ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಬ್ಯಾಕ್‌ ಚಳವಳಿ ನಡುವೆಯೂ ಪರೀಕ್ಷಾ ಸ್ಫೋಟಕ್ಕೆ ಸ್ಥಳ ಗುರುತು

Last Updated 25 ಜುಲೈ 2022, 12:28 IST
ಅಕ್ಷರ ಗಾತ್ರ

ಮಂಡ್ಯ: ವಿವಿಧ ಸಂಘಟನೆಗಳ ಗೋಬ್ಯಾಕ್‌ ಚಳವಳಿ ನಡುವೆಯೂ ಕೆಆರ್‌ಎಸ್‌ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ 5 ಕಡೆ ಪರೀಕ್ಷಾರ್ಥ ಸ್ಫೋಟ ನಡೆಸಲು ಜಾರ್ಖಂಡ್‌, ಧನಬಾದ್‌ ಮೂಲದ ವಿಜ್ಞಾನಿಗಳ ತಂಡ ಸೋಮವಾರ ಸ್ಥಳ ಗುರುತು ಮಾಡಿತು.

ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯದ ಮೇಲೆ ಉಂಟಾಗುವ ಪರಿಣಾಮಗಳ ಅಧ್ಯಯನ ನಡೆಸಲು ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ (ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ– ಗಣಿ ಮತ್ತು ಇಂಧನ ಸಂಶೋಧನಾ ಕೇಂದ್ರೀಯ ಸಂಸ್ಥೆ)ನ ಐವರು ವಿಜ್ಞಾನಿಗಳು ಜುಲೈ 31ರವರೆಗೂ ವಿವಿಧೆಡೆ ಪರೀಕ್ಷಾರ್ಥ ಸ್ಫೋಟ ನಡೆಸಲಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ವಿಜ್ಞಾನಿಗಳು ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ, ಶ್ರೀರಂಗಪಟ್ಟಣ ತಾಲ್ಲೂಕು ನೀಲನಕೊಪ್ಪಲು ಬಳಿ ಸಂಚಾರ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ರೈತರ ಪ್ರತಿಭಟನೆ: ಕೆಆರ್‌ಎಸ್‌ ಭರ್ತಿಯಾಗಿರುವ ಸಂದರ್ಭದಲ್ಲಿ ಜಲಾಶಯದ ಬಳಿ ಸ್ಫೋಟ ನಡೆಸಬಾರದು, ವಿಜ್ಞಾನಿಗಳು ವಾಪಸ್‌ ತೆರಳಬೇಕು ಎಂದು ಒತ್ತಾಯಿಸಿ ರೈತಸಂಘ, ಕೆಆರ್‌ಎಸ್‌ ಉಳಿಸಿ ಜನಾಂದೋಲನ ಸಮಿತಿ ಸದಸ್ಯರು ಕೆಆರ್‌ಎಸ್‌ ಜಲಾಶಯದ ಗೇಟ್‌ ಎದುರು ‘ಗೋಬ್ಯಾಕ್‌’ ಚಳವಳಿ ನಡೆಸಿದರು.

ಪ್ರತಿಭಟನಾಕಾರರು ಕೆಆರ್‌ಎಸ್‌ನಿಂದ ಸ್ಫೋಟ ನಡೆಸಲು ಉದ್ದೇಶಿಸಿರುವ ಬೇಬಿಬೆಟ್ಟದವರೆಗೂ ಬೈಕ್‌ ರ‍್ಯಾಲಿ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ಅರ್ಧದಲ್ಲೇ ತಡೆದರು, ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

‘ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಬಾರದು ಎಂದು ಈಗಾಗಲೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ವರದಿ ನೀಡಿದ್ದಾರೆ. ಈಗ ಇನ್ನೊಂದು ಅಧ್ಯಯನದ ಅವಶ್ಯಕತೆ ಇಲ್ಲ. ಗಣಿ ಮಾಲೀಕರ ಪರ ವರದಿ ನೀಡುವ ಹುನ್ನಾರಕ್ಕಾಗಿ ಸ್ಫೋಟ ನಡೆಸಲಾಗುತ್ತಿದೆ, ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT