ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ-ಕಾಲೇಜುಗಳ ಅಭಿವೃದ್ಧಿ: ₹2.45 ಕೋಟಿ ನೆರವು ನೀಡಿದ ಮುಖ್ಯಮಂತ್ರಿ

ಸಿದ್ದರಾಮಯ್ಯ ನೀಡಿದ್ದು ₹10 ಲಕ್ಷ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ ‘ಶೂನ್ಯ’!
Last Updated 28 ನವೆಂಬರ್ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ಶಿಕಾರಿಪುರ ಕ್ಷೇತ್ರದ ಶಾಸಕರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಅಭಿವೃದ್ಧಿಗೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಎರಡು ವರ್ಷಗಳಲ್ಲಿ ₹2.45 ಕೋಟಿ ಅನುದಾನ ನೀಡಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್ ₹2.35 ಕೋಟಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಶಾಸಕ ಆರ್‌.ವಿ. ದೇಶಪಾಂಡೆ ಅವರು ₹1.71 ಕೋಟಿ, ಕೊಡಗು ಜಿಲ್ಲೆವಿರಾಜಪೇಟೆಯ ಕೆ.ಜಿ. ಬೋಪಯ್ಯ ₹1.56 ಕೋಟಿ ಹಾಗೂ ಮಡಿಕೇರಿಯ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ₹1.32 ಕೋಟಿ ಈ ಉದ್ದೇಶಕ್ಕೆ ವಿನಿಯೋಗಿಸಿದ್ದಾರೆ.

ಸಾಗರದ ಹರತಾಳು ಹಾಲಪ್ಪ ₹77 ಲಕ್ಷ, ಶಿವಮೊಗ್ಗ ನಗರ ಶಾಸಕರೂ ಆಗಿರುವ ಸಚಿವ ಕೆ.ಎಸ್. ಈಶ್ವರಪ್ಪ ₹42 ಲಕ್ಷ, ಸೊರಬ ಶಾಸಕ ಕುಮಾರ್ ಬಂಗಾರಪ್ಪ ₹ 38 ಲಕ್ಷ ಅನುದಾನ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಟಿ. ರಘುಮೂರ್ತಿ ವಿದ್ಯಾಭ್ಯಾಸ ಮಾಡಿದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಗೆ ಕೊಠಡಿ ನಿರ್ಮಾಣ, ಕಟ್ಟಡ, ಕಾಂಪೌಂಡ್‌, ‍ಪ್ರಯೋಗಾಲಯ ಪರಿಕರ ಖರೀದಿ ಸೇರಿ ಇತರ ಉದ್ದೇಶಕ್ಕೆ ₹90 ಲಕ್ಷ ಅನುದಾನ ನೀಡಿದ್ದಾರೆ. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ₹71 ಲಕ್ಷ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಏಳು ಶಾಲೆಗಳಿಗೆ ₹61 ಲಕ್ಷ, ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ₹23 ಲಕ್ಷ, ಬೀದರ್‌ ಜಿಲ್ಲೆಯ ಔರಾದ್‌ ಶಾಸಕರೂ ಆಗಿರುವ ಸಚಿವ ಪ್ರಭು ಚವ್ಹಾಣ ₹48 ಲಕ್ಷ ಅನುದಾನ ಒದಗಿಸಿದ್ದಾರೆ.

ಶೃಂಗೇರಿ ಶಾಸಕ ಡಿ.ಟಿ. ರಾಜೇಗೌಡ ₹59 ಲಕ್ಷ,ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ರಾಮನಹಳ್ಳಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಸರ್ಕಾರಿ ಪ್ರೌಢಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ₹25.26 ಲಕ್ಷ ಹಂಚಿಕೆ ಮಾಡಿದ್ದಾರೆ.

ಮೈಸೂರು ಭಾಗದವರು ‘ಪರವಾಗಿಲ್ಲ’: ಮೈಸೂರು ಜಿಲ್ಲೆಯ ತಿ. ನರಸೀಪುರ ಕ್ಷೇತ್ರದ ಶಾಸಕ ಎಂ. ಅಶ್ವಿನ್‌ ಕುಮಾರ್ ಅವರು ಎರಡು ವರ್ಷಗಳಲ್ಲಿ 29 ಪ್ರೌಢಶಾಲೆ, 19 ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಡಿಜಿಟಲ್‌ ಸ್ಮಾರ್ಟ್ ತರಗತಿ ನಡೆಸಲು ಶಾಸಕರ ಅನುದಾನದಡಿ ₹98 ಲಕ್ಷ ಮೊತ್ತದ ಉಪಕರಣಗಳನ್ನು ಕೊಡಿಸಿದ್ದಾರೆ. ತಿ. ನರಸೀಪುರ ಪಟ್ಟಣ, ಬನ್ನೂರು ಪಟ್ಟಣದ ಬಾಲಕ ಬಾಲಕಿಯರ ಪ್ರೌಢಶಾಲೆ, ತಲಕಾಡು ಸೇರಿದಂತೆ ತಾಲ್ಲೂಕಿನ ಹಲವು ಶಾಲೆ, ಕಾಲೇಜುಗಳಲ್ಲಿ ಈ ಸೌಲಭ್ಯವಿದೆ. ಎರಡು ಶಾಲೆಗಳ ಅಭಿವೃದ್ಧಿ ಕಾಮಗಾರಿಗೂ ಅನುದಾನ ನೀಡಿದ್ದಾರೆ.

ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ₹26 ಲಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ₹54 ಲಕ್ಷ ನೀಡಿದ್ದಾರೆ.

ಎಚ್‌. ವಿಶ್ವನಾಥ್‌ ಅವರು ಹುಣಸೂರು ಶಾಸಕರಾಗಿದ್ದ ಅವಧಿಯಲ್ಲಿ (2018–19) ₹26 ಲಕ್ಷ ಅನುದಾನವನ್ನು ಶಾಲೆ–ಕಾಲೇಜುಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ್ದಾರೆ. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ ಶಾಲಾ ಕೊಠಡಿ ನಿರ್ಮಾಣಕ್ಕೆ ಒಟ್ಟು ₹34 ಲಕ್ಷ ನೀಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದ ಎಚ್.ಕೆ. ಕುಮಾರಸ್ವಾಮಿ ₹39 ಲಕ್ಷ. ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಕೇವಲ ₹10 ಲಕ್ಷ ಅನುದಾನವನ್ನು ಶಾಲೆಗಳಲ್ಲಿ ಶೌಚಾಲಯ, ಪ್ರಯೋಗಾಲಯಕ್ಕೆ, ಹಾಸನ ಶಾಸಕ ಪ್ರೀತಂ ಗೌಡ ₹33 ಲಕ್ಷ ವ್ಯಯಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ಗುರುಭವನ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ₹40 ಲಕ್ಷ ಹಾಗೂ ಎಂ. ಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ ₹31 ಲಕ್ಷ, ಮೇಲುಕೋಟೆಯ ಸಿ.ಎಸ್‌. ಪುಟ್ಟರಾಜು ₹28.99 ಲಕ್ಷವ್ಯಯಿಸಿದ್ದಾರೆ.

ಇವರನ್ನು ಹೊರತು ಪಡಿಸಿ ರಾಜ್ಯದ ಉಳಿದ ಶಾಸಕರು ₹20 ಲಕ್ಷಕ್ಕಿಂತ ಕಡಿಮೆ ಅನುದಾನವನ್ನು ಈ ಉದ್ದೇಶಕ್ಕೆ ಒದಗಿಸಿದ್ದಾರೆ.

ಬಿಡಿಗಾಸು ಅನುದಾನವನ್ನೂ ನೀಡದ ಘಟಾನುಘಟಿ ನಾಯಕರು
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ರಾಮನಗರ ಕ್ಷೇತ್ರದ ಅನಿತಾ ಕುಮಾರಸ್ವಾಮಿ, ಕೆ.ಆರ್‌. ಪೇಟೆಯ ಶಾಸಕರೂ ಆಗಿರುವ ಸಚಿವಕೆ.ಸಿ. ನಾರಾಯಣಗೌಡ, ಹೊಳೆ ನರಸೀಪುರ ಶಾಸಕ ಎಚ್‌.ಡಿ. ರೇವಣ್ಣ,ದಾವಣಗೆರೆ ದಕ್ಷಿಣದ ಶಾಸಕ ಶಾಮನೂರು ಶಿವಶಂಕರಪ್ಪ ಒಂದು ಸರ್ಕಾರಿ ಶಾಲೆಗೂ ಅನುದಾನ ಒದಗಿಸಿಲ್ಲ.

ಮಾಗಡಿ ಕ್ಷೇತ್ರದ ಶಾಸಕ ಎ. ಮಂಜುನಾಥ್, ಚಿತ್ರದುರ್ಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ,ಪಿರಿಯಾಪಟ್ಟಣ ಶಾಸಕ ಕೆ. ಮಹದೇವ, ನಂಜನಗೂಡು ಶಾಸಕ ಬಿ. ಹರ್ಷವರ್ಧನ್‌ ಈ ಉದ್ದೇಶಕ್ಕೆ ಅನುದಾನ ನೀಡಿಲ್ಲ.

ತುಮಕೂರು ದಕ್ಷಿಣ ಶೈಕ್ಷಣಿಕ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಯಾವ ಶಾಸಕರೂ ಅನುದಾನ ನೀಡಿಲ್ಲ.

ಪ್ರಸಕ್ತ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೆ ₹20 ಲಕ್ಷಕ್ಕಿಂತ ಹೆಚ್ಚಿನ ಅನುದಾನ ನೀಡಿದ ಶಾಸಕರು
ಶಿವರಾಮ ಹೆಬ್ಬಾರ (ಯಲ್ಲಾಪುರ): ₹ 89
ಎಂ.ಬಿ.ಪಾಟೀಲ(ಬಬಲೇಶ್ವರ): ₹73
ಯಶವಂತರಾಯಗೌಡ ಪಾಟೀಲ (ಇಂಡಿ): ₹ 72.27
ಶಿವಾನಂದ ಪಾಟೀಲ (ಬಸವನಬಾಗೇವಾಡಿ): ₹68.79
ಪ್ರಭು ಚವಾಣ್ (ಔರಾದ್): ₹ 62.47
ರೂಪಾಲಿ ನಾಯ್ಕ (ಕಾರವಾರ– ಅಂಕೋಲ): ₹ 60.65
ಡಿ.ಟಿ. ರಾಜೇಗೌಡ (ಶೃಂಗೇರಿ): 60.5
ಶಶಿಕಲಾ ಜೊಲ್ಲೆ (ನಿಪ್ಪಾಣಿ): ₹60
ಸುನೀಲ್‌ಕುಮಾರ್ (ಕಾರ್ಕಳ): 45
ಡಾ.ಅಂಜಲಿ ನಿಂಬಾಳ್ಕರ (ಖಾನಾಪುರ): ₹40
ದಿವಂಗತ ಬಿ.ನಾರಾಯಣ (ಬಸವಕಲ್ಯಾಣ): ₹ 36.87
ವಿಶ್ವೇಶ್ವರ ಹೆಗಡೆ ಕಾಗೇರಿ (ಶಿರಸಿ–ಸಿದ್ದಾಪುರ): ₹ 33.81
ಬಸವರಾಜ ದಡೇಸುಗೂರು (ಕನಕಗಿರಿ): ₹ 33
ಸುಕುಮಾರ ಶೆಟ್ಟಿ (ಬೈಂದೂರು): ₹ 32.41
ಕರುಣಾಕರ ರೆಡ್ಡಿ (ಹರಪನಹಳ್ಳಿ): ₹ 31.10
ಗೋವಿಂದ ಕಾರಜೋಳ (ಮುಧೋಳ): ₹ 26.5
ರಾಜಕುಮಾರ ಪಾಟೀಲ ತೆಲ್ಕೂರ (ಸೇಡಂ): ₹25
ಡಿ.ಎಸ್‌. ಸುರೇಶ್ (ತರೀಕೆರೆ): ₹ 23.97
ರಾಮಣ್ಣ ಲಮಾಣಿ (ಶಿರಹಟ್ಟಿ): ₹ 23.5
ಡಿ.ಎಸ್‌. ಸುರೇಶ್ (ತರೀಕೆರೆ): ₹ 22
ಆನಂದ ನ್ಯಾಮಗೌಡ (ಜಮಖಂಡಿ): ₹ 22
ಕಳಕಪ್ಪ ಜಿ.ಬಂಡಿ (ರೋಣ): ₹ 22
ಬಸನಗೌಡ ಪಾಟೀಲ ಯತ್ನಾಳ (ವಿಜಯಪುರ ನಗರ): ₹20
ಸೋಮನಗೌಡ ಪಾಟೀಲ ಸಾಸನೂರ (ದೇವರಹಿಪ್ಪರಗಿ): ₹20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT