ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡು ಮುಟ್ಟದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ಮಾಡದ ಕ್ಷೇತ್ರವಿಲ್ಲ: ಡಿಕೆಶಿ

Last Updated 27 ಆಗಸ್ಟ್ 2022, 12:47 IST
ಅಕ್ಷರ ಗಾತ್ರ

ಬೆಂಗಳೂರು: 'ಆಡು ಮುಟ್ಟದ ಸೊಪ್ಪಿಲ್ಲ, ಬಿಜೆಪಿ ಮಾಡದ ಭ್ರಷ್ಟಾಚಾರ ಕ್ಷೇತ್ರವಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಸರ್ಕಾರವನ್ನು ಶನಿವಾರ ಟೀಕಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಿತಿ ಮೀರಿದ ಭ್ರಷ್ಟಾಚಾರ, ಕಿರುಕುಳದ ಪರಿಣಾಮ ರಾಜ್ಯದ ಹಲವು ಖಾಸಗಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಆರೋಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ಈ ಬಗ್ಗೆ ‘‘ಶಿಕ್ಷಣ ಇಲಾಖೆ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ದೂರು’’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಡಿ.ಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಶಿಕ್ಷಣ ಕ್ಷೇತ್ರಕ್ಕೂ ನುಸುಳಿರುವುದು ನಾಚಿಕೆಗೇಡು. ಮಾನ್ಯತೆ ನವೀಕರಣಕ್ಕೂ ಹಣಕ್ಕಾಗಿ ಕೈಚಾಚುತ್ತಿರುವ ಬಿಜೆಪಿಯು ಆಡಳಿತವೆಂದರೆ ದುಡ್ಡು ಮಾಡುವ ದಂಧೆ ಎಂದು ತಿಳಿದಿದೆ. 'ಆಡು ಮುಟ್ಟದ ಸೊಪ್ಪಿಲ್ಲ, ಬಿಜೆಪಿ ಮಾಡದ ಭ್ರಷ್ಟಾಚಾರ ಕ್ಷೇತ್ರವಿಲ್ಲ' ಎನ್ನುವುದು ಈಗಿನ ಕಹಿ ವಾಸ್ತವ’ ಎಂದು ಟೀಕಿಸಿದ್ದಾರೆ.

‘ಲಂಚ ಕೊಡದೇ ಶಾಲೆಗಳ ಮಾನ್ಯತೆ ನವೀಕರಣ ಮಾಡುತ್ತಿಲ್ಲ. ಆರ್‌ಟಿಇ ಶುಲ್ಕ ಬಿಡುಗಡೆ ಮಾಡಿಲ್ಲ. ಅನ್ಯ ಪಠ್ಯಕ್ರಮ ಅನುಸರಿಸಲು ಎನ್‌ಒಸಿ ಕೊಡುತ್ತಿಲ್ಲ. ದಾಖಲೆಗಳ ಪರಿಶೀಲನೆ ನೆಪದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ, ವಸೂಲಿ ದಂಧೆ ನಡೆಸುತ್ತಿದ್ದಾರೆ. ಸಚಿವರಿಗೆ ನೀಡಿದ ಮನವಿಗಳು ಕಸದ ಬುಟ್ಟಿ ಸೇರಿವೆ’ ಎಂದು ರುಪ್ಸಾ ತನ್ನ ಪತ್ರದಲ್ಲಿ ದೂರಿದೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT