ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತ ಮೇಲೆ ಇವರೇನು ದುಡ್ಡು ಕೊಡೋದು?: ಸರ್ಕಾರದ ವಿರುದ್ಧ ಡಿಕೆಶಿ ಕಿಡಿ

ಸಾವಿನ ಮನೆಯಲ್ಲಿ ರಾಜಕೀಯ ಬೇಡ: ಸುಧಾಕರ್‌ ತರಾಟೆ
Last Updated 21 ಆಗಸ್ಟ್ 2020, 20:59 IST
ಅಕ್ಷರ ಗಾತ್ರ

ಬೆಂಗಳೂರು: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಆತ್ಮಹತ್ಯೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಧ್ಯೆ ಮಾತಿನ ಜಟಾಪಟಿ ನಡೆದಿದೆ.

‘ವ್ಯಕ್ತಿ ಸತ್ತ ಮೇಲೆ ಇವರೇನು ಕೊಡುವುದು? ಆ ಹೆಣ್ಣುಮಗಳು ಇವರ ಬಳಿ ದುಡ್ಡು ಕೊಡಿ ಅಂತ ಕೇಳಿದರಾ? ದುಡ್ಡೇ ಪರಿಹಾರವಲ್ಲ’ ಎಂದು ಶಿವಕುಮಾರ್ ಕಿಡಿ ಕಾರಿದ್ದರೆ, ‘ಸಾವಿನ ಮನೆಯಲ್ಲಿ ರಾಜಕೀಯ ಮಾಡೋದು ನಿಮ್ಮ ವಿಕೃತಿ. ನಮ್ಮದು ಸಾಂತ್ವನ ಹೇಳುವ ಸುಸಂಸ್ಕೃತಿ’ ಎಂದು ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ.

ಹಣದಿಂದ ನ್ಯಾಯ ಸಿಗಲ್ಲ: ವೈದ್ಯಾಧಿಕಾರಿ ಕುಟುಂಬಕ್ಕೆ ₹50 ಲಕ್ಷ ಹಣ ಕೊಟ್ಟ ತಕ್ಷಣ ನ್ಯಾಯ ಸಿಗುವುದಿಲ್ಲ. ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

‘ವೈದ್ಯಾಧಿಕಾರಿಯ ಸಾವಿಗೆ ನೀವು ₹50 ಲಕ್ಷನಾದ್ರೂ ಕೊಡಿ, ₹1 ಕೋಟಿಯಾದರೂ ಕೊಡಿ. ಅವರ ಕುಟುಂಬ ನಿಮ್ಮ ಹಣಕ್ಕಾಗಿ ಕಾದು ಕುಳಿತಿಲ್ಲ. ವೈದ್ಯಾಧಿಕಾರಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಕಾರಣಕರ್ತರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಮುಖ್ಯ’ ಎಂದಿದ್ದಾರೆ.

‘ಆ ಹೆಣ್ಣುಮಗಳಿಗೆ ನ್ಯಾಯ ಒದಗಿಸಿಕೊಡಬೇಕು. ಅವರ ಈ ಸ್ಥಿತಿಗೆ ಕಾರಣವಾದವರಿಗೆ ಶಿಕ್ಷೆ ಆಗಬೇಕು. ಮಾಧ್ಯಮಗಳು ಆಡಿಯೊ ಪ್ರಸಾರ ಮಾಡಿದ ಮೇಲೂ ಮುಖ್ಯಮಂತ್ರಿಗಳು ಯಾಕೆ ಯೋಚಿಸುತ್ತಿದ್ದಾರೆ’ ಎಂದೂ ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಾ.ಸುಧಾಕರ್‌, ‘ನಾನೂ ಕೂಡ ಒಬ್ಬ ವೈದ್ಯನಾಗಿ, ಸರ್ಕಾರದ ಪ್ರತಿನಿಧಿಯಾಗಿ, ಈ ಸಂಕಷ್ಟ ಕಾಲದಲ್ಲಿ ನಾಗೇಂದ್ರ ಅವರ ಕುಟುಂಬಕ್ಕೆ ಮತ್ತು ವೈದ್ಯಸಮೂಹಕ್ಕೆ ಸಹಾನುಭೂತಿ, ನೈತಿಕ ಸ್ಥೈರ್ಯ ತುಂಬಲಿಕ್ಕೆ ಹೋಗಿದ್ದೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿ ನನಗೆ ಅಭ್ಯಾಸವಿಲ್ಲ’ ಎಂದು ಹೇಳಿದ್ದಾರೆ.

‘ನಾಗೇಂದ್ರ ಅವರ ಪ್ರಕರಣ ಮುಚ್ಚಿ ಹಾಕೋದು ನಮ್ಮ ಕಾರ್ಯ ವೈಖರಿಯಲ್ಲ. ಅವೆಲ್ಲ ನಿಮ್ಮ ಕಾರ್ಯಗಳು. ಸಾವಿನ ಮನೆಗೆ ಸಾಂತ್ವನ ಹೇಳಲು ಹೋದಾಗ, ಕೆಲವರು, ಕೆಲವರ ನಿರ್ದೇಶನದಂತೆ ಅಲ್ಲಿಗೆ ಬಂದಿದ್ದರೇ ಹೊರತು, ನೋವು ಹಂಚಿಕೊಳ್ಳಲು ಅಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT