ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಮೇಲೆ ಕಣ್ಣಿಡಿ: ಪಕ್ಷದ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್‌ ಸೂಚನೆ

Last Updated 16 ನವೆಂಬರ್ 2021, 16:27 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯದವರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ ಮತದಾರರ ಪಟ್ಟಿಯ ಮೇಲೆ ಕಣ್ಣಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮತದಾರರ ಪಟ್ಟಿಯಿಂದ ಕಿತ್ತು ಹಾಕಿರುವ ಹೆಸರುಗಳ ಪರಿಶೀಲನೆಗಾಗಿ ಪಕ್ಷದ ಮುಖಂಡ ನಜೀರ್‌ ಅಹ್ಮದ್‌ ಅವರನ್ನು ನೇಮಕ ಮಾಡಲಾಗುವುದು. ಪಕ್ಷದ ಕಾರ್ಯಕರ್ತರೂ ಈ ಬಗ್ಗೆ ಎಚ್ಚರದಿಂದ ಕೆಲಸ ಮಾಡಬೇಕು. ಸ್ಥಳೀಯವಾಗಿ ಸಮಿತಿಗಳನ್ನು ರಚಿಸಿಕೊಂಡು ಕೆಲಸ ಮಾಡಬೇಕು’ ಎಂದರು.

ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಏಕತೆ ಪ್ರದರ್ಶಿಸಿದರು. ಮುಂದೆಯೂ ಅದೇ ರೀತಿ ಗಟ್ಟಿಯಾದ ನಿಲುವು ತಾಳಬೇಕು. ಎಲ್ಲ ವರ್ಗದವರೂ ಒಗ್ಗೂಡಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ವಾತಾವರಣವನ್ನು ನಿರ್ಮಿಸಬೇಕು ಎಂದು ಹೇಳಿದರು.

‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರು ಪ್ರದರ್ಶಿಸಿದ ಸೇವಾ ಮನೋಭಾವ ಮಾದರಿಯಾದುದು. ಸರ್ಕಾರವೇ ಬಳ್ಳಾರಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಹೇಗೆ ಎಸೆದಿತ್ತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆದರೆ, ಅಲ್ಪಸಂಖ್ಯಾತ ಯುವಕರು ಧೈರ್ಯದಿಂದ ಮೃತದೇಹಗಳ ಗೌರವಯುತ ಅಂತ್ಯಸಂಸ್ಕಾರ ನಡೆಸಿರುವುದು ಶ್ಲಾಘನೀಯ’ ಎಂದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಎರಡು ಬಾರಿ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಹಾಳು ಮಾಡಿದ್ದಾರೆ. ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ದೇಶವನ್ನೇ ನಾಶ ಮಾಡುತ್ತಾರೆ. ಮತ್ತೆ ಅವರು ಅಧಿಕಾರಕ್ಕೇರದಂತೆ ತಡೆಯಲು ಎಲ್ಲರೂ ಒಗ್ಗೂಡಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಕಾಂಗ್ರೆಸ್‌ ಎಲ್ಲ ಸಂದರ್ಭಗಳಲ್ಲೂ ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಣೆಗೆ ಕೆಲಸ ಮಾಡುತ್ತಿರುವ ಪಕ್ಷ. ಜಾತ್ಯತೀತ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುವ ನಮ್ಮ ಪಕ್ಷ ಮುಂದೆಯೂ ಎಲ್ಲ ಜನರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡಲಿದೆ’ ಎಂದರು.

ಎಐಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್‌ ಪ್ರತಾಪ್‌ಗಡಿ, ಶಾಸಕರಾದ ಎಚ್‌.ಕೆ. ಪಾಟೀಲ, ಎನ್‌.ಎ. ಹ್ಯಾರೀಸ್‌ ಮಾತನಾಡಿದರು.

ಸಿದ್ದರಾಮಯ್ಯಗೆ ಜೈಕಾರ

ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಡವಾಗಿ ಸಮಾರಂಭಕ್ಕೆ ಬಂದರು. ಅವರು ಸಭಾಂಗಣ ಪ್ರವೇಶಿಸುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಜೋರಾಗಿ ಜೈಕಾರ ಕೂಗಲಾರಂಭಿಸಿದರು. ಸ್ವಾಗತ ಭಾಷಣ ಮಾಡುತ್ತಿದ್ದ ಶಾಸಕ ಎನ್‌.ಎ. ಹ್ಯಾರೀಸ್‌ ಕೂಡ ಸಿದ್ದರಾಮಯ್ಯ ಅವರನ್ನು ಹೊಗಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT