ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಸಾರಿಗೆ ಇಲಾಖೆ: ಇಲ್ಲಿ ಎಲ್ಲರೂ ಪಾಲುದಾರರು!

ಸಾರಿಗೆ ಇಲಾಖೆಯಲ್ಲಿ ಹಾದಿ ತಪ್ಪುತ್ತಿರುವ ಸುಧಾರಣಾ ಕ್ರಮಗಳು
Last Updated 16 ಜುಲೈ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ಭ್ರಷ್ಟಾಚಾರವು ಸಾಂಸ್ಥೀಕರಣಗೊಂಡು, ಗಟ್ಟಿಯಾಗಿ ನೆಲೆಯೂ ರಿರುವ ಸರ್ಕಾರಿ ಇಲಾಖೆಗಳಲ್ಲಿ ಸಾರಿಗೆ ಇಲಾಖೆಯು ಮುಂಚೂಣಿಯಲ್ಲಿದೆ. ಇಲ್ಲಿ ಭ್ರಷ್ಟಾಚಾರವೇ ‘ಅಧಿಕೃತ’ ಎಂಬಂತಾಗಿದ್ದರೂ ಎಲ್ಲರೂ ‘ಫಲಾನುಭವಿಗಳೇ’ ಆಗಿರುವುದರಿಂದ ಯಾರೂ ಪ್ರತಿರೋಧ– ಪ್ರತಿಭಟನೆಗೆ ಮುಂದಾಗುವುದಿಲ್ಲ.

ಈ ಇಲಾಖೆಯ ಭ್ರಷ್ಟಾಚಾರಕ್ಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳಷ್ಟೇ, ಜನಸಾಮಾನ್ಯರೂ ಕಾಣಿಕೆ ಕೊಟ್ಟಿದ್ದಾರೆ, ಕೊಡುತ್ತಲೇ ಇದ್ದಾರೆ. ಹೀಗಾಗಿ ಇಲಾಖೆಯ ಸುಧಾರಣೆಗೆ ಕೈಗೊಂಡ ಕ್ರಮಗಳೆಲ್ಲವೂ ದಾರಿ ತಪ್ಪಿವೆ. ಅಧಿಕಾರಿ ಗಳಿಗೆ ಜೇಬು ತುಂಬಿಸುವುದು ಉದ್ದೇಶ ವಾದರೆ, ಜನರಿಗೆ ಅಲೆದಾಟವಿಲ್ಲದೆ, ಆದಷ್ಟು ಬೇಗ ತಮ್ಮ ಕೆಲಸ ಆಗಬೇಕು. ಆದ್ದರಿಂದ ವಾಹನ ನೋಂದಣಿ ಮಾಡಿಸು
ವುದು, ಚಾಲನಾ ಪರವಾನಗಿ ಪಡೆಯು ವುದು– ನವೀಕರಿಸುವುದು, ವಾಹನ ಖರೀದಿ– ಮಾರಾಟ... ಹೀಗೆ ಎಲ್ಲದರಲ್ಲೂ ಭ್ರಷ್ಟಾಚಾರ ಕಣ್ಣಿಗೆ ರಾಚುತ್ತದೆ.

ಸಾರಿಗೆ ಇಲಾಖೆಯ ಭ್ರಷ್ಟಾಚಾರಕ್ಕೆ ಹಲವು ದಾರಿಗಳು ಮತ್ತು ಹಲವು ರೂಪಗಳಿವೆ. ಆರ್‌ಟಿಒ ಕಚೇರಿಗಳ ಕಾಂಪೌಂಡ್‌ ಒಳಗೆ ಕಾಲಿಡುತ್ತಲೇ ಇದರ ವಾಸನೆ ಬಡಿಯುತ್ತದೆ. ಹೊರಗೇ ನಿಂತಿರುವ ಹಲವು ಏಜೆಂಟರುಗಳು, ಕೆಲವು ವಾಹನ ಚಾಲನಾ ತರಬೇತಿ ಸಂಸ್ಥೆಗಳು, ವಾಹನಗಳ ಮಾಲಿನ್ಯ ತಪಾಸಣಾ ಕೇಂದ್ರಗಳು, ವಾಣಿಜ್ಯ ವಾಹನಗಳ ಮಾಲೀಕರು ಎಲ್ಲರೂ ಈ ವ್ಯವಸ್ಥೆಗೆ ಕಾರಣರೂ ಹೌದು, ವ್ಯವಸ್ಥೆಯ ಬಲಿಪಶುಗಳೂ ಹೌದು.

‘ಲಂಚ ಕೊಡದೆ ಯಾವ ಕೆಲಸವೂ ಆಗುವುದಿಲ್ಲ, ಲಂಚ ಕೊಟ್ಟರೆ ಎಲ್ಲವೂ ಸಾಧ್ಯ’ ಎಂಬುದು ಇಲ್ಲಿನ ಮೂಲ ಮಂತ್ರ. ಕೆಲವು ಕಚೇರಿಗಳಿಗೆ ಹೋದರೆ ಸಿಬ್ಬಂದಿ ಯಾರು, ಏಜೆಂಟರು ಯಾರು ಎಂಬುದೇ ತಿಳಿಯುವುದಿಲ್ಲ. ಇಲಾಖೆಯ ಗೋಪ್ಯ ದಾಖಲೆಗಳನ್ನು ಸಹ ಈ ಏಜೆಂಟರುಗಳೇ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ತಲುಪಿಸುತ್ತಾರೆ.

ಆನ್‌ಲೈನ್‌ನಲ್ಲೂ ಧೋಖಾ: ಇಲಾ ಖೆಯು ಅನೇಕ ಸೇವೆಗಳನ್ನು ಈಗ ಆನ್‌ಲೈನ್‌ ಮೂಲಕ ಒದಗಿಸುತ್ತಿದೆ. ಆದರೆ ಈ ಆನ್‌ಲೈನ್‌ ಜುಟ್ಟು ಅಧಿಕಾರಿಗಳ ಕೈಯಲ್ಲಿದೆ. ವಾಹನ ಚಾಲನಾ ತರಬೇತಿ ನೀಡುವ ಖಾಸಗಿ ಸಂಸ್ಥೆಗಳು ಇದರ ದುರುಪಯೋಗ ಪಡೆಯುತ್ತಿದ್ದರೆ, ಕೆಲವು ಸೇವೆಗಳಿಗೆ ಅಧಿಕಾರಿಗಳ ಅಪ್ರೂವಲ್‌ ಬೇಕಾಗಿದ್ದು, ತಮ್ಮ ‘ಪಾಲು’ ಸಿಗದೆ ಅವರು ಅಪ್ರೂವಲ್‌ ಕೊಡುವುದಿಲ್ಲ. ಆದ್ದರಿಂದ ಅನ್‌ಲೈನ್‌ನಿಂದಾಗಿ ಸೇವೆಗಳನ್ನು ಪಡೆಯುವುದು ಸ್ವಲ್ಪ ಸುಲಭವಾಗಿದೆಯೇ ವಿನಾ ಭ್ರಷ್ಟಾಚಾರ ಕಡಿಮೆಯಾಗಿಲ್ಲ ಎನ್ನುತ್ತಾರೆ ಜನಸಾಮಾನ್ಯರು.

ಸಿಬ್ಬಂದಿಯೂ ಬೇಕಿಲ್ಲ: ಬಹುತೇಕ ಆರ್‌ಟಿಒ ಕಚೇರಿಗಳಲ್ಲಿ ಸಿಬ್ಬಂದಿಯ ಕೊರತೆ ಇದೆ. ಆದರೆ ಅದು ಅಲ್ಲಿ ಸಮಸ್ಯೆ ಎನಿಸಿಯೇ ಇಲ್ಲ.

‘ಡಾಟಾ ಎಂಟ್ರಿ ಮುಂತಾದ ಕೆಲಸಗಳಿಗೆ ಕೆಲವು ಕಚೇರಿಗಳಲ್ಲಿ ತಾವಾ ಗಿಯೇ ಒಂದಷ್ಟು ಮಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಲಂಚದಿಂದ ಬರುವ ದುಡ್ಡಿನಲ್ಲಿ ಸ್ವಲ್ಪ ಭಾಗ ವನ್ನು ಅವರಿಗೆ ಸಂಬಳದ ರೂಪದಲ್ಲಿ ಕೊಡುತ್ತಾರೆ. ಜೊತೆಗೆ ಅವರೂ ಒಂದಷ್ಟು ‘ದುಡಿದುಕೊಳ್ಳುತ್ತಾರೆ’ ಎಂದು ಆಟ್‌ಟಿಒ ಕಚೇರಿಗೆ ಫಿಟ್‌ನೆಸ್‌ ಸರ್ಟಿಫಿಕೆಟ್‌ ಪಡೆಯಲು ಪ್ರತಿ ವರ್ಷ ಹೋಗುವ ವಾಹನ ಮಾಲೀಕರೊಬ್ಬರು ಹೇಳುತ್ತಾರೆ.

ಎಲ್ಲರಿಗೂ ಪಾಲು ನಿಗದಿ: ಕಚೇರಿಯಲ್ಲಿ ಕೆಳಹಂತದ ಕ್ಲರ್ಕ್‌ನಿಂದ, ಉನ್ನತ ಮಟ್ಟದ ಅಧಿಕಾರಿಯವರೆಗೆ ಲಂಚದ ಹಣದಲ್ಲಿ ಪಾಲು ನಿಗದಿ ಆಗಿರುತ್ತದೆ. ಏಜೆಂಟರ ಮೂಲಕ ಬರುವ ಫೈಲ್‌ಗಳ ಮೇಲೆ ಯಾವ ಏಜೆಂಟರದ್ದು ಎಂದು ತಿಳಿಯಲು ಸಂಜ್ಞೆ ಇರುತ್ತದೆ. ಹಾಗೆ ಇರುವ ಫೈಲ್‌ಗಳು ಮಾತ್ರ ಬೇಗನೆ ಮುಂದೆ ಸಾಗುತ್ತವೆ. ಸಂಜೆ ವೇಳೆಗೆ ಯಾರಿಂದ ಎಷ್ಟು ಬರಬೇಕು ಎಂಬುದು ಲೆಕ್ಕಾಚಾರವಾಗಿ, ಹಣ ಕೈಸೇರುತ್ತದೆ. ಈ ರೀತಿ ದಿನಕ್ಕೆ ₹10,000ದಿಂದ ₹15,000ದಷ್ಟು ‘ದುಡಿಯುವ’ವರೂ ಇದ್ದಾರೆ.

ಜಿಲ್ಲಾ ಮಟ್ಟದ ಕಚೇರಿಗಳಲ್ಲೇ ಪ್ರತಿನಿತ್ಯ ಕೆಲವು ಲಕ್ಷ ರೂಪಾಯಿಗಳು ಕೈಬದಲಾಗುತ್ತವೆ. ಬೆಂಗಳೂರಿನ ಕಚೇರಿಗಳಲ್ಲಿ ಇದರ ಹತ್ತು ಪಟ್ಟು ವಹಿವಾಟು ನಡೆಯುತ್ತದೆ. ಕಚೇರಿಯೊಂದರಲ್ಲಿ ನಿತ್ಯ ನಡೆಯುವ ಒಟ್ಟು ವ್ಯವಹಾರದಲ್ಲಿ ಶೇ 30ರಿಂದ ಶೇ 40ರಷ್ಟು ಹಣ ಮಾತ್ರ ಕಾನೂನು ಪ್ರಕಾರ ಸರ್ಕಾರಕ್ಕೆ ಸಲ್ಲುತ್ತದೆ. ಉಳಿದ ಹಣ ಯಾರ್‍ಯಾರದ್ದೋ ಜೇಬು ತುಂಬುತ್ತದೆ.

‘ಹೀಗೆ ಸಂಗ್ರಹವಾಗುವ ಹಣ ಸಾರಿಗೆ ಇಲಾಖೆಯ ಅಧಿಕಾರಿಗಳಿಗಷ್ಟೇ ಅಲ್ಲ, ‘ಮೇಲಿನವರೆಗೆ’ ಹೋಗುತ್ತದೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳಿಗೂ ಪಾಲು ಸಲ್ಲುತ್ತದೆ’ ಎನ್ನುತ್ತಾರೆ ಇಲಾಖೆಯಿಂದ ನಿವೃತ್ತಿಹೊಂದಿರುವ ಸಿಬ್ಬಂದಿ.

ಕಠಿಣ ವ್ಯವಸ್ಥೆ ಅಗತ್ಯ

‘ಅಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆದು ಚಾಲನಾ ಪರವಾನಗಿ ಪಡೆದ ಯುವಕ– ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವಾಗ, ರಸ್ತೆಗಳಲ್ಲಿ ಶಿಸ್ತನ್ನು ನಿರೀಕ್ಷಿಸುವುದಾದರೂ ಹೇಗೆ? ವಾಹನ ಪಾರ್ಕ್ ಮಾಡುವುದೂ ಗೊತ್ತಿಲ್ಲದವರಿಗೆ ಪರವಾನಗಿ ನೀಡಲಾಗುತ್ತಿದೆ. ಆನ್‌ಲೈನ್‌ ವ್ಯವಹಾರದ ಹುಳುಕುಗಳನ್ನೇ ಲಾಭದಾಯಕವಾಗಿಸುವಲ್ಲಿ ಸಾರಿಗೆ ಇಲಾಖೆಯ ವ್ಯವಸ್ಥೆ ಯಶಸ್ವಿಯಾಗಿದೆ. ಅಮೆರಿಕ ಹಾಗೂ ಇತರ ಕೆಲವು ರಾಷ್ಟ್ರಗಳಲ್ಲಿ ಇರುವಂಥ ಕಟ್ಟುನಿಟ್ಟಿನ ನಿಯಮಗಳನ್ನು ನಮ್ಮಲ್ಲೂ ಜಾರಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ರಸ್ತೆಗಳು ಇನ್ನಷ್ಟು ಅಪಾಯಕಾರಿಯಾಗುವುದು ಖಚಿತ’ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್‌ ಹೇಳುತ್ತಾರೆ.

‘ಫೈನಲ್‌’ ಆದಮೇಲೆ ಅಪ್ರೂವಲ್‌

ಹಿಂದೆಲ್ಲ ಹೊಸ ವಾಹನವನ್ನು ನೋಂದಣಿ ಮಾಡಿಸಲು ಅದನ್ನು ಆರ್‌ಟಿಒ ಕಚೇರಿಗೆ ಒಯ್ಯುವುದು ಕಡ್ಡಾಯವಾಗಿತ್ತು. ಈಗ ಅದಕ್ಕೂ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ವಾಹನ ಮಾರಾಟ ಮಾಡುವ ಡೀಲರ್‌ಗಳೇ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ, ಆನ್‌ಲೈನ್‌ನಲ್ಲಿಯೇ ನೋಂದಣಿ ಮಾಡುತ್ತಾರೆ. ಆದರೆ ಇದಕ್ಕೆ ಕೊನೆಯಲ್ಲಿ ಸಂಬಂಧಪಟ್ಟ ಅಧಿಕಾರಿಯ ಅಪ್ರೂವಲ್‌ ಕಡ್ಡಾಯ.

ಡೀಲರ್‌ಗಳು ಆರ್‌ಟಿಒ ಕಚೇರಿಗೆ ಫೈಲ್‌ಅನ್ನು ಕಳುಹಿಸುವುದರ ಜತೆಗೆ ವ್ಯವಹಾರ ‘ಫೈನಲ್’ ಮಾಡಬೇಕು. ಅದಾದ ನಂತರವೇ ಅಪ್ರೂವಲ್‌ ಲಭಿಸುತ್ತದೆ ಎನ್ನುತ್ತಾರೆ ಬೆಂಗಳೂರಿನ ವಾಹನ ಮಾರಾಟ ಸಂಸ್ಥೆಯೊಂದರಲ್ಲಿ ಆರ್‌ಟಿಒ ವ್ಯವಹಾರಗಳನ್ನು ನೋಡುತ್ತಿರುವ ಹೆಸರು ಹೇಳಲು ಬಯಸದ ವ್ಯಕ್ತಿ.

‘ಪರ್ಮಿಟ್‌ ವರ್ಗಾವಣೆ’ ಎಂಬ ಸ್ವರ್ಗ

ಖಾಸಗಿ ಸಾರಿಗೆ ವ್ಯವಸ್ಥೆಯೇ ಬಲಿಷ್ಠವಾಗಿರುವ ಉಡುಪಿ, ದಕ್ಷಿಣ ಕನ್ನಡದಂಥ ಜಿಲ್ಲೆಗಳ ಆರ್‌ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ಹುಲುಸಾಗಿ ಬೆಳೆಯುತ್ತದೆ ಎನ್ನು ತ್ತಾರೆ ಇದೇ ಕಚೇರಿಯಲ್ಲಿ ದುಡಿದು ನಿವೃತ್ತರಾಗಿರುವ ಸಿಬ್ಬಂದಿಯೊಬ್ಬರು.

ಖಾಸಗಿ ಬಸ್‌ಗಳು ಹಾಗೂ ವಾಣಿಜ್ಯ ವಾಹನಗಳು ಪ್ರತಿ ವರ್ಷ ಫಿಟ್‌ನೆಸ್‌ ಸರ್ಟಿಫಿಕೇಟ್‌ ಪಡೆಯುವುದು ಕಡ್ಡಾಯ. ಈ ಪ್ರಮಾಣಪತ್ರಕ್ಕೆ ಇಂತಿಷ್ಟು ಎಂದು ದರ ನಿಗದಿಯಾಗಿರುತ್ತದೆ. ಅಷ್ಟು ಹಣ ಕೊಟ್ಟರೆ ವಾಹನ ಯಾವುದೇ ಸ್ಥಿತಿಯಲ್ಲಿದ್ದರೂ ಸರ್ಟಿಫಿಕೇಟ್‌ ಲಭಿಸುತ್ತದೆ.

‘ಕೆಲವೊಮ್ಮೆ ಬಸ್‌ಗಳು ಒಬ್ಬ ಮಾಲೀಕರಿಂದ ಇನ್ನೊಬ್ಬರಿಗೆ ಮಾರಾಟವಾಗುತ್ತದೆ. ಇಂಥ ಸಂದರ್ಭದಲ್ಲಿ ಅದರ ಪರ್ಮಿಟ್‌ ವರ್ಗಾವಣೆ ಮಾಡಲು ಸಾವಿರಾರು ರೂಪಾಯಿಯ ಕೊಡಬೇಕಾಗುತ್ತದೆ. ಲಾಭದಾಯಕ ರೂಟ್‌ ಆಗಿದ್ದರೆ ನಮ್ಮಲ್ಲಿ ಸುಮಾರು ₹5,000ದಿಂದ ₹10,000ದವರೆಗೂ ಲಂಚ ನಡೆಯುತ್ತದೆ. ಕೆಲವೆಡೆ ಇದು ಲಕ್ಷ ದಾಟುವುದಿದೆ’ ಎಂದು ಹೆಸರು ಬಹಿರಂಗಪಟಿಸಲು ಇಚ್ಛಿಸದ ವಾಣಿಜ್ಯ ವಾಹನಗಳ ಮಾಲೀಕರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT