವರ್ಷ ಕಾಡಿತ್ತು. 3 ಸಾವಿರಕ್ಕೂ ಅಧಿಕ ಮಂದಿ ಈ ವೇಳೆಗೆ ಚಿಕೂನ್‌ಗುನ್ಯಾ ಜ್ವರದಿಂದ ಬಳಲಿದ್ದರು. ಈ ವರ್ಷ 1,181 ಮಂದಿ ಮಾತ್ರ ಈ ಜ್ವರವನ್ನು ಎದುರಿಸಿದ್ದಾರೆ.

‘ಕಳೆದ ವರ್ಷ ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿತ್ತು. ಈ ವರ್ಷ ನಿಯಂತ್ರಣಕ್ಕೆ ಬಂದಿರುವುದು ಸಮಾಧಾನ ತಂದಿದೆ. ಜ್ವರ ಸೇರಿದಂತೆ ಬೇರೆ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ತೆರಳಿದಲ್ಲಿ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಿಂದ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗಲಿದ್ದು, ಆ ಸೊಳ್ಳೆಗಳ ಕಡಿತದಿಂದ ಡೆಂಗಿ ಜ್ವರ ಬರುತ್ತದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT