ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ದೂರುದಾರ ದಿನೇಶ್ ಕಲ್ಲಹಳ್ಳಿಗೆ ಪೊಲೀಸರಿಂದ ಬುಲಾವ್

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಮೇಶ ಜಾರಕಿಹೊಳಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ. ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಪೊಲೀಸರು ಸಿದ್ಧರಾಗಿದ್ದು, ಬುಧವಾರ ಬೆಳಿಗ್ಗೆ ಠಾಣೆಗೆ ಬರುವಂತೆ ಸೂಚನೆ ನೀಡಿರುವುದಾಗಿ ಗೊತ್ತಾಗಿದೆ.

ಸಿ.ಡಿ. ಪ್ರಕರಣ ಸಂಬಂಧ ಮಾ. 2ರಂದು ದೂರು ನೀಡಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್, ಇದೀಗ ದೂರು ಹಿಂಪಡೆಯುವುದಾಗಿ ಕಬ್ಬನ್ ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್ ಅವರಿಗೆ ಐದು ಪುಟಗಳ ಪತ್ರ ನೀಡಿದ್ದಾರೆ.

ಪತ್ರಕ್ಕೆ ಉತ್ತರಿಸಿರುವ ಪೊಲೀಸರು, ‘ದೂರು ಹಿಂಪಡೆಯಲು ಸದ್ಯಕ್ಕೆ ಅವಕಾಶವಿಲ್ಲ. ದೂರಿನ ಬಗ್ಗೆ ಕೆಲ ಮಾಹಿತಿಗಳನ್ನು ಕಲೆಹಾಕಲು ತಮ್ಮ ವಿಚಾರಣೆ ಅಗತ್ಯವಿದೆ. ಹೀಗಾಗಿ, ಠಾಣೆಗೆ ಬನ್ನಿ’ ಎಂದಿರುವುದಾಗಿ ಗೊತ್ತಾಗಿದೆ. ಪೊಲೀಸರ ಸೂಚನೆಯಂತೆ ದಿನೇಶ್ ಬುಧವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ತನಿಖೆಗೆ ಕಾಲಾವಕಾಶ: ‘ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಆರೋಪದಡಿ ದಿನೇಶ್ ದೂರು ಸಲ್ಲಿಸಿದ್ದಾರೆ. ಅದನ್ನು ಸ್ವೀಕರಿಸಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದ್ದು, ಕೆಲ ಮಾಹಿತಿಗಳನ್ನು ಈಗಾಗಲೇ ಕಲೆ ಹಾಕಲಾಗಿದೆ. ಈ ಅವಧಿಯಲ್ಲಿ ಏಕಾಏಕಿ ದೂರು ಹಿಂಪಡೆಯಲು ಅವಕಾಶವಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣದ ಬಗ್ಗೆ ತನಿಖಾಧಿಕಾರಿ ತನಿಖೆ ನಡೆಸುತ್ತಿದ್ದಾರೆ. ಕಲೆಹಾಕುವ ಮಾಹಿತಿಗಳನ್ನು ಅವರೇ ಪರಿಶೀಲನೆ ನಡೆಸಲಿದ್ದಾರೆ. ಅದಾದ ನಂತರವೇ ದೂರಿನಡಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ತನಿಖಾಧಿಕಾರಿಯೇ ತೀರ್ಮಾನಿಸಲಿದ್ದಾರೆ. ಇದಕ್ಕಾಗಿ ದೂರು ಸ್ವೀಕಾರವಾದ ದಿನದಿಂದ 15 ದಿನ ಕಾಲಾವಕಾಶವೂ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT