ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ ಕಾ ಸಾಥ್ ಹೆಸರಿನಲ್ಲಿ ಸರ್ವನಾಶ ಮಾಡಿದ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ

Last Updated 4 ಡಿಸೆಂಬರ್ 2021, 11:02 IST
ಅಕ್ಷರ ಗಾತ್ರ

ಯಾದಗಿರಿ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌ ಹೆಸರಿನಲ್ಲಿ ದೇಶವನ್ನು ಸರ್ವನಾಶ ಮಾಡಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಕಲಬುರಗಿ-ಯಾದಗಿರಿ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣಾ ಅಂಗವಾಗಿ ಕಾಂಗ್ರೆಸ್ ಪಕ್ಷದಿಂದ ಶನಿವಾರ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮೋದಿ ಸುಳ್ಳಿನ ಸರದಾರ.‌ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದವರಿಸದೇ ನಿಲ್ಲಿಸಿದ್ದಾರೆ. ಸಬ್ ಕಾ ಸಾಥ್ ಹೆಸರಿನಲ್ಲಿ ದೇಶವನ್ನು ಸರ್ವನಾಶ ಮಾಡಿದ್ದಾರೆ. ಬಿಜೆಪಿಗೆ ಹೇಳಲೂ ಏನೂ ಇಲ್ಲ. ನಮ್ಮ ಯೋಜನೆಗಳನ್ನು ಮುಂದುವರಿಸಿ ಕೊಂಡು ಹೋಗಲು ಆಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ವೈದ್ಯಕೀಯ ಕಾಲೇಜು, ಅಣೆಕಟ್ಟು ಕಟ್ಟಿ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ನೀರಾವರಿ, ಕೆರೆ ಕಟ್ಟಿದ್ದರಿಂದ ಈಗ ಹೊಟ್ಟೆ ತುಂಬಾ ಅನ್ನ ಸಿಗುತ್ತಿದೆ. ಆದರೆ, ಮೋದಿ ಆರು ತಿಂಗಳಲ್ಲಿ ಹದಿನೈದು ಲಕ್ಷ ಕೊಡುತ್ತೇನೆ ಎಂದಿದ್ದರು. ಆದರೆ, ಅದ್ಯಾವುದು ಬರಲಿಲ್ಲ. ಉದ್ಯೋಗ ನಿಲ್ಲಿಸಿದ್ದಾರೆ. ರಾತ್ರೋ ರಾತ್ರಿ ನೋಟ್ ಬಂದ್ ಮಾಡಿದರು. ಕಪ್ಪು ಹಣ ಬರಲಿಲ್ಲ. ಬಡವರ ಬಳಿ ಸಾವಿರ ನೋಟು ಇದ್ದರೆ ₹500 ನೋಟುಕೊಟ್ಟು ಶ್ರೀಮಂತರು ಆದರು. ಇಂಥ ಸ್ಥಿತಿಯನ್ನು ಬಿಜೆಪಿ ತಂದಿದೆ ಎಂದರು.

ಮೋದಿ ಸರ್ಕಾರ ಹೆಣ್ಣು ಮಕ್ಕಳಿಗೂ ಮೋಸ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಸಿಲಿಂಡರ್‌ ಬೆಲೆ ₹400 ಇತ್ತು. ಈಗ ಸಾವಿರ ಆಗಿದೆ. ಸಬ್ಸಿಡಿಯೂ ನೀಡುತ್ತಿಲ್ಲ ಇಲ್ಲ ಎಂದು ದೂರಿದರು.

ಮೂರು ಕರಾಳ ಕಾಯ್ದೆ ಬಗ್ಗೆ ಚರ್ಚೆ ಮಾಡಿಲ್ಲ. ಉತ್ತರ ಪ್ರದೇಶ, ಉತ್ತರಖಾಂಡ, ಗೋವಾ, ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ಬಂದಿದ್ದರಿಂದ ಈ ಕಾಯ್ದೆಗಳನ್ನು ಹಿಂತೆಗೆದುಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಸೋಲು ಆಗಿದ್ದರಿಂದ ಮೂರು ಕಾಯ್ದೆಗಳನ್ನು ವಾಪಾಸ್ ತೆಗೆದುಕೊಂಡರು ಎಂದರು.

ನಮ್ಮ ಪಕ್ಷದ ಅಭ್ಯರ್ಥಿ ಮನೆಯಲ್ಲಿ ಕುಳಿತುಕೊಳ್ಳವವವರಲ್ಲ.‌ ಕಳೆದ ಬಾರಿ ಬಿಜೆಪಿ ಗೆಲ್ಲಿಸಿ ನೋಡಿದ್ದೀರಿ. ಅವರು ವಿಧಾನ ಪರಿಷತ್‌ನಲ್ಲಿ ಮತದಾರರ ಬಗ್ಗೆ ಚಕಾರವೆತ್ತಿಲ್ಲ. ನಿಮ್ಮ ಅನುಭವಕ್ಕೆ ಬಂದಿದ್ದರಿಂದ ಈ ಬಾರಿ ಸಾಮಾನ್ಯ ಕಾರ್ಯಕರ್ತನಿಗೆ ಗೆಲ್ಲಿಸಬೇಕು ಎಂದರು.

371 (1) ಈ ಭಾಗಕ್ಕೆ ಕನಸಾಗಿತ್ತು. ಇದನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ ಎಂದರು.

ಮಾಜಿ‌ ಸಚಿವ ಡಾ.ಶರಣಪ್ರಕಾಶ ಪಾಟೀಲ‌ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತ ಶಿವಾನಂದ ಪಾಟೀಲ ಅವರಿಗೆ ಟಿಕೆಟ್ ನೀಡಿದೆ. ಆದರೆ, ಬಿಜೆಪಿ ವ್ಯಾಪಾರಿಗೆ ಟಿಕೆಟ್ ನೀಡಿದ್ದಾರೆ. ಇದು ಶ್ರೀಮಂತ ಮತ್ತು ಬಡವರ ಮಧ್ಯೆ ಪೈಪೋಟಿ ಇದೆ. ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತದಾನ ಹಕ್ಕು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆ‍ಪಿ ಪ್ರಕಾರ ಬಡವರು ಶಾಸಕ, ಸಂಸದರಾಗಬಾರದು. ನೀವೂ ಆಮಿಷಕ್ಕೆ ಒಳಗಾಗಬೇಡಿ. ನಿಮ್ಮ ಮತವನ್ನು ಮಾರಿಕೊಳ್ಳ ಬೇಡಿ. ಜನಸಾಮಾನ್ಯರ ಜತೆಗೆ ಇದ್ದವರಿಗೆ ಮತ ನೀಡಿದರೆ ನಿಮ್ಮ ಕಷ್ಟಗಳಿಗೆ ಸ್ಪಂದನೆ ನೀಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರ ವಿಕೇಂದ್ರೀಕಣದ ಮೇಲೆ ನಂಬಿಕೆ ಇಟ್ಟಿದೆ. ಬಿಜೆಪಿ ಪಕ್ಷ ಇವುಗಳ ವಿರುದ್ಧವಾಗಿದೆ ಎಂದು ಟೀಕಿಸಿದರು.

ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಅಭ್ಯರ್ಥಿ ಶಿವಾನಂದ ಮರತೂರ ಮಾತನಾಡಿ, ನಾನು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಯಾವ ಆಧಾರದ ಮೇಲೆ ಪಕ್ಷದ ಆಭ್ಯರ್ಥಿಯನ್ನು ಘೋಷಿಸಿದೆ. ಬಿ.ಜಿ.ಪಾಟೀಲರು ಬಹಳ ಬ್ಯುಸಿಯಾಗಿರುತ್ತಾರೆ. ಹೀಗಾಗಿ ನಾನು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು.

ನಿಮ್ಮ ಮಾತು ಎಂಎಲ್ಸಿ ಕೇಳುವಂತೆ ಮಾಡುತ್ತೇನೆ. ಬಿಜೆಪಿ ಆಭ್ಯರ್ಥಿ ಆರು ವರ್ಷ ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಗ್ರಾಮ ಪಂಚಾಯಿತಿಗೆ ₹2 ಕೋಟಿ ಅನುದಾನ ಕೊಡುತ್ತೇನೆ ಎಂದಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಅನುದಾನ ನೀಡಿಲ್ಲ ಎಂದರು.

ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ ಹಲಕಲ್ ಮಾತನಾಡಿ, ಈ ಭಾಗಕ್ಕೆ ಎಲ್ಲ‌ ರೀತಿಯಿಂದಲೂ ಮೀಸಲಾತಿ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು‌.‌ ನಮ್ಮ ಪಕ್ಷದ ಆಭ್ಯರ್ಥಿಗೆ ಮತ ನೀಡಬೇಕು ಎಂದರು.

ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಅಜಯ ಸಿಂಗ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಮಾಜಿ‌ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು,‌ ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT