ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಜೆ.ಹಳ್ಳಿ ಗಲಭೆ ಪ್ರಕರಣ ಎಸ್‌ಡಿಪಿಐ ಸಂಚು: ವರದಿ

ಗುಂಡುಹಾರಿಸದೆ ಅನ್ಯ ಮಾರ್ಗ ಇರಲಿಲ್ಲ: ಉಲ್ಲೇಖ
Last Updated 28 ಡಿಸೆಂಬರ್ 2022, 0:15 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಂಗಳೂರು ನಗರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 2020ರ ಆಗಸ್ಟ್‌ 11ರಂದು ನಡೆದ ಅಹಿತಕರ ಘಟನೆಗೆ ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಸದಸ್ಯರ ಸಂಚು ಕಾರಣ’ ಎಂದು ಈ ಪ್ರಕರಣದ ಬಗ್ಗೆ ವಿಚಾರಣೆಗೆ ನೇಮಿಸಿದ್ದ ಮ್ಯಾಜಿಸ್ಟೀರಿಯಲ್‌ ವರದಿ ಹೇಳಿದೆ.

‘ಗನ್‌ ಕಿತ್ತುಕೊಂಡು ದಾಳಿ ನಡೆಸಲು ಗಲಭೆಕೋರರು ಪ್ರಯತ್ನಿಸಿದ್ದರಿಂದ ಆತ್ಮರಕ್ಷಣೆ, ಸಾರ್ವಜನಿಕರ ಆಸ್ತಿ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ನೇರ ಗುಂಡಿನ ದಾಳಿ ನಡೆಸುವುದಲ್ಲದೆ ಪೊಲೀಸರಿಗೆ ಅನ್ಯಮಾರ್ಗ ಇರಲಿಲ್ಲ. ಈ ಕ್ರಮ ನ್ಯಾಯೋಚಿತವಾಗಿದೆ’ ಎಂದು ಪ್ರತಿಪಾದಿಸಿರುವ ವರದಿಯು, ‘ಎಸ್‌ಡಿಪಿಐ ಸದಸ್ಯರು ಭಯೋತ್ಪಾದನಾ ಸಂಘಟನೆಗಳ ಸದಸ್ಯರಂತೆ ವರ್ತಿಸಿ, ಸಾರ್ವಜನಿಕರ ಹಾಗೂ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯಲ್ಲಿ ಭಯ ಹುಟ್ಟಿಸಲು ಸಂಚು ಹೂಡಿದ್ದರು’ ಎಂದೂ ವರದಿ ಉಲ್ಲೇಖಿಸಿದೆ.

ಈ ಘಟನೆಯಲ್ಲಿ, ಡಿ.ಜೆ. ಹಳ್ಳಿ ನಿವಾಸಿಗಳಾದ ಯಾಸಿನ್‌ ಪಾಷಾ (21), ವಾಜೀದ್‌ ಖಾನ್‌ (21), ಕೆ.ಜಿ. ಹಳ್ಳಿ ನಿವಾಸಿ ಶೇಕ್‌ ಸಿದ್ದಿಕ್‌ (25) ಮೃತಪಟ್ಟಿದ್ದರು. ಮೃತರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಮತ್ತು ಸನ್ನಿವೇಶಗಳ ಬಗ್ಗೆ ಮ್ಯಾಜಿಸ್ಟೀರಿಯಲ್‌ ವಿಚಾರಣೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿಯನ್ನು ನೇಮಿಸಿ ರಾಜ್ಯ ಸರ್ಕಾರ 2020ರ ಆಗಸ್ಟ್‌ 13ರಂದು ಆದೇಶಿಸಿತ್ತು.

ಇದೇ 22ರಂದು ನಡೆದ ಸಚಿವ ಸಂಪುಟಯಲ್ಲಿ ಮ್ಯಾಜಿಸ್ಟೀರಿಯಲ್‌ ವಿಚಾರಣಾ ವರದಿಗೆ ಅನುಮೋದನೆ ನೀಡಲಾಗಿದೆ. ವರದಿಯ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ನವೀನ್‌ ಎಂಬಾತನ ಫೇಸ್‌ಬುಕ್‌ ಸಂದೇಶದಿಂದ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ಆರಂಭವಾದ ಗಲಭೆಯು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ನಗರದ ಇತರ ಮತೀಯ ಸೂಕ್ಷ್ಮ ಪ್ರದೇಶಗಳಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿತ್ತು. ಇನ್ನೂ ಹೆಚ್ಚಿನ ಪ್ರಾಣಹಾನಿ, ಆಸ್ತಿಪಾಸ್ತಿಗಳ ಹಾನಿಗಳನ್ನು ತಡೆಯುವುದು ಅನಿವಾರ್ಯವಾಗಿತ್ತು. ಸಾರ್ವಜನಿಕರ ಹಾಗೂ ಪೊಲೀಸರ ಪ್ರಾಣ ರಕ್ಷಣೆ, ಕಾನೂನು – ಸುವ್ಯವಸ್ಥೆ ಕಾಪಾಡಲು ಪೊಲೀಸರು ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದರು.

ತ್ರಿವಳಿ ತಲಾಖ್‌, ಗೋ ಹತ್ಯೆ ನಿಷೇಧ ಮತ್ತು ರಾಮ ಜನ್ಮಭೂಮಿಗೆ ಸಂಬಂಧಿಸಿದ ನ್ಯಾಯಾಲಯದ ಆದೇಶಗಳು ಹಾಗೂ ಸರ್ಕಾರದ ನಿಲುವುಗಳ ವಿರುದ್ಧ ಪ್ರತಿಭಟನೆ ನಡೆಸಲು ದುಷ್ಕರ್ಮಿಗಳು ಪೂರ್ವನಿಯೋಜಿತ ಪಿತೂರಿ ನಡೆಸಿದ್ದರು.

ವರದಿಯ ಅಂತಿಮ ನಿರ್ಣಯ

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಮತ್ತು ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಲು ದುಷ್ಕರ್ಮಿಗಳು ಉದ್ರಿಕ್ತರ ಗುಂಪನ್ನು ಪ್ರಚೋದಿಸುತ್ತಿದ್ದರು. ಗಲಭೆ ಶುರುವಾದಾಗ ಗುಂಪನ್ನು ಚದುರಿಸಲು ಪ್ರಯತ್ನಿಸಿದರೂ ಉದ್ರಿಕ್ತ ಗುಂಪು ಚದುರದೇ ಪೊಲೀಸರ ಮೇಲೆ ದಾಳಿ ನಡೆಸುತ್ತಾ ವಾಹನಗಳನ್ನು, ಆಸ್ತಿಗಳನ್ನು ನಾಶಪಡಿಸುತ್ತಾ ಭಯಾನಕ ವಾತಾವರಣ ನಿರ್ಮಿಸಿತ್ತು.

ಗಲಭೆಯು ನಗರದ ಇತರ ಮತೀಯ ಸೂಕ್ಷ್ಮಪ್ರದೇಶಗಳಿಗೆ ಹರಡುವ ಸಾಧ್ಯತೆಗಳು ಹೆಚ್ಚಿದ್ದರಿಂದ ಪರಿಸ್ಥಿತಿಯನ್ನು ಸಂಪೂರ್ಣ ಹತೋಟಿಗೆ ತರುವುದು ಅನಿವಾರ್ಯವಾಗಿತ್ತು.‌ ಗಲಭೆ ನಿರತರ ಕಡೆಗೆ ನೇರವಾಗಿ ಗುಂಡು ಹಾರಿಸಿದ್ದು, ಪೊಲೀಸ್‌ ಕಾರ್ಯಾಚರಣೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿದೆ.

ಶಾಸಕರ ಮನೆಗೆ ದಾಳಿ ಪ್ರಸ್ತಾಪವೇ ಇಲ್ಲ!

ನವೀನ್‌ ಎಂಬಾತ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಎಂಬ ಕಾರಣಕ್ಕೆ ಶಾಸಕರ ಮನೆ ಮೇಲೆ ಗಲಭೆಕೋರರು ದಾಳಿ ನಡೆಸಿ, ಧ್ವಂಸ ಮಾಡಿದ್ದರು. ಈ ಘಟನೆಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡ, ಮಾಜಿ ಮೇಯರ್‌ ಸಂಪತ್‌ರಾಜ್‌ ಅವರ ಕುಮ್ಮಕ್ಕೂ ಕಾರಣ ಎಂದೂ ಆರೋಪಿಸಲಾಗಿತ್ತಲ್ಲದೇ, ಸಂಪತ್ ರಾಜ್ ಅವರನ್ನು ಬಂಧಿಸಲಾಗಿತ್ತು. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ವಿರೋಧಿಸಲಿಲ್ಲ ಎಂಬ ವಿಷಯ ಮುಂದಿಟ್ಟು ಬಿಜೆಪಿ ನಾಯಕರು ದೊಡ್ಡ ಹೋರಾಟವನ್ನೇ ನಡೆಸಿದ್ದರು.

ಆದರೆ, ಸಚಿವ ಸಂಪುಟದ ಮುಂದೆ ಮಂಡಿಸಿದ ಮ್ಯಾಜಿಸ್ಟೀರಿಯಲ್‌ ವಿಚಾರಣಾ ವರದಿಯ ಅಂತಿಮ ನಿರ್ಣಯದ ಸಾರಾಂಶದಲ್ಲಿ ಈ ಯಾವುದೇ ವಿಷಯದ ಉಲ್ಲೇಖವೇ ಇಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT