ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆಯ ಬಲದಲ್ಲೇ ಅಭಿವೃದ್ಧಿ ಸಾಧ್ಯ: ರಾಜ್ಯಪಾಲ ಗೆಹಲೋತ್

Last Updated 20 ನವೆಂಬರ್ 2022, 15:08 IST
ಅಕ್ಷರ ಗಾತ್ರ

ಬೆಂಗಳೂರು: ಮಾತೃಭಾಷೆಯ ಬಲದಲ್ಲೇ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮಾತೃಭಾಷೆಯ ಮಾಧ್ಯಮದ ಶಿಕ್ಷಣದ ಬಗ್ಗೆ ಕೀಳರಿಮೆ ಬೇಡ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ನೆಹರೂ ಯುವ ಕೇಂದ್ರದ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಜಾರ್ಖಂಡ್‌, ಚತ್ತೀಸ್‌ಗಢ, ಒಡಿಶಾ ಮತ್ತು ಬಿಹಾರ ರಾಜ್ಯಗಳಿಂದ ರಾಜ್ಯಕ್ಕೆ ಬಂದಿರುವ ಬುಡಕಟ್ಟು ಯುವಜನರ ತಂಡಗಳನ್ನು ಸ್ವಾಗತಿಸಲು ನಗರದ ಯವನಿಕಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಪಾನ್‌, ಫ್ರಾನ್ಸ್‌, ಚೀನಾ, ಜರ್ಮನಿ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಣವಿಲ್ಲ. ಆ ದೇಶಗಳು ಮಾತೃಭಾಷಾ ಮಾಧ್ಯಮದ ಶಿಕ್ಷಣದ ಮೂಲಕವೇ ಜಗತ್ತಿನ ಪ್ರಬಲ ರಾಷ್ಟ್ರಗಳಾಗಿ ಬೆಳೆದಿವೆ.ಇಂಗ್ಲಿಷ್‌ ಭಾಷೆಯಿಂದಷ್ಟೇ ಅಭಿವೃದ್ಧಿ ಸಾಧ್ಯ ಎಂಬ ಭಾವನೆ ಸರಿಯಲ್ಲ ಎಂದರು.

ದೇಶದಲ್ಲಿ ಹಲವು ಭಾಷೆ ಮತ್ತು ಸಂಸ್ಕೃತಿಗಳಿವೆ. ವೈವಿಧ್ಯಮಯವಾದ ರಾಷ್ಟ್ರದಲ್ಲಿ ಎಲ್ಲ ಸಮುದಾಯಗಳೂ ಅಭಿವೃದ್ಧಿಯ ಭಾಗವಾಗಬೇಕು. 75 ವರ್ಷಗಳ ಸುದೀರ್ಘ ಪ್ರಯತ್ನದಿಂದ ದೇಶವು ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಬೆಳವಣಿಗೆ ಸಾಧಿಸುವ ಅಭಿವೃದ್ಧಿ ಮಾದರಿಗೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.

ಬೆಂಗಳೂರು ಅಭಿವೃದ್ಧಿಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ನಗರ. ಕರ್ನಾಟಕ ರಾಜ್ಯ ಕೂಡ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಿದೆ. ಇಲ್ಲಿ ಮಠಗಳು, ಧಾರ್ಮಿಕ ಸಂಸ್ಥೆಗಳು ಉಚಿತವಾಗಿ ಶಿಕ್ಷಣ ನೀಡುತ್ತಿವೆ. ಇಂತಹ ಕೆಲಸ ಇತರ ರಾಜ್ಯಗಳಲ್ಲೂ ಆಗಬೇಕು. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ತೊಲಗಿಸುವುದಕ್ಕೆ ಶಿಕ್ಷಣವನ್ನೇ ಬಳಸಿಕೊಳ್ಳಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮಾತನಾಡಿ, ‘ನಾಲ್ಕು ರಾಜ್ಯಗಳ ಯುವಜನರಿಗೆ ನೆಹರೂ ಯುವ ಕೇಂದ್ರದ ಮೂಲಕ ಬೆಂಗಳೂರು ಮತ್ತು ಕರ್ನಾಟಕವನ್ನು ಅರಿಯುವ ಅವಕಾಶ ಒದಗಿದೆ. ಭವಿಷ್ಯದ ಕುರಿತು ಹೊಸ ದಿಕ್ಸೂಚಿಯೊಂದಿಗೆ ಇಲ್ಲಿಂದ ಮರಳುವಂತೆ ಈ ಪ್ರವಾಸವನ್ನು ಬಳಸಿಕೊಳ್ಳಿ’ ಎಂದು ಪ್ರವಾಸಿ ತಂಡಗಳಿಗೆ ಕಿವಿಮಾತು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಮುಲ್ಲೈ ಮುಹಿಲನ್‌, ನೆಹರೂ ಯುವ ಕೇಂದ್ರದ ರಾಜ್ಯ ಘಟಕದ ನಿರ್ದೇಶಕ ಎಂ.ಎನ್‌. ನಟರಾಜ್, ಉಪ ನಿರ್ದೇಶಕ ಅನಿಲ್‌ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT