ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಜೆ. ಹಳ್ಳಿ ಗಲಭೆ ಪ್ರಕರಣ: ಮ್ಯಾಜಿಸ್ಟ್ರೀರಿಯಲ್‌ ವಿಚಾರಣೆ ಸೆ. 2ರಿಂದ

ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಠಾಣೆಗೆ ಜಿಲ್ಲಾಧಿಕಾರಿ ಭೇಟಿ
Last Updated 27 ಆಗಸ್ಟ್ 2020, 21:47 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ನಡೆದಿರುವ ಗಲಭೆ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೀರಿಯಲ್‌ ತನಿಖೆ ಆರಂಭವಾಗಿದ್ದು, ಇದೇ ಸೆ. 2ರಿಂದ ವಿಚಾರಣೆ ಶುರುವಾಗಲಿದೆ.

ಆಗಸ್ಟ್ 11ರಂದು ರಾತ್ರಿ ಗಲಭೆ ನಡೆದಿತ್ತು. ಅದರ ಮರುದಿನವೇ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಗುರುವಾರವೂ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ವಿಚಾರಣೆ ಆರಂಭಿಸಲು ಅಗತ್ಯವಿರುವ ಮತ್ತಷ್ಟು ಮಾಹಿತಿ ಕಲೆಹಾಕಿದರು.

ಗಲಭೆ ಸಂಬಂಧ ದಾಖಲಾದ ದೂರುಗಳ ಮಾಹಿತಿಯನ್ನು ಪೊಲೀಸರಿಂದ ಲಿಖಿತವಾಗಿ ಪಡೆದುಕೊಂಡ ಅವರು, ಘಟನೆ ದಿನದಂದು ಇದ್ದ ಪೊಲೀಸರು ಹಾಗೂ ಇತರರ ಹೇಳಿಕೆಗಳನ್ನೂ ಪರಿಶೀಲಿಸಿದರು. ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ದೂರುಗಳು ಹಾಗೂ ಇತರೆ ಸಾರ್ವಜನಿಕರು ನೀಡಿರುವ ದೂರುಗಳ ಮಾಹಿತಿಯನ್ನು ಪೊಲೀಸರು ಜಿಲ್ಲಾಧಿಕಾರಿ ಅವರಿಗೆ ನೀಡಿದರು.

ಠಾಣೆ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಶಿವಮೂರ್ತಿ, ‘ಗಲಭೆಯಲ್ಲಿ 35 ಪೊಲೀಸರಿಗೆ ಗಾಯವಾಗಿದೆ. ಗೋಲಿಬಾರ್‌ನಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಗಲಭೆ ಸಂಬಂಧ ಇದುವರೆಗೂ 380 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‘ ಎಂದರು.

‘ಗಲಭೆ ಬಗ್ಗೆ ಸಾರ್ವಜನಿಕರು ಸಾಕ್ಷಿ ಕೊಡಬಹುದು. ಅಂಥವರ ಹೆಸರನ್ನು ಗೋಪ್ಯವಾಗಿರಿಸಲಾಗುವುದು. ಮೂರು ತಿಂಗಳ ಒಳಗಾಗಿ ವರದಿ ನೀಡಲು ಸರ್ಕಾರ ಹೇಳಿದೆ. ಸೆ. 2ರಿಂದ ಮ್ಯಾಜಿಸ್ಟ್ರೀರಿಯಲ್ ವಿಚಾರಣೆ ನಡೆಯಲಿದೆ. ಹಲವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರೂ ಆಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಎಸ್.ರೇವಣಕರ್ ಹಾಗೂ ಬೆಂಗಳೂರು ಉತ್ತರ ತಹಶೀಲ್ದಾರ್ ಶಿವರಾಜ್ ಜೊತೆಗಿದ್ದರು.

ಇನ್‌ಸ್ಪೆಕ್ಟರ್‌, ಎಸಿಪಿ ಜೊತೆ ಚರ್ಚೆ

ಗಲಭೆ ಬಗ್ಗೆ ಇನ್‌ಸ್ಪೆಕ್ಟರ್ ಕೇಶವಮೂರ್ತಿ ಹಾಗೂ ಬಾಣಸವಾಡಿ ಉಪವಿಭಾಗದ ಡಿಸಿಪಿ ರವಿಪ್ರಸಾದ್ ಅವರ ಜೊತೆಯಲ್ಲಿ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಎರಡು ಗಂಟೆ ಚರ್ಚೆ ನಡೆಸಿದರು.

ಗಲಭೆ ಬಗ್ಗೆ ಮಾಹಿತಿ ಇರಲಿಲ್ಲವೇ ? ಠಾಣೆ ಬಳಿ ದೂರು ಕೊಡಲು ಬಂದಾಗ ಏನಾದರೂ ಲೋಪವಾಯಿತಾ ? ಠಾಣೆ ಎದುರು ಗಲಭೆಕೋರರ ಸಂಖ್ಯೆ ಹೆಚ್ಚಾದ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು ಯಾವಾಗ ? ಘಟನೆ ನಡೆದ ದಿನದಂದು ಯಾರೆಲ್ಲ ಇದ್ದರು?... ಸೇರಿದಂತೆ ಹಲವು ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಯವರು ಉತ್ತರ ಪಡೆದುಕೊಂಡರು.

ಗಲಭೆಹಿಂದಿರುವಶಕ್ತಿಗಳನ್ನು ಶಿಕ್ಷಿಸಿ

'ದೇಶಕ್ಕೆ ಕೊರೊನಾ ಸೋಂಕು ಕಾಲಿಟ್ಟ ನಂತರ 1.7 ಕೋಟಿ ಜನರಿಗೆ ಆಹಾರ ಮತ್ತು 40 ಲಕ್ಷ ಕುಟುಂಬಗಳಿಗೆ 15 ದಿನಗಳಿಗೆ ಆಗುವಷ್ಟು ದಿನಸಿ ವಿತರಿಸಲಾಗಿದೆ';ಎಂದು ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಸುಮಾರು 40 ಲಕ್ಷ ಜನರಿಗೆ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಸುಮಾರು ಎರಡು ಲಕ್ಷ ದನಕರುಗಳಿಗೆ ಹುಲ್ಲು ಮತ್ತು ನೀರು ಒದಗಿಸಲಾಗಿದೆ' ಎಂದರು.

ನಗರದಲ್ಲಿ ನಡೆದಗಲಭೆಪ್ರಕರಣದಲ್ಲಿ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಸಾಕಷ್ಟು ವಾಹನಗಳು, ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿಗೆ ಗಲಭೆಕೋರರಿಂದಲೇ ಪರಿಹಾರ ವಸೂಲಿ ಮಾಡಲು ಮುಂದಾಗಿರುವುದು ಒಳ್ಳೆಯ ನಿರ್ಧಾರ. ಇದೇ ರೀತಿಯಲ್ಲಿ ದೆಹಲಿ ಮತ್ತು ಇನ್ನಿತರ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ಗುಂಪುಗಳು ಅಥವಾ ಸಂಘಟನೆಗಳು ಹಿಂದೂ ಸಮಾಜದ ಮೇಲೆ ನಡೆಸುತ್ತಿರುವ ದೊಂಬಿ,ಗಲಭೆಮತ್ತು ಆಕ್ರಮಣಗಳನ್ನು ಅತ್ಯುಗ್ರವಾಗಿ ಶಿಕ್ಷಿಸಬೇಕು. ಈ ಗಲಭೆಗಳಹಿಂದಿರುವಶಕ್ತಿಗಳು ಮತ್ತು ವ್ಯಕ್ತಿಗಳ ಮೇಲೆ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು‘ ಎಂದು ಅವರು ಆಗ್ರಹಿಸಿದರು.

'ವಿನಾಕಾರಣ ಜಗಳಕ್ಕೆ ಬರುತ್ತಿರುವ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ಎಲ್ಲ ಚೀನೀ ವಸ್ತುಗಳನ್ನು ಬಹಿಷ್ಕರಿಸಬೇಕು. ಚೀನಾ ವಸ್ತುಗಳನ್ನು ಖರೀದಿಸಿದರೆ ಶತ್ರುವನ್ನು ನಾವೇ ಬಲಪಡಿಸಿದಂತೆ ಆಗುತ್ತದೆ'ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT