ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರದ ಗಡಿ ದಾಟಿದ ಡೆಂಗಿ:  ರಾಜ್ಯದಲ್ಲಿ ಪ್ರಕರಣಗಳು ಏರುಗತಿ

Last Updated 12 ಏಪ್ರಿಲ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಏರುಗತಿ ಪಡೆದುಕೊಂಡಿವೆ. ವಾರದಲ್ಲಿ 53 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 1,007ಕ್ಕೆ ತಲುಪಿದೆ.

ಕಳೆದ ವರ್ಷ ಆರು ತಿಂಗಳ ಅವಧಿಯಲ್ಲಿ ಇಷ್ಟು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಮಂದಿ ಡೆಂಗಿ ಜ್ವರಕ್ಕೆ ಒಳಗಾಗಿದ್ದಾರೆ. 22 ಜಿಲ್ಲೆಗಳಲ್ಲಿ ಈ ಸಂಖ್ಯೆ ಎರಡಂಕಿಯಲ್ಲಿದೆ.

ಮೈಸೂರಿನಲ್ಲಿ 93, ಬಳ್ಳಾರಿಯಲ್ಲಿ 76, ಉಡುಪಿಯಲ್ಲಿ 75, ಚಿತ್ರದುರ್ಗದಲ್ಲಿ 68,ಕೊಪ್ಪಳದಲ್ಲಿ 67,ಶಿವಮೊಗ್ಗದಲ್ಲಿ 43, ವಿಜಯಪುರದಲ್ಲಿ 37, ದಕ್ಷಿಣ ಕನ್ನಡದಲ್ಲಿ 36, ಕೋಲಾರದಲ್ಲಿ 33, ರಾಯಚೂರಿನಲ್ಲಿ 28, ತುಮಕೂರಿನಲ್ಲಿ 26 ಹಾಗೂ ಯಾದಗಿರಿಯಲ್ಲಿ 24 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 20ಕ್ಕಿಂತ ಕಡಿಮೆ ಇವೆ.ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.2021ರಲ್ಲಿ 7,189 ಮಂದಿ ಡೆಂಗಿ ಪೀಡಿತರಾಗಿದ್ದರು. ಅವರಲ್ಲಿ ಐವರು ಮೃತಪಟ್ಟಿದ್ದರು.

ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ, ಬೀದರ್, ಕಲಬುರಗಿ ಹಾಗೂ ಉತ್ತರ ಕನ್ನಡದಲ್ಲಿ ಡೆಂಗಿ ನಿಯಂತ್ರಣದಲ್ಲಿದ್ದು, ಪ್ರಕರಣಗಳ ಸಂಖ್ಯೆ 10ಕ್ಕಿಂತ ಕಡಿಮೆಯಿವೆ.

23 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು,273 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಕೋಲಾರ ಹಾಗೂ ವಿಜಯಪುರದಲ್ಲಿ ತಲಾ 52, ಬೆಂಗಳೂರು ಗ್ರಾಮಾಂತರದಲ್ಲಿ 34,ತುಮಕೂರಿನಲ್ಲಿ 29, ಚಿತ್ರದುರ್ಗದಲ್ಲಿ 17 ಹಾಗೂ ದಾವಣಗೆರೆಯಲ್ಲಿ 14 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆ ಇವೆ.

‘ಡೆಂಗಿ ಜ್ವರ ಈ ವರ್ಷ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದೆ.ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಿಂದ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆ ಸೊಳ್ಳೆಗಳ ಕಡಿತದಿಂದ ಡೆಂಗಿ ಜ್ವರ ಬರುತ್ತದೆ. ಅಕಾಲಿಕ ಮಳೆಯಿಂದ ಈ ಜ್ವರ ಹೆಚ್ಚುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT