ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ | ಬಿಪಿಎಲ್‌ ಕಾರ್ಡ್ ಹೊಂದಿರುವ 21,232 ಸರ್ಕಾರಿ ನೌಕರರಿಗೆ ದಂಡ

*₹40 ಸಾವಿರದಿಂದ ₹1.5 ಲಕ್ಷದವರೆಗೆ ದಂಡ * ಶಿಸ್ತು ಕ್ರಮಕ್ಕೆ ನೋಟಿಸ್‌
Last Updated 14 ಫೆಬ್ರುವರಿ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 21,232 ಸರ್ಕಾರಿ ನೌಕರರು ಬಿಪಿಎಲ್‌ (ಆದ್ಯತಾ) ಪಡಿತರ ಚೀಟಿ ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ, ಕೆಲವರು ಕಡುಬಡವರಿಗೆ ನೀಡಲಾಗುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್‌ ಹೊಂದಿದ್ದಾರೆ!

ಇದೀಗ, ಆಹಾರ ಇಲಾಖೆಯ ಆಯುಕ್ತರ ಸೂಚನೆಯಂತೆ ತಾಲ್ಲೂಕು ಹಂತದಲ್ಲಿ ಇಲಾಖೆಯ ಅಧಿಕಾರಿಗಳ ಮೂಲಕ ‘ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸೇವಾ ನಿಯಮ’ಗಳಡಿ ಕಾರಣ ಕೇಳಿಈ ನೌಕರರಿಗೆ ನೋಟಿಸ್‌ ನೀಡಲಾಗುತ್ತಿದೆ. ಅಲ್ಲದೆ, ಅಂಥ ನೌಕರರಿಗೆ ತಲಾ ₹ 40 ಸಾವಿರದಿಂದ ₹ 1.50 ಲಕ್ಷದವರೆಗೆ ದಂಡ ವಿಧಿಸಲಾಗಿದೆ.

ಸರ್ಕಾರ ನಿಗದಿಪಡಿಸಿರುವ ಮಾನದಂಡ ಉಲ್ಲಂಘಿಸಿ ಎಎವೈ ಮತ್ತು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಮಾಹಿತಿಯನ್ನು ನೀಡುವಂತೆ ಇ–ಆಡಳಿತಕ್ಕೆ (ಆರ್ಥಿಕ ಇಲಾಖೆ) ಆಹಾರ ಇಲಾಖೆ ತಿಳಿಸಿತ್ತು. ಅದರಂತೆ, ಎಚ್‌ಆರ್‌ಎಂಎಸ್‌ (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ದತ್ತಾಂಶದಲ್ಲಿರುವ ನೌಕರರಲ್ಲಿ ಯಾರೆಲ್ಲ ಎಎವೈ, ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಆಹಾರ ಇಲಾಖೆ ಪಡೆದುಕೊಂಡಿದೆ.

‘ಬಿಪಿಎಲ್‌ ಪಡಿತರ ಚೀಟಿಯನ್ನು ಸರ್ಕಾರ ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯಾವುದೇ ನೌಕರ ಅಥವಾ ಅವರ ಅವಲಂಬಿತ ಕುಟುಂಬ ಹೊಂದಿದ್ದರೆ, ಒಂದು ತಿಂಗಳಲ್ಲಿ ಅದನ್ನು ಆಹಾರ ಇಲಾಖೆಗೆ ಹಿಂದಿರುಗಿಸಿ ರದ್ದುಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಶಿಸ್ತುಕ್ರಮ ಮತ್ತು ಕ್ರಿಮಿನಲ್‌ ಮೊಕದ್ದಮೆ ಹೂಡಿ, ನಷ್ಟ ವಸೂಲು ಮಾಡಲಾಗುವುದು’ ಎಂದು ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ. ವಿಜಯಭಾಸ್ಕರ್‌ ಅವರು 2020ರ ಜೂನ್‌ 10ರಂದು ಸುತ್ತೋಲೆ ಹೊರಡಿಸಿದ್ದರು.

ಅನರ್ಹರು ಹೊಂದಿರುವ ಎಎವೈ, ಬಿಪಿಎಲ್‌ ಪಡಿತರ ಚೀಟಿಯನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಪತ್ತೆ ಮಾಡಲು ಆಹಾರ ಸಚಿವರ ಅಧ್ಯಕ್ಷತೆಯಲ್ಲಿ ವರ್ಷದ ಹಿಂದೆ (2021ರ ಫೆ. 17ರಂದು) ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದೀಗ, ಎಚ್‌ಆರ್‌ಎಂಎಸ್‌ ದತ್ತಾಂಶದ ಮೂಲಕ ಎಎವೈ, ಬಿಪಿಎಲ್‌ ಕಾರ್ಡ್‌ದಾರರ ಮಾಹಿತಿ ಪಡೆದು, ಅದನ್ನು ಎನ್‌ಐಸಿ (ನ್ಯಾಷನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌)ಗೆ ನೀಡಿ ಪರಿಶೀಲನೆ ನಡೆಸಲಾಗಿದೆ. ಆ ಪಟ್ಟಿಯನ್ನು ಆಧರಿಸಿ, ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಜಂಟಿ ಹಾಗೂ ಉಪ ನಿರ್ದೇಶಕರಿಗೆ ಹಲವು ಬಾರಿ ಪತ್ರ ಬರೆದಿರುವ ಆಹಾರ ಇಲಾಖೆ ಆಯುಕ್ತರು, ಸರ್ಕಾರಿ, ಅರೆ ಸರ್ಕಾರಿ ನೌಕರರು ಹೊಂದಿರುವ ಎಎವೈ ಮತ್ತು ಬಿಪಿಎಲ್‌ ಪಡಿತರ ಚೀಟಿಯನ್ನು ಎಪಿಎಲ್‌ (ಆದ್ಯತೇತರ) ಪಡಿತರ ಚೀಟಿಯಾಗಿ ಪರಿವರ್ತಿಸುವಂತೆ ಸೂಚಿಸಿದ್ದರು.

‘ಹಲವು ಬಾರಿ ಸೂಚನೆ ನೀಡಿದ್ದರೂ ಎಎವೈ, ಬಿಪಿಎಲ್‌ ಕಾರ್ಡ್‌ ಹೊಂದಿದ್ದ ಅನೇಕ ಸರ್ಕಾರಿ ನೌಕರರು ಅದನ್ನು ರದ್ದುಪಡಿಸಿಕೊಂಡಿಲ್ಲ. ಎಪಿಎಲ್‌ ಕಾರ್ಡ್‌ ಆಗಿಯೂ ಪರಿವರ್ತಿಸಿಕೊಂಡಿಲ್ಲ. ಹೀಗಾಗಿ, ದಂಡ ವಿಧಿಸುವ ಜೊತೆಗೆ, ಕಾರಣ ಕೇಳಿ ನೋಟಿಸ್‌ ನೀಡಲಾಗುತ್ತಿದೆ’ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ನೋಟಿಸ್‌ನಲ್ಲಿ ಏನಿದೆ?

‘ನೀವು ಎಎವೈ/ ಬಿಪಿಎಲ್ ಕಾರ್ಡ್‌ (ಕಾರ್ಡ್‌ ಸಂಖ್ಯೆ) ಹೊಂದಿದ್ದು, ಸರ್ಕಾರಿ ಸೇವೆಯಲ್ಲಿದ್ದರೂ ಅದನ್ನು ಹಿಂದಿರುಗಿಸಿಲ್ಲ. ಸರ್ಕಾರದ ಯೋಜನೆಗಳನ್ನು ಅಕ್ರಮವಾಗಿ ಬಳಸುತ್ತಿದ್ದೀರಿ. ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆಯುವುದು ಕಾನೂನುರೀತ್ಯ ಅಪರಾಧ. ಆಹಾರ ಇಲಾಖೆಗೆ ಈ ಬಗ್ಗೆ ವಿವರಣೆ ನೀಡದಿದ್ದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದುನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

‘ಆರು ತಿಂಗಳ ಕಾಲಾವಕಾಶ ಕೊಡಿ’

‘ಸರ್ಕಾರಿ ಹುದ್ದೆಗೆ ನೇಮಕಗೊಂಡ ಬಳಿಕ ಕುಟುಂಬ (ತಂದೆ, ತಾಯಿ) ಹೊಂದಿರುವ ಬಿಪಿಎಲ್‌ ಪಡಿತರ ಚೀಟಿಯಿಂದ ಹೆಸರು ತೆಗೆದುಹಾಕಿಸಿದ್ದೇನೆ. ಆದರೂ ನೋಟಿಸ್‌ ನೀಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸರ್ಕಾರಿ ನೌಕರರೊಬ್ಬರು ತಿಳಿಸಿದರು.

‘ಅವಿವಾಹಿತರಾಗಿರುವವರು ಸೇವಾ ಪುಸ್ತಕದಲ್ಲಿ ತಂದೆ–ತಾಯಿ ಹೆಸರು ನಾಮನಿರ್ದೇಶನ ಮಾಡಿದ್ದಾರೆ. ಅವರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೂ ದಂಡ ಕಟ್ಟುವಂತೆ ಇಲಾಖೆ ಸೂಚಿಸಿದೆ. ಎಎವೈ, ಬಿಪಿಎಲ್‌ ಕಾರ್ಡ್‌ನಲ್ಲಿ ಹೆಸರಿರುವವರು ಅದನ್ನು ರದ್ದುಪಡಿಸಿಕೊಳ್ಳಬೇಕೆಂಬ ಸರ್ಕಾರದ ಆದೇಶ ಶೇ 95ರಷ್ಟು ನೌಕರರಿಗೆ ಗೊತ್ತಿಲ್ಲ. ಆದ್ದರಿಂದ, ಆರು ತಿಂಗಳ ಕಾಲಾವಕಾಶ ನೀಡಿ, ದಂಡ ವಸೂಲಿಯಿಂದ ಮುಕ್ತಗೊಳಿಸಬೇಕು’ ಎಂದೂ ಕೆಲವು ನೌಕರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT