ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ರಾಮಗಳಿಗೂ ಡಿಜಿಟಲ್‌ ಸಂಪರ್ಕ ಜಾಲ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ

2025 ರ ವೇಳೆ 10 ಲಕ್ಷ ಉದ್ಯೋಗ ಸೃಷ್ಟಿ
Last Updated 9 ಫೆಬ್ರುವರಿ 2021, 16:26 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ಆರ್ಥಿಕತೆ ಸದೃಢಗೊಳಿಸಲು ರಾಜ್ಯದ ಕುಗ್ರಾಮಗಳಲ್ಲೂ ಸಂಪರ್ಕ ಜಾಲ ಉತ್ತಮಗೊಳಿಸಲಾಗುವುದು. ಇದಕ್ಕಾಗಿ ದಿನದ 24 ಗಂಟೆ ವಿದ್ಯುತ್‌ ಪೂರೈಕೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕದ ಒಟ್ಟು ಉತ್ಪಾದನೆಯಲ್ಲಿ (ಎಸ್‌ಡಿಜಿಪಿ) ಡಿಜಿಟಲ್‌ ಆರ್ಥಿಕತೆಯ ಕೊಡುಗೆಯನ್ನು ಮುಂದಿನ 5 ವರ್ಷಗಳಲ್ಲಿ ಶೇ 30 ಕ್ಕೆ ಹೆಚ್ಚಿಸುವ ಗುರಿ ಹೊಂದಿರುವ ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ (ಕೆಡಿಇಎಂ) ಉದ್ಘಾಟನೆ ಮತ್ತು ‘ಬಿಯಾಂಡ್ ಬೆಂಗಳೂರು’ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಿಗೆ ಹೂಡಿಕೆಗಳನ್ನು ಆಕರ್ಷಿಸಿ 2025ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೆಡಿಇಎಂ ಹೊಂದಿದೆ ಎಂದರು.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಉದ್ಯಮಗಳು ವಿದ್ಯಾರ್ಥಿ ಅವಧಿಯಲ್ಲಿ ಉತ್ತೇಜನ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಈಗ ಉದ್ಯಮಗಳು ಈ ಬಗ್ಗೆ ನಿರಾಸಕ್ತಿ ತಾಳಿವೆ. ಯುವ ಪೀಳಿಗೆಯೇ ಮುಂದಿನ ಭವಿಷ್ಯವಾಗಿರುವುದರಿಂದ ಅವರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೆಡಿಇಎಂ ಹೆಚ್ಚು ಉದ್ಯಮಸ್ನೇಹಿ ಆಗಿರಬೇಕು ಎಂಬ ಕಾರಣ ಸರ್ಕಾರ ಇದರಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು (ಶೇ 51) ಉದ್ಯಮ ಸಂಘಟನೆಗಳಿಗೆ ಬಿಟ್ಟುಕೊಟ್ಟಿದೆ. ಇದರಲ್ಲಿ ಸರ್ಕಾರ ಶೇ 49 ಪಾಲು ಇರಿಸಿಕೊಂಡಿದೆ ಮತ್ತು ಸೌಕರ್ಯವನ್ನು ಒದಗಿಸುವ ಪಾತ್ರವನ್ನು ನಿರ್ವಹಿಸಲು ಒತ್ತು ನೀಡಲಿದೆ ಎಂದರು.

ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಅಭಿವೃದ್ಧಿ ಮತ್ತು ಸೇವೆಗಳನ್ನು ಒದಗಿಸುವುದು, ಆವಿಷ್ಕಾರಗಳು ಮತ್ತು ನವೋದ್ಯಮಗಳು, ಎಲೆಕ್ಟ್ರಾನಿಕ್ಸ್‌ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ(ಇಎಸ್‌ಡಿಎಂ), ಬಿಯಾಂಡ್‌ ಬೆಂಗಳೂರು ಮತ್ತು ಪ್ರತಿಭಾ ಸಂವರ್ಧನೆ(ಟ್ಯಾಲೆಂಟ್‌ ಆಕ್ಸಲರೇಟ್‌) ಈ ಐದು ವಲಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಾಗುವುದು ಎಂದು ಅವರು ವಿವರಿಸಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು ಮಾತನಾಡಿ, ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿಗೆ ಮಾಹಿತಿ ತಂತ್ರಜ್ಞಾನ ವಲಯದ ಕೊಡುಗೆ ಶೇ 25ರಷ್ಟು ಇದ್ದು, ಇದರಲ್ಲಿ ಬೆಂಗಳೂರಿನ ಕೊಡುಗೆಯೇ ಶೇ 98 ರಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಾಚೆಗಿನ ಪಾಲು ಹೆಚ್ಚಿಸುವ ಸಲುವಾಗಿ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡ ಮಾತನಾಡಿ, ಮೈಸೂರು, ಮಂಗಳೂರು, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿ, ಶಿವಮೊಗ್ಗ, ತುಮಕೂರು ಈ ಆರು ಕ್ಲಸ್ಟರ್ ಗಳಲ್ಲಿ ಡಿಟಿಜಲ್ ಆರ್ಥಿಕತೆ ಕೊಡುಗೆ ಹೆಚ್ಚಿಸಲು ಅವಕಾಶಗಳಿವೆ ಎಂದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನ್ಯಾಸ್ ಕಾಂ ಉಪಾಧ್ಯಕ್ಷ ವಿಶ್ವನಾಥ್, ಕೆಡಿಇಎಂ ಸದಸ್ಯ ನಾಗೇಶ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ–ಬಿಟಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೀನಾ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT