ಮಂಗಳವಾರ, ಮಾರ್ಚ್ 2, 2021
19 °C

ಎಲ್ಲೆ ಮೀರಿ ಬೆಳೆಯಲಿದೆ ದೂರಶಿಕ್ಷಣ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಮೈಸೂರು: ‘ಇನ್ನು ಮುಂದೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮೂಲಕವೇ ದೂರ ಶಿಕ್ಷಣವನ್ನು ನೀಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ವಿಶ್ವವಿದ್ಯಾಲಯದ ನೇರ ತರಗತಿಗಳ ಆರಂಭಕ್ಕೆ ವರ್ಚುವಲ್ ಮೂಲಕ ಬೆಂಗಳೂರಿನಿಂದಲೇ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರಸಕ್ತ ಸಾಲಿನಲ್ಲಿ 17,244 ವಿದ್ಯಾರ್ಥಿಗಳು ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಪ್ರಮಾಣ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ದೂರಶಿಕ್ಷಣಕ್ಕೆ ಯಾವುದೇ ರೀತಿಯ ಗಡಿಗಳು ಇರುವುದಿಲ್ಲ. ಈ ವಿಶ್ವವಿದ್ಯಾಲಯ ರಾಷ್ಟ್ರಮಟ್ಟದಲ್ಲೂ ಬೆಳೆಯಲು ಅವಕಾಶವಿದೆ’ ಎಂದರು.

‘2022ಕ್ಕೆ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 50 ಸಾವಿರ ಹಾಗೂ 2023ನೇ ಸಾಲಿಗೆ 1 ಲಕ್ಷ ದಾಟಬೇಕು. ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ವಿಶ್ವವಿದ್ಯಾಲಯ ಕೈಗೊಳ್ಳಬೇಕು’ ಎಂದು ಕುಲಪತಿ ಡಾ.ವಿದ್ಯಾಶಂಕರ್ ಅವರಿಗೆ ಉಪ ಮುಖ್ಯಮಂತ್ರಿ ಸೂಚಿಸಿದರು.

‘ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವ್ಯಾಪಕವಾದ ಪ್ರಚಾರ ಕೈಗೊಳ್ಳಬೇಕು. ಸಾಧ್ಯವಾದರೆ ಪ್ರತಿಷ್ಠಿತ ಅಥವಾ ಜನಪ್ರಿಯ ಸಿಲೆಬ್ರಿಟಿಯೊಬ್ಬರಿಂದ ದೃಶ್ಯ ರೂಪದ ಜಾಹೀರಾತು ಸಿದ್ಧಪಡಿಸಿ ಪ್ರಚಾರ ಮಾಡಿ, ವಿಶೇಷ ಅಭಿಯಾನ ಮಾಡಿ. ಆ ಮೂಲಕ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೂ ಒಳ್ಳೆಯ ಶೈಕ್ಷಣಿಕ ಬ್ರ್ಯಾಂಡ್‌ ಆಗಿ ಹೊರಹೊಮ್ಮಲಿ. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಇತರೆ ವಿಶ್ವವಿದ್ಯಾಲಯಗಳು, ಜಿಟಿಟಿಸಿ ಮುಂತಾದ ಶೈಕ್ಷಣಿಕ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಿ’ ಎಂದು ಅಶ್ವತ್ಥನಾರಾಯಣ ಸಲಹೆ ಮಾಡಿದರು.

‘ಮುಂದಿನ ದಿನಗಳಲ್ಲಿ ಆನ್‌ಲೈನ್‌ ಹಾಗೂ ದೂರಶಿಕ್ಷಣ ವ್ಯವಸ್ಥೆಗೆ ಹೆಚ್ಚೆಚ್ಚು ಬೇಡಿಕೆ ಬರಲಿದೆ. ಬದಲಾವಣೆ ಹಾಗೂ ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು. ಈ ವಿಶ್ವವಿದ್ಯಾಲಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿಸಲಾಗುವುದು’ ಎಂದರು.

‘ಈಗಾಗಲೇ ದೂರಶಿಕ್ಷಣವನ್ನು ಮೈಸೂರು ಮುಕ್ತ ವಿಶ್ವವಿದ್ಯಾಲಯ ಮಾತ್ರ ನೀಡಬೇಕು ಎಂಬ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಶಿಕ್ಷಣ ಕಾಟಾಚಾರಕ್ಕಲ್ಲ, ಗಂಭೀರವಾಗಿ ಕಲಿಯಬೇಕು. ಯಾವ ಉದ್ದೇಶಕ್ಕಾಗಿ ಈ ವಿವಿ ಸ್ಥಾಪನೆಯಾಗಿತ್ತೋ ಅದೇ ದಿಕ್ಕಿನಲ್ಲಿ ಮುನ್ನಡೆಸಲಾಗುವುದು. ಅದಕ್ಕಾಗಿ ಸರ್ಕಾರ ಎಲ್ಲ ಸಹಕಾರ ನೀಡಲಿದೆ’ ಎಂದರು.

ಹಾಜರಾತಿ ಕಡ್ಡಾಯ: ‘ಕೋವಿಡ್‌ ಬಂದ ಮೇಲೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ತಂತ್ರಜ್ಞಾನವನ್ನು ಬಳಸಿಕೊಂಡು ಎಲ್ಲಿದ್ದರೂ ಕಲಿಯುವ ವ್ಯವಸ್ಥೆ (ಲರ್ನ್‌ ಫ್ರಂ ಎನಿವೇರ್) ಜನಪ್ರಿಯವಾಗುತ್ತಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸುಗಳ ಮೂಲಕವಾದರೂ ಕಲಿಯಬಹುದು ಅಥವಾ ತರಗತಿಗಳೀಗೆ ನೇರವಾಗಿ ಹಾಜರಾಗಿಯಾದರೂ ಕಲಿಯಬಹುದು. ಯಾವುದೇ ಆದರೂ ವಿದ್ಯಾರ್ಥಿಯ ಹಾಜರಾತಿ ಮಾತ್ರ ಕಡ್ಡಾಯ’ ಎಂದು ಹೇಳಿದರು.

ಕುಲಸಚಿವ ಡಾ.ಲಿಂಗರಾಜ ಗಾಂಧಿ, ಮೌಲ್ಯಮಾಪನ ಕುಲಸಚಿವ ಅಶೋಕ ಕಾಂಬ್ಳೆ ಸೇರಿದಂತೆ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಮೈಸೂರಿನಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು