ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ಲೆಕ್ಕಿಸದೇ ‘ಇಮ್ರಾನ್ ಖಾನ್’ ಪುಸ್ತಕ ಬಿಡುಗಡೆ

Last Updated 27 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟಿಗ ಇಮ್ರಾನ್ ಖಾನ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕಲಾಗ್ರಾಮದಲ್ಲಿ ನಿರ್ಬಂಧ ಹೇರಿದರೂ, ಅದನ್ನು ಲೆಕ್ಕಿಸದ ಲೇಖಕರು ತಮ್ಮ ಮನೆಯಲ್ಲೇ ಪುಸ್ತಕ ಬಿಡುಗಡೆ ಮಾಡಿದರು.

ಸುಧಾಕರ್ ಎಸ್.ಬಿ. ಅವರು ಬರೆದಿರುವ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕಲಾಗ್ರಾಮದಲ್ಲಿ ಗುರುವಾರ ಸಂಜೆ 5.30ಕ್ಕೆ ಆಯೋಜನೆಗೊಂಡಿತ್ತು. ಇದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರಿ ನೀಡಿತ್ತು.

‘ಪಾಕಿಸ್ತಾನವು ಭಾರತದಲ್ಲಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದು, ಇದೇ ಕಾರಣಕ್ಕೆ ಪಾಕಿಸ್ತಾನದ ಜತೆ ಎಲ್ಲಾ ವ್ಯವಹಾರಗಳನ್ನು ಭಾರತ ನಿಲ್ಲಿಸಿದೆ. ಇಮ್ರಾನ್‌ ಖಾನ್ ಕಾಶ್ಮೀರದ ಭಯೋತ್ಪಾದನೆಗೆ ಸ್ವತಃ ಕುಮ್ಮಕ್ಕು ನೀಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಖಾನ್‌ ವೈಭವೀಕರಿಸುವುದು ದೇಶದ್ರೋಹ. ಪುಸ್ತಕ ಬಿಡುಗಡೆಗೆ ಅವಕಾಶ ನೀಡಬಾರದು ಮತ್ತು ಈ ಪುಸ್ತಕವನ್ನು ನಿಷೇಧಿಸಬೇಕು’ ಎಂದು ಮನವಿ ಮಾಡಿತ್ತು.

ಈ ಬೆನ್ನಲ್ಲೇ, ‘ಇಂದಿನ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ’ ಎಂಬ ಫಲಕವನ್ನೂ ಕಲಾ ಗ್ರಾಮದ ಅಧಿಕಾರಿಗಳು ಗೇಟ್ ಬಳಿ ಅಂಟಿಸಿದ್ದರು.

ಅದಾದ ಬಳಿಕ, ಲೇಖಕರು ತಮ್ಮ ಮನೆಯಲ್ಲೇ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಪುಸ್ತಕ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ‘ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ಅರ್ಥ ಮಾಡಿಕೊಳ್ಳದೆ ಕಾರ್ಯಕ್ರಮಕ್ಕೆ ಕೆಲ ಮೂರ್ಖರು ಅಡ್ಡಿಪಡಿಸಿದ್ದಾರೆ’ ಎಂದರು.

‘ಕ್ರಿಕೆಟ್ ಆಟಗಾರ ಇಮ್ರಾನ್ ಅವರನ್ನು ಮೆಚ್ಚುತ್ತೇನೆ. ಅವರ ರಾಜಕೀಯ ನಡೆಗಳ ಬಗ್ಗೆ ಭಿನ್ನಾಭಿ ಪ್ರಾಯ ಇದೆ. ಭಯೋತ್ಪಾದನೆಯನ್ನು ಎಂದಿಗೂ ಒಪ್ಪುವುದಿಲ್ಲ’ ಎಂದರು.

‘ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿರುವುದರಿಂದ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಧಕ್ಕೆಯಾದಾಗ ನಮ್ಮ ಧ್ವನಿ ಗಟ್ಟಿಯಾಗಬೇಕು’ ಎಂದು ಹೇಳಿದರು. ಸಾಹಿತಿ ಲೀಲಾದೇವಿ ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕವಿ ವಡ್ಡಗೆರೆ ನಾಗರಾಜಯ್ಯ ಪುಸ್ತಕ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT