ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಇಲಾಖೆ: 5 ವರ್ಷದಲ್ಲಿ 9 ನಿರ್ದೇಶಕರು

ಐದಾರು ತಿಂಗಳಲ್ಲೇ ವರ್ಗಾವಣೆ ಮಾಡುತ್ತಿರುವ ಸರ್ಕಾರ l ವಾರ್ಷಿಕ ಕಾರ್ಯಚಟುವಟಿಕೆಗೆ ತೊಡಕು
Last Updated 2 ನವೆಂಬರ್ 2022, 21:02 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ರಾಜ್ಯ ಸರ್ಕಾರವು ಐದಾರು ತಿಂಗಳ ಅವಧಿಯಲ್ಲೇ ವರ್ಗಾವಣೆ ಮಾಡುತ್ತಿದ್ದು, ಐದು ವರ್ಷಗಳಲ್ಲಿ 9 ನಿರ್ದೇಶಕರನ್ನು ಇಲಾಖೆ ಕಂಡಿದೆ.

ಪ್ರಕಾಶ್ ನಿಟ್ಟಾಲಿ ಅವರ ವರ್ಗಾವಣೆ ಬಳಿಕ ಅಧಿಕಾರ ವಹಿಸಿಕೊಂಡ ಕೆ.ಎಂ. ಜಾನಕಿ ಕೇವಲ 22 ದಿನ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಆ ಸ್ಥಾನಕ್ಕೆ ಮತ್ತೆಪ್ರಕಾಶ್ ನಿಟ್ಟಾಲಿ ಅವರನ್ನೇ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಇಲಾಖೆಯ ಅಧಿಕಾರಿ ವರ್ಗಕ್ಕೂ ಗೊಂದಲ ಉಂಟಾಗಿದೆ.

ನಾಡಿನ ಭಾಷೆ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಸಂರಕ್ಷಿಸಿ, ಸಂವರ್ಧಿಸುವ ಜವಾಬ್ದಾರಿಯನ್ನು ಇಲಾಖೆ ಹೊತ್ತಿದೆ. 1977ರಲ್ಲಿ ಪ್ರತ್ಯೇಕವಾಗಿ ಕಾರ್ಯಾರಂಭಿಸಿದ ಇಲಾಖೆ, ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ.ಜಿಲ್ಲಾ ಮಟ್ಟದಲ್ಲಿ, ವಿಭಾಗ ಮಟ್ಟದಲ್ಲಿ ಕಚೇರಿಗಳನ್ನು ಹೊಂದಿದ್ದು, ಗ್ರಾಮ ಮಟ್ಟದಿಂದ ರಾಜಧಾನಿಯ ಮಟ್ಟದವರೆಗೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಇಲಾಖೆಗೆ ಸರ್ಕಾರವು ಪದೇ ಪದೇ ನಿರ್ದೇಶಕರನ್ನು ಬದಲಾಯಿಸುತ್ತಿರುವುದು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರ ಅಸಮಾಧಾನಕ್ಕೂ ಕಾರಣವಾಗಿದೆ.ಈವರೆಗೆ 51 ನಿರ್ದೇಶಕರನ್ನು ಇಲಾಖೆ ಕಂಡಿದೆ.

ಇಲಾಖೆಯಡಿ ಸಾಹಿತ್ಯ, ಜಾನಪದ, ನಾಟಕ ಸೇರಿ 13 ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ.ಅದೇ ರೀತಿ, 24 ಟ್ರಸ್ಟ್, ಪ್ರತಿಷ್ಠಾನಗಳು, ನಾಲ್ಕು ಪ್ರಾಧಿಕಾರಗಳು, ರಂಗಾಯಣಗಳು ಹಾಗೂ ಸಂಶೋಧನಾ ಕೇಂದ್ರವೂ ಇಲಾಖೆಯ ಭಾಗವಾಗಿವೆ. ನಿರ್ದೇಶಕರ ಬದಲಾವಣೆಯಿಂದಾಗಿ ಇವುಗಳ ಮುಖ್ಯಸ್ಥರಿಗೆ ವಿವಿಧ ಕಾರ್ಯಯೋಜನೆಗಳ ಬಗ್ಗೆ ಮನವರಿಕೆ ಮಾಡಿಸುವುದು ಸವಾಲಾಗಿ ಪರಿಣಮಿಸಿದೆ. ಅಲ್ಪಾವಧಿಯಲ್ಲೇ ನಿರ್ದೇಶಕರ ಬದಲಾವಣೆ ಯಿಂದ ಇಲಾಖೆಯ ವಾರ್ಷಿಕ ಕಾರ್ಯಚಟುವಟಿಕೆಗೆ ಹಿನ್ನಡೆಯಾಗುವ ಬಗ್ಗೆ ಅಧಿಕಾರಿಗಳು ಕಳವಳ
ವ್ಯಕ್ತಪಡಿಸಿದ್ದಾರೆ.

‘ಇಲಾಖೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಾರ್ಯಚಟುವಟಿಕೆ ಬಗ್ಗೆ ತಿಳಿಯಲು ಕೆಲ ತಿಂಗಳು ಬೇಕಾಗುತ್ತದೆ. ಎರಡರಿಂದ ಮೂರು ವರ್ಷಗಳು ಒಂದೇ ಸ್ಥಾನದಲ್ಲಿ ಇದ್ದಾಗ ಮಾತ್ರ ಕ್ರಿಯಾಶೀಲರಾಗಿ ಕೆಲಸ ಮಾಡಲು ಸಾಧ್ಯ. ಅಲ್ಪಾವಧಿಗೆ ನಿರ್ದೇಶಕರನ್ನು ಬದಲಾಯಿಸುತ್ತಿರುವ ಸರ್ಕಾರದ ಕ್ರಮ ತಿಳಿಯದಾಗಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಇಲಾಖೆ ಕಡೆಗಣನೆ: ಬರ, ಪ್ರವಾಹ, ಕೋವಿಡ್ ಸೇರಿ ವಿವಿಧ ಕಾರಣಕ್ಕೆ ಸರ್ಕಾರವು ವರ್ಷದಿಂದ ವರ್ಷಕ್ಕೆ ಇಲಾಖೆಗೆ ನೀಡುವ ವಾರ್ಷಿಕ ಅನುದಾನವನ್ನು ಕಡಿತ ಮಾಡುತ್ತಿದೆ. ಇದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳೂ ಕುಂಠಿತವಾಗುತ್ತಿವೆ. ಧನಸಹಾಯದಂತಹ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗುತ್ತಿದೆ. 2018ರ ನ.30ರಂದು ಎನ್.ಆರ್. ವಿಶುಕುಮಾರ್ ಅವರ ನಿವೃತ್ತಿಯಿಂದ ಇಲಾಖೆಯ ನಿರ್ದೇಶಕ ಸ್ಥಾನ ತೆರವಾಗಿತ್ತು. 2019ರ ಜ.21ರ ವರೆಗೂ ಇಲಾಖೆಗೆ ಪೂರ್ಣಾವಧಿ ನಿರ್ದೇಶಕರು ಇರಲಿಲ್ಲ. ಬಲವಂತರಾವ್ ಪಾಟೀಲ ಅವರೇ ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ನಿರ್ದೇಶಕ ಸ್ಥಾನದಲ್ಲಿದ್ದವರಲ್ಲಿ ಕೆಲವರು ಅನುದಾನದ ಕೊರತೆ,ಮುಂಬಡ್ತಿ ಸೇರಿ ವಿವಿಧ ಕಾರಣಕ್ಕೆ ಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ತಾಳಿ, ವರ್ಗಾವಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಕೆಎಎಸ್ ಅಧಿಕಾರಿಗಳಾಗಿದ್ದ ಎಸ್.ರಂಗಪ್ಪ ಹಾಗೂ ಪ್ರಕಾಶ್ ನಿಟ್ಟಾಲಿ ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿಯೇ ಐಎಎಸ್‌ಗೆ ಬಡ್ತಿ ಹೊಂದಿದ್ದರು. ಬಳಿಕ ಅವರನ್ನು ಬೇರೆಡೆಗೆ ವರ್ಗಾವಣೆ
ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT